More

    ಬ್ಯಾಂಕಿಗೆ ಮಹಿಳೆಯರೇ ಶಕ್ತಿ; ಶಾಸಕಿ ಎಂ. ರೂಪಕಲಾ ಹೇಳಿಕೆ

    ಕೆಜಿಎಫ್: ಅಕ್ಕಿ ವಿತರಣೆ ಮಾಡುವುದಕ್ಕೆ ಸೀಮಿತವಾಗಿದ್ದ ಕ್ಯಾಸಂಬಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘವನ್ನು ಪುನ@ಶ್ಚೇತನಗೊಳಿಸಿ ಕೋಟ್ಯಂತರ ರೂಪಾಯಿ ಸಾಲ ನೀಡುವ ಮಟ್ಟಕ್ಕೆ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡರು ತಂದಿದ್ದಾರೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

    ಕೆಜಿಎಫ್​ ತಾಲೂಕು ಕ್ಯಾಸಂಬಳ್ಳಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ರೈತರಿಗೆ 2.60 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿ ಮಾತನಾಡಿದರು. ಕ್ಯಾಸಂಬಳ್ಳಿ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಸೊಸೈಟಿಯನ್ನು ಸ್ಥಾಪಿಸಿದ್ದರು. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಈ ಸೊಸೈಟಿಗೆ ಮರುಜೀವ ನೀಡಿದ್ದಾರೆ. ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡಿ ಜನರ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

    ದಾಖಲೆ ಇಲ್ಲದೆ ಮಹಿಳೆಯರಿಗೆ ಸಾಲ: ಖಾಸಗಿ ಬ್ಯಾಂಕ್​ನವರು ಬಡವರಿಗೆ ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ನೀಡಬೇಕಾದರೆ ದಾಖಲೆ ಕೇಳುತ್ತಾರೆ. ಆದರೆ, ಡಿಸಿಸಿ ಬ್ಯಾಂಕ್​ ಇಂದು ಸೊಸೈಟಿಗಳ ಮೂಲಕ ದಾಖಲೆ ಇಲ್ಲದೆ ಮಹಿಳೆಯರಿಗೆ ಸಾಲ ನೀಡುತ್ತಿದೆ. ಬ್ಯಾಂಕ್​ ಬಡವರನ್ನು ಹಾಗೂ ಮಹಿಳೆಯರನ್ನು ನಂಬಿ ಕೋಟ್ಯಂತರ ರೂಪಾಯಿಯ ಸಾಲ ನೀಡಿದೆ. ಬ್ಯಾಂಕಿಗೆ ಮಹಿಳೆಯರೇ ಶಕ್ತಿಯಾಗಿದ್ದು, ನಿಮ್ಮ ಕಷ್ಟಕ್ಕೆ ಬ್ಯಾಂಕ್​ ಸದಾ ಬಾಗಿಲು ತೆರೆದಿರುತ್ತದೆ. ಅದೇ ರೀತಿ ಬ್ಯಾಂಕ್​ ಕೊಟ್ಟ ಸಾಲವನ್ನು ದುರುಪಯೋಗ ಮಾಡದೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದರು.

    ಸಾಲ ನೀಡುವುದು ಆಂದೋಲನವಾಗಲಿ: ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ಬಡವರಿಗೆ ಸಾಲ ನೀಡುವುದು ಆಂದೋಲನವಾಗಬೇಕಾಗಿದೆ. ಕ್ಯಾಸಂಬಳ್ಳಿ ಸೊಸೈಟಿ ವ್ಯಾಪ್ತಿಯಲ್ಲಿ ಬರುವ 21 ಗ್ರಾಮಗಳ ಪ್ರತಿ ಮನೆಗೂ ಬ್ಯಾಂಕ್​ನ ಸಿಬ್ಬಂದಿ ಹೋಗಿ 5-10 ಗುಂಟೆ ಜಮೀನು ಇರುವ ಖಾತೆದಾರರಿಗೂ ಸಾಲ ನೀಡುವ ಕೆಲಸ ಆಗಬೇಕಾಗಿದೆ. ಬಡ್ಡಿ ಇಲ್ಲದೆ ಯಾವುದೇ ಖಾಸಗಿ ಬ್ಯಾಂಕಿನವರು ಸಾಲ ನೀಡುವುದಿಲ್ಲ. ಪಹಣಿ ಇದ್ದರೆ ಎನ್​ಒಸಿ ಅವಶ್ಯಕತೆ ಇಲ್ಲ, ಆಧಾರ್​ ಕಾರ್ಡ್​ ಪಡೆದು ಸಾಲ ನೀಡಿ ಎಂದು ಸಿಬ್ಬಂದಿಗೆ ತಿಳಿಸಿದರು.

    ಸಾಲ ನೀಡುವಾಗ ಪಕ್ಷ, ಜಾತಿ, ಪಂಗಡ ನೋಡಬಾರದು. ಹೊಸ ವರ್ಷದಲ್ಲಿ ಹೊಸ ಚೈತನ್ಯದ ರೀತಿ ಸಾಲ ನೀಡಬೇಕು. ಬಡವರಿಗೆ ಜಾತಿ ಗೊತ್ತಿಲ್ಲ, ಬಡವವರ್ಯಾರೂ ಮೋಸಗಾರರಲ್ಲ. ಸ್ವಾಭಿಮಾನಿ ಬದುಕು ನಡೆಸುತ್ತಾರೆೆ. ಬಡವನಿಗೆ ಹಣದ ಅಭಾವವಿರಬಹುದು. ಅದನ್ನು ನೀಗಿಸುವ ಕೆಲಸ ಡಿಸಿಸಿ ಬ್ಯಾಂಕ್​ ಮಾಡುತ್ತಿದೆ. ಶೂನ್ಯ ಬಡ್ಡಿಯಲ್ಲಿ ನೀಡುವ ಸಾಲವನ್ನು ರೈತರು ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಗೋವಿಂದಗೌಡ ಹೇಳಿದರು.

    ಕ್ಯಾಸಂಬಳ್ಳಿ ಸೊಸೈಟಿ ಅಧ್ಯಕ್ಷ ವಿಜಯರಾಘವರೆಡ್ಡಿ, ನಗರಸಭೆ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ, ಸೊಸೈಟಿ ನಿರ್ದೇಶಕರಾದ ಕೆಇಬಿ ವೆಂಕಟೇಶ್​, ನಂದಾರೆಡ್ಡಿ, ಪ್ರಕಾಶ್​ ರೆಡ್ಡಿ, ದಯಾನಂದ್​, ವಜ್ರವೇಲು, ವೆಂಕಟರಾಮರೆಡ್ಡಿ, ಗಂಗಿರೆಡ್ಡಿ, ಮುಖಂಡರಾದ ವೆಂಕಟಕೃಷ್ಣಾರೆಡ್ಡಿ, ಪದ್ಮನಾಭರೆಡ್ಡಿ, ಒಬಿಸಿ ಮುನಿಸ್ವಾಮಿ ಇದ್ದರು.

    ಡಿಸಿಸಿ ಬ್ಯಾಂಕ್​ ಅಧ್ಯಕ್ಷರಿಗೆ ನಾನಾ ರೀತಿಯ ಕಷ್ಟಗಳು ಎದುರಾದರೂ ಬ್ಯಾಂಕನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಮಹಿಳೆಯರ ಆಶೀರ್ವಾದ ಮತ್ತು ಶಕ್ತಿಯೇ ಕಾರಣವಾಗಿದೆ. ಕಷ್ಟಕಾಲದಲ್ಲಿರುವ ಮಹಿಳೆಯರು ಮತ್ತು ರೈತರಿಗೆ ಡಿಸಿಸಿ ಬ್ಯಾಂಕ್​ ಶಕ್ತಿ ತುಂಬುವ ಕೆಲಸ ಮಾಡಿದೆ.
    | ಎಂ.ರೂಪಕಲಾ, ಕೆಜಿಎಫ್​ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts