More

    ರಸ್ತೆಯಲ್ಲೇ ಕಣ, ಸಂಚಾರಕ್ಕೆ ಕಿರಿಕಿರಿ: ಅಪಘಾತ ಸಂಭವಿಸುವ ಸಾಧ್ಯತೆ

    ಹಾರೋಹಳ್ಳಿ: ರೈತರು ರಾಗಿ ಬೆಳೆ ಕೊಯ್ಲು ಮಾಡಿ ರಸ್ತೆಯನ್ನೇ ಕಣ ಮಾಡಿಕೊಂಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಈ ಮೊದಲು ಹೊಲದ ಬಳಿಯೇ ಕಣ ಮಾಡಿ ಒಕ್ಕಣೆ ಮಾಡುತ್ತಿದ್ದರು. ಆದರೆ, ಈಗ ರಸ್ತೆಗಳನ್ನು ಕಣವನ್ನಾಗಿ ಮಾಡಿಕೊಂಡಿರುವುದರಿಂದ ವಾಹನ ಚಲಾಯಿಸಲು ಹೈರಾಣಾಗುವಂತಾಗಿದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ದಬಾಯಿಸಿ ಕಳುಹಿಸುತ್ತಾರೆ. ರಾಗಿ ತೂರುವಾಗ ಹೊಟ್ಟು ಸವಾರರ ಕಣ್ಣಿಗೆ ಬಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದ್ದು, ಜತೆಗೆ ರಾಗಿ ಮತ್ತು ಹುಲ್ಲಿನ ಮೇಲೆ ವಾಹನಗಳು ಚಲಿಸಿದಾಗ ಜಾರಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಿ, ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕೆಲ ರೈತರು ರಾಜಾರೋಷವಾಗಿ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದಾರೆ.

    ರೈತರ ಮನವೊಲಿಸಲಿ

    ರೈತರಿಗೆ ತೊಂದರೆಯಾದಾಗ ಪ್ರತಿಭಟಿಸುವ ರೈತ ಮುಖಂಡರು ರಸ್ತೆಯಲ್ಲಿ ಕಣ ಮಾಡಿಕೊಂಡು ಒಕ್ಕಣೆ ಮಾಡುತ್ತಿರುವವರ ಮನವೊಲಿಸಿ ದ್ವಿಚಕ್ರ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಲಿ. ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಿ ಜೀವ ಉಳಿಸುವ ಕೆಲಸ ಮಾಡಲಿ ಎನ್ನುವುದು ವಾಹನ ಸವಾರರ ಅಭಿಪ್ರಾಯವಾಗಿದೆ.

    ರೈತರು ತಮಗೆ ಅನುಕೂಲವಾಗಲೆಂದು ಬೇರೆಯವರಿಗೆ ತೊಂದರೆ ನೀಡುವುದು ಎಷ್ಟು ಸರಿ. ರಸ್ತೆಗಳಲ್ಲಿ ಒಕ್ಕಣೆ ಮಾಡುವುದನ್ನು ಬಿಡಲಿ.

    | ಕೃಷ್ಣಪ್ಪವಾಹನ ಸವಾರ

    ರಸ್ತೆಗಳಲ್ಲಿ ರಾಗಿ ಹುಲ್ಲು ಹಾಕಿ ಒಕ್ಕಣೆ ಮಾಡುತ್ತಿರುವುದು ಗಮಕ್ಕೆ ಬಂದಿಲ್ಲ. ನಮ್ಮ ವ್ಯಾಪ್ತಿಯ ಸಬ್ ಇನ್​ಸ್ಪೆಕ್ಟರ್​ಗಳಿಗೆ ಈ ರೀತಿ ಕಂಡುಬಂದರೆ ದೂರು ದಾಖಲಿಸುವಂತೆ ಸೂಚಿಸಲಾಗುವುದು.

    | ಪ್ರಕಾಶ್ ಸರ್ಕಲ್ ಇನ್​ಸ್ಪೆಕ್ಟರ್, ಕನಕಪುರ

    ರೈತರು ರಸ್ತೆಗಳಲ್ಲಿ ಕಣ ಮಾಡಿಕೊಂಡು ರಾಗಿ ಮತ್ತು ಇತರ ಬೆಳೆಗಳನ್ನು ಹಾಕಿಕೊಂಡು ಒಕ್ಕಣೆ ಮಾಡುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳು ಇದರತ್ತ ಗಮನಹರಿಸಿ, ಪ್ರಕರಣ ದಾಖಲಿಸಿ ಸಮಸ್ಯೆ ಬಗೆಹರಿಸಬೇಕು.

    | ರಮೇಶ್ ದ್ವಿಚಕ್ರ ವಾಹನ ಸವಾರ, ದೊಡ್ಡಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts