More

  ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಹೋರಾಟ

  ಪಾಂಡವಪುರ: ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ಎಚ್ಚರಿಸಿದರು.

  ಬಿಜೆಪಿ ರೈತ ಮೋರ್ಚಾ ನಿಯೋಗ ಜತೆಗೆ ತಾಲೂಕಿನ ನಾರ್ಥ್‌ಬ್ಯಾಂಕ್‌ನ ಶೂನ್ಯ ಪಾಯಿಂಟ್‌ನಿಂದ ಸುಮಾರು 20 ಕಿ.ಮೀ. ಉದ್ದದ ನಾಲಾ ಆಧುನೀಕರಣ ಕಾಮಗಾರಿಯನ್ನು ಮಂಗಳವಾರ ಪರಿಶೀಲನೆ ನಡೆಸಿದ ಬಳಿಕ ನೀರಾವರಿ ಇಲಾಖೆ ಮತ್ತು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಂದ ಕಾಮಗಾರಿ ಗುಣಮಟ್ಟ ಹಾಗೂ ವೇಗದ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿದರು.

  ಹಲವು ಹೋರಾಟಗಳಿಗೆ ಸಾಕ್ಷಿಯಾದ ಜಿಲ್ಲೆಯಲ್ಲಿ ಕಣ್ಮುಂದೆಯೇ ಅನಾಚಾರ ನಡೆಯುತ್ತಿದೆ. 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗೆ 330 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಕೊಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆ ಾಗುತ್ತಿಲ್ಲ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

  ಕಳೆದ ಹಂಗಾಮಿನಲ್ಲೂ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾಮಗಾರಿ ಪ್ರಗತಿ ಅವಲೋಕಿಸಿದರೆ ಈ ಹಂಗಾಮಿನಲ್ಲೂ ಬೆಳೆ ಬೆಳೆಯುವುದು ಅಸಾಧ್ಯ. ಹೀಗಾಗಿ ನಾಲಾ ಅಚ್ಚಕಟ್ಟು ವ್ಯಾಪ್ತಿಯ ರೈತರಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರ ರೈತರ ಪರ ಕಾಳಜಿ ತೋರದಿದ್ದರೆ ಬಿಜೆಪಿ ರೈತ ಮೋರ್ಚಾ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಗುತ್ತಿಗೆದಾರ ಸಂಸ್ಥೆ ಸ್ಟಾರ್ ಇನ್ಫೋಟೆಕ್ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಸೇರಿದ್ದಾಗಿದ್ದು, ಕಾಂಗ್ರೆಸ್ ಮುಖಂಡರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡಿದ್ದಾರೆ. ಸರ್ಕಾರ ಕಾಮಗಾರಿ ಗುಣಮಟ್ಟದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ನಾವು ಈ ಬಗ್ಗೆ ಚರ್ಚೆಗೆ ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.

  ಸಚಿವರು ರಾಜೀನಾಮೆ ನೀಡಲಿ: ಜಿಲ್ಲೆಯ ರೈತರ ಮತ ಪಡೆದು ಅಧಿಕಾರಕ್ಕೆ ಬಂದವರು ಹಾಗೂ ರೈತರ ಹೆಸರೇಳಿಕೊಂಡು ಶಾಸಕರಾಗಿ ಆಯ್ಕೆಯಾದ ದರ್ಶನ್ ಪುಟ್ಟಣ್ಣಯ್ಯ ಅವರು ಶಾಸನ ಸಭೆಯಲ್ಲಿ ಈ ವಿಚಾರದ ಬಗ್ಗೆ ಚಕಾರ ಎತ್ತಿಲ್ಲ. ಇಲ್ಲಿನ ರೈತ ಸಂಘದ ಮುಖಂಡರು ಕಾಂಗ್ರೆಸ್ ಜತೆ ಶಾಮೀಲು ಆಗಿ ನಾಲಾ ಆಧುನೀಕರಣ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಜಿಲ್ಲೆಯ ರೈತರು ರೈತ ಮೋರ್ಚಾಕ್ಕೆ ದೂರು ನೀಡಿ ಹೋರಾಟ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮಳೆ ಆಧಾರಿತ ಬೆಳೆ ಬೆಳೆಯುವಂತೆ ಹೇಳುವ ಮೂಲಕ ನಿರ್ಲಕ್ಚ್ಯ ಮತ್ತು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲದ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.

  ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಮು ಮಾತನಾಡಿ, ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಚುನಾವಣೆ ಸಂದರ್ಭದಲ್ಲೇ ಒತ್ತಾಯಿಸಿದ್ದೆವು. ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ಮಾರ್ಚ್ ತಿಂಗಳಿನಿಂದ ಕಾಮಗಾರಿ ಪ್ರಾರಂಭಿಸಿ ಮೇ ತಿಂಗಳಾಂತ್ಯಕ್ಕೆ ಕಾಮಗರಿ ಪೂರ್ಣಗೊಳಿಸಲಾಗುವುದು ಎಂದು ಕಿವಿ ಮೇಲೆ ಹೂವು ಇಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. 46 ಕಿ.ಮೀ. ನಾಲೆ ಕಾಮಗಾರಿ ಆಗಬೇಕಿದ್ದು, ಈ ಪೈಕಿ ಕೇವಲ 18 ಕಿ.ಮೀ. ಪೂರ್ಣಗೊಳಿಸಲಾಗಿದೆ. 10 ದಿನಗಳಲ್ಲಿ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ? ಈಗಾಗಲೇ ಮುಂಗಾರು ಹಂಗಾಮಿಗೆ ನೀರು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ರೈತರು ಇದ್ದಾರೆ. ಜತೆಗೆ ಬಲವಂತವಾಗಿ ನೀರು ಕೇಳಿದರೆ ಕಾಮಗಾರಿ ವೇಗ ಹೆಚ್ಚಿಸುವ ಸಲುವಾಗಿ ಮತ್ತಷ್ಟು ಕಳಪೆ ಮಾಡುತ್ತಾರೆ ಎಂಬ ಭಯವೂ ಇದೆ. ಕಾಮಗಾರಿ ಕಳಪೆಯಾಗಿದ್ದು, ಸಮಾಧಾನ ತರುತ್ತಿಲ್ಲ ಎಂದು ರೈತ ಸಂಘಟನೆಯ ಮುಖಂಡರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ಅನಿವಾರ್ಯವಾಗಲಿದೆ ಎಂದರು.

  ಮುಖಂಡರಾದ ಕ್ಷೇತ್ರಾಧ್ಯಕ್ಷ ಧನಂಜಯ, ಮಾಜಿ ಅಧ್ಯಕ್ಷ ಎಲ್.ಅಶೋಕ್, ಮುಖಂಡರಾದ ಮಳವಳ್ಳಿ ಅಶೋಕ್, ಚಿನಕುರಳಿ ವಿಶ್ವನಾಥ್, ಡೇರಿ ರಾಮಲಿಂಗಂ, ಎಂ.ರಾಜ್‌ಕುಮಾರ್, ಜೋಗೀಗೌಡ, ಕನ್ನಂಬಾಡಿ ಸುರೇಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts