More

    ವೃದ್ಧೆ ಹೂಳಲು ತೋಡಿದ್ದ ಸಮಾಧಿಗೆ ಇಳಿದು ಪ್ರತಿಭಟಿಸಿದ ರೈತ

    ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪಾವತಿಯಾಗಬೇಕಿದ್ದ ಕಬ್ಬಿನ ಬಾಕಿ ಬಿಲ್ ಹಣಕ್ಕಾಗಿ ಆಗ್ರಹಿಸಿ ರೈತನೊಬ್ಬ ಶುಕ್ರವಾರ ನಿಧನರಾಗಿದ್ದ ವೃದ್ಧೆಯೊಬ್ಬಳ ಶವ ಹೂಳಲು ತೆಗೆದಿದ್ದ ಸಮಾಧಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

    ಪಟ್ಟಣದ ನಿವಾಸಿ, ರೈತ ಶಿವಪ್ಪ ಪದ್ಮಪ್ಪ ಬೋಗಾರ (50) ಸಮಾಧಿಯಲ್ಲಿ ಕುಳಿತು ಪ್ರತಿಭಟಿಸಿದ ರೈತ. ಸಮಾಧಿಯಲ್ಲಿ ಕುಳಿತು ಅಳಲು ತೋಡಿಕೊಳ್ಳುವ ಜತೆಗೆ ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ‘ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬು ಕಳಿಸಿದ್ದೇನೆ. 85 ಸಾವಿರ ರೂ. ಬಾಕಿ ಬಿಲ್ ಬರಬೇಕು. ಕಬ್ಬಿನ ಹಣ ಈವರೆಗೆ ಕಾರ್ಖಾನೆ ಪಾವತಿಸದ್ದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ನಾನು ಸಾಯುವುದೊಂದೇ ಬಾಕಿಯಿದ್ದು, ಕಾರ್ಖಾನೆಯ ಅಧ್ಯಕ್ಷರು, ನಿರ್ದೇಶಕರು ಬಂದು ಮಣ್ಣು ಹಾಕಿ’ ಎಂದು ಕಣ್ಣೀರು ಸುರಿಸಿದ್ದಾನೆ.

    ಕಾರ್ಖಾನೆ ನಿರ್ದೇಶಕರಾಗಿದ್ದ ಹಾಗೂ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸಿರುವ ರೈತ, ‘ನಿಮ್ಮ ಸಹವಾಸವೇ ಸಾಕಾಗಿದೆ. ಮೈಮೇಲಿನ ಅರಿವೆ ಹರಿದಿವೆ. ಸಾಲವಾಗಿದೆ’ ಎಂದು ಅಳಲು ತೊಡಿಕೊಂಡಿದ್ದಾನೆ. ‘ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದು ಇದ್ದ ಕಾರ್ಖಾನೆ ಜಾಗವನ್ನೂ ಮಾರಿಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ರೈತನ ಆಕ್ರೋಶಕ್ಕೆ ಧ್ವನಿಗೂಡಿಸಿರುವ ಅನೇಕ ರೈತರು, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪಾವತಿಯಾಗಬೇಕಿರುವ ಅಂದಾಜು 25 ಕೋಟಿ ರೂ. ರೈತರ ಕಬ್ಬಿನ ಬಾಕಿ ಹಣ ತಕ್ಷಣ ಪಾವತಿಸಬೇಕು. ಅಲ್ಲಿಯವರೆಗೆ ಅ. 14ರಂದು ನಿಗದಿಯಾಗಿರುವ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಕಬ್ಬಿನ ಬಿಲ್ ಬಾರದಿದ್ದಕ್ಕೆ ತೀವ್ರ ಸಂಕಷ್ಟದಲ್ಲಿದ್ದೇವೆ. ರೈತರ ಕಷ್ಟ ಏಕೆ ಅರ್ಥವಾಗುತ್ತಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.

    ಕಾರ್ಖಾನೆಯಿಂದ ರೈತರಿಗೆ ಪಾವತಿಯಾಗಬೇಕಿರುವ ಬಾಕಿ ಬಿಲ್ ನೀಡಲು ಈಗಾಗಲೇ ಹಣಕಾಸು ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದೇವೆ. ನಾನು ಕೂಡ ಕಳೆದ ಕೆಲ ದಿನಗಳ ಹಿಂದೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕನಾಗಿ ಬಂದಿದ್ದೇನೆ. ರೈತರ ಕಷ್ಟ ನನಗೆ ಅರ್ಥವಾಗುತ್ತದೆ. ಶೀಘ್ರ ಬಾಕಿ ಬಿಲ್ ಪಾವತಿಸಲಾಗುವುದು.
    | ಶಿವ ಕುಲಕರ್ಣಿ ವ್ಯವಸ್ಥಾಪಕ ನಿರ್ದೇಶಕರು, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ.ಕೆ.ಹುಬ್ಬಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts