More

    ದ್ವಿಚಕ್ರ ವಾಹನದಲ್ಲಿ ಒಬ್ಬರೇ ಸಂಚರಿಸಲು ಅನುಮತಿ

    ಬೆಳಗಾವಿ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾ.31ರ ವರೆಗೆ ಬೈಕ್ ಮೇಲೆ ಒಬ್ಬರು ಹಾಗೂ ಕಾರಿನಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋದರೆ ಕೇಸ್ ದಾಖಲಿಸಲಾಗುವುದು ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ (ಐಜಿ) ರಾಘವೇಂದ್ರ ಸುಹಾಸ ಎಚ್ಚರಿಸಿದರು.

    ಬೆಳಗಾವಿಯ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಬೆಳಗಾವಿ, ಧಾರವಾಡ ಸೇರಿ ರಾಜ್ಯದ 9 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಿದೆ. ಹಾಗಾಗಿ ಉತ್ತರ ವಲಯ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸುಖಾಸುಮ್ಮನೆ ಬೈಕ್‌ಗಳ ಮೇಲೆ ಜನರು ಓಡಾಡುವಂತಿಲ್ಲ. ಕರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಬೈಕ್ ಮೇಲೆ ಒಬ್ಬರು ಹಾಗೂ ಕಾರ್‌ಗಳಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು. ತರಕಾರಿ, ಹಾಲು ಹಾಗೂ ಇನ್ನಿತರ ವಸ್ತುಗಳನ್ನು ಸಾಗಣೆ ಮಾಡುವ ವಾಹನಗಳಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರ ಇರಬೇಕು. ಇವರನ್ನು ಹೊರತುಪಡಿಸಿ ಹೆಚ್ಚುವರಿ ಜನರು ಕಂಡುಬಂದರೆ ವಾಹನವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ನಿಯಮ ಉಲ್ಲಂಘಿಸಿದರೆ ಜಾಮೀನು ಸಿಗದಂತೆ ಕೇಸ್ ದಾಖಲಿಸಲಾಗುವುದು.

    ಅಗತ್ಯ ವಸ್ತುಗಳಿಗೆ ವಿನಾಯಿತಿ: ಗ್ರಾಮೀಣ ಪ್ರದೇಶದಲ್ಲಿ ವಾರದ ಸಂತೆ, ಜಾತ್ರೆ ಹಾಗೂ ಸಭೆ-ಸಮಾರಂಭವನ್ನು ನಿಷೇಧಿಸಲಾಗಿದೆ. ಹಾಲು, ಪತ್ರಿಕೆ, ತರಕಾರಿ, ಔಷಧ ಹಾಗೂ ದಿನಸಿ ವಸ್ತುಗಳ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಈಗಾಗಲೇ ಜನತಾ ಕರ್ಫ್ಯೂ ಉಲ್ಲಂಘಿಸಿರುವ ಬಗ್ಗೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಹಾಗೂ ಕಿತ್ತೂರು ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿ ಮದ್ಯದ ಅಂಗಡಿಗಳು ಹಾಗೂ ಇನ್ನಿತರ ವ್ಯಾಪಾರ-ವಹಿವಾಟು ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಹಾಸ ಎಚ್ಚರಿಸಿದ್ದಾರೆ.

    ವಿದೇಶದಿಂದ ಬಂದವರ ಪತ್ತೆ: ಕರೊನಾ ಪೀಡಿತ ದೇಶಗಳಿಂದ ವಿವಿಧ ಜಿಲ್ಲೆಗೆ ಆಗಮಿಸಿರುವವರ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣ ಹಾಗೂ ರೈಲ್ವೆ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ಗುರುತಿಸಲಾಗುತ್ತಿದೆ. ಉತ್ತರ ವಲಯದಲ್ಲಿ ಪತ್ತೆಯಾದವರ ಆರೋಗ್ಯ ತಪಾಸಣೆ ನಡೆಸಿ ಅವರ ಎಡಗೈ ಮೇಲೆ ಗುರುತು ಹಾಕಲಾಗುತ್ತಿದೆ. ಆಯಾ ಪೊಲೀಸ್ ಠಾಣೆಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭವಾಗಿದೆ ಎಂದು ಐಜಿಪಿ ರಾಘವೇಂದ್ರ ಸ್ಪಷ್ಟಪಡಿಸಿದರು.

    ನೆರೆಯ ಜಿಲ್ಲೆಗಳ ಮೇಲೆ ನಿಗಾ

    ಮಹಾರಾಷ್ಟ್ರ ಹಾಗೂ ಗೋವಾ ಸೇರಿ ವಿವಿಧ ರಾಜ್ಯಗಳಿಂದ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯಗಳಿಂದ ಬರುವವರನ್ನು ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪರಿಶೀಲನೆ ಮುಂದುವರಿದಿದೆ. ಗ್ರಾಮೀಣ ಭಾಗದಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ ಎಂದು ಐಜಿಪಿ ರಾಘವೇಂದ್ರ ಸುಹಾಸ ತಿಳಿಸಿದರು.

    ಉತ್ತರ ವಲಯ ವ್ಯಾಪ್ತಿಯಲ್ಲಿರುವ ಚೆಕ್ ಪೋಸ್ಟ್‌ಗಳು

    ಬೆಳಗಾವಿ- 12, ಗದಗ- 09, ಧಾರವಾಡ- 19, ವಿಜಯಪುರ- 24 ಬಾಗಲಕೋಟೆ- 20

    ಕರೊನಾ ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಆಯಾ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರೂ ಸಹಕರಿಸಬೇಕು.
    | ಲಕ್ಷ್ಮಣ ನಿಂಬರಗಿ ಎಸ್‌ಪಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts