More

    ಅಧಿಕಾರಿಗಳ ಮುಖದಲ್ಲಿ ಮೂಡಿದೆ ಚಿಂತೆಯ ಗೆರೆ

    ವಿಜಯವಾಣಿ ಸುದ್ದಿಜಾಲ ಧಾರವಾಡ

    ಸಾರ್ವಜನಿಕರು ನಿರ್ದಿಷ್ಟ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು ಎಂದು ವಿವಿಧ ರೀತಿಯಿಂದ ಎಚ್ಚರಿಕೆ ನೀಡಿದರೂ ಬಹಳಷ್ಟು ಜನರು ಅರ್ಥ ಮಾಡಿಕೊಂಡಿಲ್ಲ. ಜನರ ಉದಾಸೀನ ಧೋರಣೆ ಅಧಿಕಾರಿಗಳ ಮುಖದಲ್ಲಿ ಚಿಂತೆಯ ಗೆರೆ ಮೂಡಲು ಕಾರಣವಾಗುತ್ತಿದೆ.

    ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಸಿಆರ್​ಪಿಸಿ 1977ರ ಕಲಂ 144ರ ಅನ್ವಯ ನಿಷೇಧಾಜ್ಞೆಯನ್ನು ಮಾ. 31ರವರೆಗೆ ವಿಸ್ತರಿಸಲಾಗಿದೆ. ಆದರೆ, ಭಾನುವಾರ ಇಡೀ ದಿನ ಮನೆಯಲ್ಲಿದ್ದ ಸಾರ್ವಜನಿಕರು, ಸೋಮವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಕಂಡುಬಂತು.

    ಗ್ರಾಮಾಂತರದಲ್ಲಿ ಸಹ ಜನರು ಮನೆಯಿಂದ ಹೊರಬಂದು ಕಟ್ಟೆಗಳ ಮೇಲೆ ಗುಂಪಾಗಿ ಅಥವಾ ಅತ್ಯಂತ ಸಮೀಪದಲ್ಲಿ ಕುಳಿತು ಮಾತನಾಡುತ್ತಿದ್ದಾರೆ ಎಂಬ ಕುರಿತು ವಿವಿಧ ಸ್ತರದ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ.

    ಈ ಸೇವೆಗಳು ಲಭ್ಯ: ಜಿಲ್ಲಾಡಳಿತ ಲಾಕ್​ಡೌನ್ ಮುಂದುವರಿಸಿದ್ದರೂ ಅಗತ್ಯ ಸೇವೆಗಳಿಗೆ ನಿರ್ಬಂಧ ವಿಧಿಸಿಲ್ಲ. ಆಸ್ಪತ್ರೆ, ಔಷಧ ಅಂಗಡಿ, ಹಾಲಿನ ಅಂಗಡಿ, ಬ್ಯಾಂಕ್, ಅಂಚೆ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮ, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ದಿನಸಿ, ಹಣ್ಣು, ತರಕಾರಿ ಮಾರುಕಟ್ಟೆಗಳು, ಪಶು ಆಸ್ಪತ್ರೆಗಳಿಗೆ ನಿರ್ಬಂಧವಿಲ್ಲ. ಪತ್ರಿಕಾ ವಾಹನ ಸಂಚಾರ, ಪತ್ರಿಕೆ ವಿತರಣೆಗೂ ನಿರ್ಬಂಧವಿಲ್ಲ.

    ಆರೋಗ್ಯಾಧಿಕಾರಿಗಳ ಮನವಿ: ವಿದೇಶಗಳಿಂದ ನಗರಕ್ಕೆ ಬಂದವರಲ್ಲೇ ಕರೊನಾ ಸೋಂಕಿನ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಸೋಂಕು ದೃಢಪಟ್ಟಿರುವ ವ್ಯಕ್ತಿಯು ನಗರದ ಹೊಸಯಲ್ಲಾಪುರ ಪ್ರದೇಶದವನಾಗಿದ್ದು, ಇಡೀ ಪ್ರದೇಶವನ್ನು ಕಂಟೈನ್​ವೆುಂಟ್ ಪ್ರದೇಶವೆಂದು ಘೊಷಿಸಲಾಗಿದೆ. ಅಲ್ಲಿಂದ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ. ಜನತೆಗೆ ಆ ಪ್ರದೇಶದ ಸ್ಥಿತಿಗತಿ ಏನು ಎಂಬ ಕುತೂಹಲವಿದೆ. ಇಲಾಖೆಗಳು ಅಗತ್ಯ ಕ್ರಮಗಳನ್ನು ಜರುಗಿಸುತ್ತಿದ್ದು, ಸಾರ್ವಜನಿಕರು ಇತ್ತ ಸುಳಿಯಬಾರದು ಎಂಬುದು ಆರೋಗ್ಯಾಧಿಕಾರಿಗಳ ಮನವಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts