More

    ಸೂರಿಲ್ಲದೆ ಮಂಚದಡಿ ವೃದ್ಧೆ ವಾಸ, ಸಂಬಂಧಿಕರ ಮನೆಗೆ ಸೇರಿಸಿದ ಅಧಿಕಾರಿಗಳು

    ಗಂಗೊಳ್ಳಿ: ವಾಸಿಸಲು ಸ್ವಂತ ಸೂರಿಲ್ಲದೆ ಗಂಗೊಳ್ಳಿ ಗ್ರಾಮದ ಬಾಬಾಶಾ ಮೊಹಲ್ಲಾ ನಿವಾಸಿ ಸಫಿನಾಬಿ (70) ಎಂಬುವರು ತೆರೆದ ಜಾಗದಲ್ಲಿ ಮಲಗುವ ಮಂಚದಡಿ ಜೀವನ ನಡೆಸುತ್ತಿದ್ದ ಹೃದಯವಿದ್ರಾವಕ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಈಗ ಈಕೆಯ ಮನವೊಲಿಸಿ ಸಂಬಂಧಿಕರ ಮನೆಗೆ ಕಳುಹಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಹಲವು ವರ್ಷಗಳಿಂದ ಬಾಬಾಶಾ ಮೊಹಲ್ಲಾ ಪರಿಸರದ ತನ್ನ ಮನೆಯಲ್ಲಿ ವಾಸವಿದ್ದ ಸಫಿನಾಬಿ ಮನೆ ಬಿದ್ದು ಹೋದ ಬಳಿಕ ಭಟ್ಕಳದಲ್ಲಿರುವ ಮಗನ ಜತೆ ವಾಸಿಸುತ್ತಿದ್ದರು. ಕೆಲ ಸಮಯ ಬಳಿಕ ಮರಳಿ ಬಂದು ತನ್ನ ಮನೆಯ ಸಮೀಪದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಮಾನಸಿಕ ಸಮಸ್ಯೆಯಿದೆ ಎಂಬ ಕಾರಣ ನೀಡಿ ಸಂಬಂಧಿಕರು ವೃದ್ಧೆಗೆ ಆಶ್ರಯ ನೀಡಲು ಹಿಂದೇಟು ಹಾಕಿದ್ದರು. ಇದರಿಂದಾಗಿ ಕೆಲ ತಿಂಗಳಿನಿಂದ ತನ್ನ ಮನೆಯಿದ್ದ ಜಾಗದಲ್ಲಿ ಮರದ ಕೆಳಗೆ ಮಂಚ ಹಾಕಿ ಅದರ ಮೇಲೆ ಟಾರ್ಪಾಲ್ ಹೊದಿಸಿ ಮಳೆ ನೀರು ಬೀಳದಂತೆ ಮಾಡಿ ಅಲ್ಲಿಯೇ ವಾಸಿಸುತ್ತಿದ್ದರು. ಪ್ರಸಕ್ತ ಭಾರಿ ಮಳೆಗೂ ಟಾರ್ಪಾಲ್ ಹಾಸಿದ ಮಂಚದ ಕೆಳಗೆ ಮಲಗಿಕೊಂಡಿದ್ದರು. ಅಕ್ಕಪಕ್ಕದ ಮನೆಯವರು ವೃದ್ಧೆಗೆ ಊಟ ತಿಂಡಿ ನೀಡುತ್ತಿದ್ದರು. ದಿನಪೂರ್ತಿ ಮಂಚದ ಕೆಳಗೆ ಇರುತ್ತಿದ್ದ ವೃದ್ಧೆಯನ್ನು ಸ್ಥಳಾಂತರಿಸಲು ಮುಂದಾದರೂ ಯಾವುದೇ ಕಾರಣಕ್ಕೂ ತಾನು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

    ಮಾಹಿತಿ ಪಡೆದ ಜಿಲ್ಲಾಡಳಿತ ಸಮಸ್ಯೆ ಪರಿಹರಿಸುವಂತೆ ಕುಂದಾಪುರ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಸೂಚನೆ ನೀಡಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಇಲಾಖೆಯ ಅಧಿಕಾರಿಗಳು ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮತ್ತು ಪಂಚಾಯಿತಿ ಕಾರ್ಯದರ್ಶಿ ದಿನೇಶ ಶೇರುಗಾರ್ ಮೂಲಕ ಸಫಿನಾಬಿ ಮನವೊಲಿಸಿ ಅವರನ್ನು ಭಾನುವಾರ ಗಂಗೊಳ್ಳಿಯ ಅಂಚೆ ಕಚೇರಿ ಬಳಿಯಿರುವ ಅವರ ಸಂಬಂಧಿಕರ ಮನೆಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

    ತನ್ನ ಮನೆ ಇದ್ದ ಜಾಗವನ್ನು ಬೇರೊಬ್ಬರು ಅವರ ಹೆಸರಿಗೆ ಮಾಡಿಸಿಕೊಂಡಿದ್ದು, ಈಗ ಜಾಗ ಬಿಟ್ಟು ಹೋದರೆ ಬೇರೆಯವರ ಪಾಲಾಗುತ್ತದೆ. ಇದು ನನ್ನ ಜಾಗ ನನಗೆ ಇಲ್ಲೇ ಮನೆ ಕಟ್ಟಿಕೊಡಿ ಎಂದು ಸಫಿನಾಬಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
    ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯ ಬಿ.ರಾಘವೇಂದ್ರ ಪೈ, ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಎಸ್., ಪೊಲೀಸ್ ಸಿಬ್ಬಂದಿ ರತ್ನಾಕರ ನಾಯ್ಕ, ಗುಜ್ಜಾಡಿ ಗ್ರಾಮಸಹಾಯಕ ಗೋವಿಂದ್ರಾಯ ಶೇರುಗಾರ್ ಮತ್ತಿತರರು ವೃದ್ಧೆಯನ್ನು ಸ್ಥಳಾಂತರಿಸುವಲ್ಲಿ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts