More

    ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಸಭೆ ಬಹಿಷ್ಕಾರ

    ಹಾನಗಲ್ಲ: ಸದಸ್ಯರೊಬ್ಬರು ಏಕವಚನದಿಂದ ಮಾತನಾಡಿದ್ದರಿಂದ ಅಧಿಕಾರಿಗಳು ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ನಡೆಯಿತು.

    ಎಪಿಎಂಸಿ ಕಾರ್ಯದರ್ಶಿ ಬೇರೊಂದು ಕಾರ್ಯನಿಮಿತ್ತ ತೆರಳಿದ್ದರಿಂದ ಸಭೆಗೆ ವ್ಯವಸ್ಥಾಪಕರನ್ನು ಕಳುಹಿಸಿದ್ದರು. ‘ಹಮಾಲಿ ಕಾರ್ವಿುಕರ ನಿವೇಶನದ ಸಮಸ್ಯೆ ನಿವಾರಣೆಗೆ 3 ವರ್ಷಗಳಿಂದ ಆಗ್ರಹಿಸುತ್ತಿದ್ದರೂ, ಇದುವರೆಗೂ ಬಗೆಹರಿದಿಲ್ಲ. ಕೆಲವರಿಗೆ ನಿವೇಶನ ನೀಡಿದ್ದೀರಿ, ಇನ್ನುಳಿದವರಿಗೇಕೆ ನೀಡಿಲ್ಲ. ಇನ್ನೆಷ್ಟು ವರ್ಷ ಬೇಕು ನಿಮಗೆ. ಕಾರ್ಯದರ್ಶಿಗಳೆಲ್ಲಿದ್ದಾರೆ. ನಾವು ಜನರಿಗೆ ಏನು ಉತ್ತರ ಕೊಡಬೇಕು’ ಎಂದು ಬಶೀರಖಾನ ಪಠಾಣ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಆಗ ಎಲ್ಲ ಇಲಾಖೆ ಅಧಿಕಾರಿಗಳು ಬಶೀರಖಾನ ಪಠಾಣ ವರ್ತನೆಗೆ ಬೇಸತ್ತು ಪ್ರತಿಭಟಿಸಿ, ‘ನಮಗೂ ಜವಾಬ್ದಾರಿಯಿರುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗೆ ಸಮಯ ಹಿಡಿಯುತ್ತದೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ’ ಎಂದು ಸಭೆಯಿಂದ ನಿರ್ಗಮಿಸಿದರು.

    ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಅಧಿಕಾರಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರಿಗೆ ಹೇಳಬೇಕಾಗಿರುವುದನ್ನು ಸೌಜನ್ಯದಿಂದ ಹೇಳಿ, ಅನಗತ್ಯವಾಗಿ ಆಕ್ರೋಶ ವ್ಯಕ್ತಪಡಿಸುವುದು, ಏಕವಚನದಲ್ಲಿ ಮಾತನಾಡುವುದರಿಂದ ಕೆಲಸವಾಗುವುದಿಲ್ಲ. ಗೌರವಯುತವಾಗಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.

    ನಂತರ ಸಿದ್ದನಗೌಡ ಪಾಟೀಲ, ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಸಭೆಯಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ವಾತಾವರಣ ತಿಳಿಗೊಂಡು ಅಧಿಕಾರಿಗಳು ಸಭೆಗೆ ಬಂದರು.

    ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರಕ್ಕೆ ವ್ಯಾಪಾರಸ್ಥರ ಭತ್ತ ಸಾಗಾಟವಾಗುತ್ತಿದೆ. ತಾಲೂಕಿನಲ್ಲಿ 20,000 ಎಕರೆ ಭತ್ತದ ಪ್ರದೇಶವಿದೆ. ಆದರೆ, ಅದಕ್ಕಿಂತಲೂ ಹೆಚ್ಚು ಭತ್ತ ಆವಕವಾಗಿದೆ. ಈ ಭತ್ತದ ಆವಕ ಲೆಕ್ಕಕ್ಕೆ ಹಿಡಿದರೆ, ಇಳುವರಿ ಹೆಚ್ಚಾದಂತಾಗಿ ಮುಂದೆ ಬೆಳೆ ವಿಮೆ ಲೆಕ್ಕಾಚಾರಕ್ಕೆ ಸಮಸ್ಯೆಯಾಗುತ್ತದೆ. ಕೇವಲ ರೈತರ ಭತ್ತ ಪರಿಶೀಲಿಸಿ ಖರೀದಿಸಿ ಎಂದು ಸದಸ್ಯರು ಆಗ್ರಹಿಸಿದರು.

    ಅವ್ಯವಹಾರ ತನಿಖೆ ವಿಳಂಬಕ್ಕೆ ಆಕ್ಷೇಪ

    ಕಳೆದ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಪರಿಹಾರ ವಿತರಣೆಯಲ್ಲಾದ ಅವ್ಯವಹಾರದ ತನಿಖೆ ವಿಳಂಬವಾಗಿದೆ. ಇದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಶಿವಬಸಪ್ಪ ಪೂಜಾರ ಪ್ರಶ್ನಿಸಿದರು. ಉತ್ತರಿಸಿದ ಪ್ರಭಾರಿ ತಹಸೀಲ್ದಾರ್ ಸಿ.ಎಸ್. ಜಾಧವ, ಈ ಕುರಿತು ಹಲವರು ದೂರು ಸಲ್ಲಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಜಿಲ್ಲೆಯ 16 ಜನರನ್ನು ಅಮಾನತುಗೊಳಿಸಲಾಗಿದೆ. ಸಮಸ್ಯೆ ಬೇಗನೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ವಿವರಿಸಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೂಜಾರ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ವಾಲೀಕಾರರು ತಮ್ಮ ಸಂಬಂಧಿಕರ ಮತ್ತು ಆಪ್ತರ ಖಾತೆಗಳಿಗೆ ಹಣ ಹಾಕಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಲ್ಲಿ ರೈತರ ತಪ್ಪೇನಿದೆ. ಅಧಿಕಾರಿಗಳೇ ಸರ್ಕಾರದ ಹಣ ಲೂಟಿ ಹೊಡೆದರೆ ಯಾರನ್ನು ನಂಬುವುದು. ಕೂಡಲೆ ರೈತರಿಗೆ ಪರಿಹಾರವನ್ನು ಸರ್ಕಾರ ಜಮಾ ಮಾಡಲಿ ಎಂದು ಆಗ್ರಹಿಸಿದರು.

    ತಾಪಂ ಉಪಾಧ್ಯಕ್ಷೆ ಸುಮಂಗಲಾ ಕನ್ನಕ್ಕನವರ, ಶಂಕ್ರಣ್ಣ ಪ್ಯಾಟಿ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಇಒ ಸುನೀಲಕುಮಾರ, ಸಿಡಿಪಿಒ ಸಂತೋಷಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts