More

    ಮೋದೂರಲ್ಲಿ ಸಂಭ್ರಮದ ಓಕುಳಿ ಹಬ್ಬ

    ಹುಣಸೂರು: ತಾಲೂಕಿನ ಮೋದೂರು ಗ್ರಾಮದಲ್ಲಿ ಓಕುಳಿ ಹಬ್ಬದ ಅಂಗವಾಗಿ ಬಣ್ಣದ ನೀರಿನ ಓಕುಳಿಯಾಟ ಮಂಗಳವಾರ ಸಂಭ್ರಮದಿಂದ ನಡೆಯಿತು.


    ಮಕ್ಕಳು ವೃದ್ಧರಾದಿಯಾಗಿ ಓಕುಳಿಯಲ್ಲಿ ಮಿಂದೆದ್ದರು. ಕೈಗೆ ಕಟ್ಟಿದ್ದ ನೀರಿನ ಅಂಡಿನಲ್ಲಿ (ನೀರೆರೆಚುವ ಮರದ ಚೊಂಬು) ಹುಡುಗರು ಒಬ್ಬರಿಗೊಬ್ಬರು ನೀರೆರಚಾಡುತ್ತಾ ಸಂಭ್ರಮಿಸಿದರು. ಸಗಣಿ ಓಕುಳಿಯಾಟದೊಂದಿಗೆ ಪ್ರಾರಂಭಗೊಂಡ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವದ ಅಂಗವಾಗಿ ಎರಡನೇ ದಿನ ಬಣ್ಣದ ನೀರಿನ ಒಕುಳಿಯಾಟವನ್ನು ಆಡಿದ ಗ್ರಾಮೀಣರು ಸಂತೋಷಗೊಂಡರು.


    ಗ್ರಾಮದ ಗೌರಿ ಕೆರೆಯಿಂದ ಹೆಣ್ಣು ಮಕ್ಕಳು ಹಾಗೂ ಮುತ್ತೈದೆಯರು ಬಿಂದಿಗೆಯಲ್ಲಿ ಗಂಗೆಗೆ ಪೂಜೆ ಸಲ್ಲಿಸಿ ನೀರನ್ನು ಹೊತ್ತು ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ಆವರಣಕ್ಕೆ ತಂದರು. ಮೆರವಣಿಗೆಯಲ್ಲಿ ಕೊಂಬು, ಕಹಳೆ, ಛತ್ರಿ ಛಾಮರ, ಮಂಗಳ ವಾದ್ಯದವರೊಂದಿಗೆ ಬಾಯಿಗೆ ಬೀಗ ಹಾಕಿಕೊಂಡ ಹರಕೆ ಹೊತ್ತವರು ಮೆರವಣಿಗೆಯಲ್ಲಿ ಬಂದರು. ಮೋದೂರು ಎಂ.ಕೊಪ್ಪಲಿನ ಜನರು ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಡ್ರಂಗಳ ಮೂಲಕ ಕೆರೆಯಿಂದ ನೀರನ್ನು ತಂದು ದೇವಾಲಯದ ಪ್ರಾಂಗಣದ ಮುಂಭಾಗ ಸಾಲಾಗಿ ನಿಲ್ಲಿಸಿದರು.


    ದೇವಾಲಯದ ಆವರಣದ ಮುಂಭಾಗವಿರುವ ಓಕುಳಿ ತೊಟ್ಟಿಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಹೆಂಗಳೆಯರು ತಂದಿದ್ದ ಬಿಂದಿಗೆ ನೀರಿನ್ನು ತೊಟ್ಟಿಗೆ ಹಾಕಲಾಯಿತು. ನಂತರ ತೊಟ್ಟಿಯ ನೀರಿಗೂ ಅರ್ಚಕರು ಪೂಜೆ ಸಲ್ಲಿಸಿದರು. ಮೋದೂರು ಪಿ.ಕೊಪ್ಪಲು ಗ್ರಾಮಸ್ಥರು ಕರೆ ತಂದಿದ್ದ 500ಕ್ಕೂ ಹೆಚ್ಚು ಕುರಿಗಳನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಣೆ ಹಾಕಿಸಲಾಯಿತು. ಕುರಿಗಳು ಅಡ್ಡದಿಡ್ಡಿ ಓಡಾಡಬಾರದೆಂದು ಗ್ರಾಮದ ಯುವಕರು ಅಲ್ಲಲ್ಲಿ ಅಡ್ಡಲಾಗಿ ನಿಂತು ಕುರಿಗಳನ್ನು ಪ್ರದಕ್ಷಿಣೆ ಹಾಕಿಸಲು ನೆರವಾದರು.
    ನಂತರ ಎತ್ತಿನ ಗಾಡಿಯಲ್ಲಿ ತಂದಿದ್ದ ನೀರೆಲ್ಲವನ್ನೂ ತೊಟ್ಟಿಗೆ ಹಾಕಲಾಯಿತು. ಅರ್ಚಕರು ಸಾಂಕೇತಿಕವಾಗಿ ಓಕುಳಿಯಾಡುವ ನಾಲ್ಕಾರು ಹುಡುಗರಿಗೆ ಪೂಜೆ ಸಲ್ಲಿಸಿದ ಹೂವಿನ ಹಾರವನ್ನು ಕೊರಳಿಗೆ ಹಾಕಿ ಓಕುಳಿಯಾಡಲು ಒಪ್ಪಿಗೆ ಸೂಚಿಸಿದ್ದೆ ತಡ ಎಲ್ಲರೂ ನೀರನ್ನು ಬಿಂದಿಗೆಯಲ್ಲಿ ತುಂಬಿಸಿಕೊಂಡು ಒಬ್ಬರ ಮೇಲೊಬ್ಬರು ಎರಚಿಕೊಳ್ಳಲು ಪ್ರಾರಂಭಿಸಿದರು. ಮಹಿಳೆಯರು ದೂರದಲ್ಲಿ ನಿಂತು ನೋಡಿ ಸಂತಸಪಟ್ಟರೆ, ಪಡ್ಡೆ ಹುಡುಗರು ಗ್ರಾಮದ ಬೀದಿ ತುಂಬೆಲ್ಲಾ ಓಡಾಡಿಕೊಂಡು ನೀರು ಎರಚಿಕೊಂಡರು. ಓಕುಳಿಯಾಟಕ್ಕಾಗಿ ಮನೆ ಮುಂದೆ ತುಂಬಿಸಿಟ್ಟಿದ್ದ ನೀರನ್ನು ತೆಗೆದು ಎರಚಿಕೊಂಡು ಸಂತಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts