More

    ಅಧಿಕಾರಿ ಆಟ, ರೈತರಿಗೆ ಸಂಕಟ

    ದೊಡವಾಡ: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತೆ ದೊಡವಾಡ ವ್ಯಾಪ್ತಿ ಪ್ರದೇಶದ ರೈತರು ಕೊರಗುವಂತಾಗಿದೆ. ಗ್ರಾಮ ಲೆಕ್ಕಾಧಿಕಾರಿಯ ಕರ್ತವ್ಯ ಲೋಪದಿಂದ ಕಡಲೆ ಬೆಳೆಗಾರರು ದಿಗಿಲುಗೊಳ್ಳುವಂತಾಗಿದೆ.

    ಸರ್ಕಾರದ ಮತ್ತು ನೆಫೆಡ್ ಸಂಸ್ಥೆ ನಿಯಮಾವಳಿ ಪ್ರಕಾರ ಜಿಪಿಎಸ್ ಆಧಾರಿತ ತಂತ್ರಾಂಶದಿಂದ ಕಡಲೆ ಬೆಳೆದ ಹೊಲಗಳ ಸರ್ವೇ ಮಾಡಿ ಕೃಷಿ ಇಲಾಖೆಯ ಜಿಪಿಎಸ್ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಬೇಕು ಎಂಬ ನಿಯಮ ಇದೆ. ಆದರೆ, ಗ್ರಾಮಲೆಕ್ಕಾಧಿಕಾರಿ ಸಿ.ಟಿ. ಪೂಜೇರ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಗ್ರಾಮದ 2500ಕ್ಕೂ ಹೆಚ್ಚು ರೈತರ ಹೊಲಗಳ ಸರ್ವೇ ಮಾಡಿ ಜಿಪಿಎಸ್ ತಂತ್ರಾಂಶದಲ್ಲಿ ಅಪ್ಡೇಟ್ ಮಾಡಿಲ್ಲ. ಇದರಿಂದ ಕಡಲೆ ಬೆಳೆಗಾರರು ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರತಿಭಟನೆಯಿಂದ ಬೆಳಕಿಗೆ: ಕಡಲೆ ಬೆಳೆಯ ಜಿಪಿಎಸ್ ಅಪ್ಡೇಟ್ ಮಾಡಲು ಶನಿವಾರವೇ ಕೊನೆಯ ದಿನವಾಗಿತ್ತು. ಆದರೆ, ಗ್ರಾಮದ ಬೆಳೆಗಾರರ ಒಂದು ಖಾತೆಯೂ ಇನ್ನೂ ಅಪ್ಡೇಟ್ ಆಗಿಲ್ಲ. ಸರ್ಕಾರ ಕೊಟ್ಟು ಕಸಿದುಕೊಳ್ಳುವ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಅಲ್ಲದೆ, ತಮ್ಮ ಖಾತೆಯ ಪ್ರಸ್ತುತ ಸ್ಥಿತಿ ಪರಿಶೀಲಿಸಿದಾಗ ಬೆಳೆಯ ಮಾಹಿತಿಯೇ ಅಪ್ಡೇಟ್ ಆಗಿರಲಿಲ್ಲ. ರೈತರ ಈ ಪ್ರತಿಭಟನೆಯಿಂದಾಗಿ ಗ್ರಾಮಲೆಕ್ಕಾಧಿಕಾರಿಯು ಬೆಳೆಯ ಜಿಪಿಎಸ್ ಅಪ್ಡೇಟ್ ಮಾಡಿಯೇ ಇಲ್ಲ ಎಂಬ ಮಾಹಿತಿ ಬೆಳಕಿಗೆ ಬಂತು.

    ಬೆಳೆಗಾರರ ಗೋಳು: ಕಡಲೆ ಬೆಳೆ ಇದ್ದಾಗ ಸರ್ವೇ ಮಾಡಿ ಜಿಪಿಎಸ್ ಮಾಡಿದರೆ ಮಾತ್ರ ತಂತ್ರಾಂಶದಲ್ಲಿ ಬೆಳೆ ಪ್ರದೇಶ ತೋರಿಸುತ್ತದೆ. ಆದರೆ, ಈಗಾಗಲೇ ಶೇ. 99ರಷ್ಟು ಕಡಲೆಕಾಳು ಬೆಳೆ ಕಟಾವಾಗಿದೆ. ಈಗ ಸರ್ವೇ ಮಾಡಲು ಹೊಲಗಳಿಗೆ ತೆರಳಿದರೆ ಜಿಪಿಎಸ್ ತಂತ್ರಾಂಶದಲ್ಲಿ ಕಟಾವು ಪ್ರದೇಶ ಎಂದು ತೋರಿಸುತ್ತಿದ್ದು ರೈತರಿಗೆ ದಿಕ್ಕು ತೋಚದಾಗಿದೆ.

    ಮುಂಗಾರು ಹಂಗಾಮಿನಲ್ಲಿ ಫಸಲು ಕಾಣದೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಂಗಾಮಿನ ಕಡಲೆ ಕಾಳು ಬೆಳೆ ಚೆನ್ನಾಗಿ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಸರ್ಕಾರ ಕೂಡ ಕಡಲೆಕಾಳು ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ 4750 ರೂ. ಘೋಷಿಸಿದ್ದರಿಂದ ರೈತರಿಗೂ ಸಂತಸ ತಂದಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ಅಮಾಯಕ ರೈತರು ಈಗ ಪರಿತಪಿಸುವಂತಾಗಿದೆ.

    ಲೆಕ್ಕಾಧಿಕಾರಿಗೆ ಗ್ರಾಮಸ್ಥರ ತೀವ್ರ ತರಾಟೆ, ಥಳಿಸಲು ಯತ್ನ

    ಗ್ರಾಮದ 2500 ಖಾತೆಗಳಲ್ಲಿ ಕೇವಲ 60 ರಿಂದ 70 ರೈತರ ಖಾತೆಗಳು ಮಾತ್ರ ಅಪ್ಡೇಟ್ ಆಗಿದೆ. ಈ ವಿಚಾರವಾಗಿ ಗ್ರಾಮಲೆಕ್ಕಾಧಿಕಾರಿ ಸಿ.ಟಿ. ಪೂಜೇರ ಅವರನ್ನು ವಿಚಾರಿಸಲು ಸ್ಥಳಕ್ಕೆ ಕರೆಸಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ರೈತರ ಪ್ರತಿಭಟನೆಯ ವಿಷಯ ತಿಳಿದು ತಾಲೂಕು ಕೃಷಿ ಅಧಿಕಾರಿ ಪ್ರತಿಭಾ ಹೂಗಾರ ಅವರೂ ಗ್ರಾಮದ ಪಿಕೆಪಿಎಸ್‌ಗೆ ಆಗಮಿಸಿ ಮುಖಂಡರ ಮತ್ತು ರೈತರ ಸಭೆ ನಡೆಸಿದರು. ಗ್ರಾಮಲೆಕ್ಕಾಧಿಕಾರಿಯ ಎಡವಟ್ಟಿನಿಂದ ಹೀಗಾಗಿದೆ. ಮೇಲಧಿಕಾರಿಗಳ ಜತೆ ಮಾತನಾಡಿ ಕಡಲೆ ಬೆಳೆದ ರೈತರ ಹೊಲಗಳ ಜಿಪಿಎಸ್ ಸರ್ವೇಯನ್ನು ತುರ್ತಾಗಿ ಮಾಡುವಂತೆ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದರು. ಲೆಕ್ಕಾಧಿಕಾರಿ ದುರ್ವರ್ತನೆ ಕಂಡು ಗ್ರಾಮಸ್ಥರು ಥಳಿಸಲು ಮುಂದಾದ ಘಟನೆಯೂ ಜರುಗಿತು.

    ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಜಿಪಿಎಸ್ ತಂತ್ರಾಂಶ ಅಪ್ಡೇಟ್ ದಿನಾಂಕ ವಿಸ್ತರಿಸಲು ಕ್ರಮ ಜರುಗಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು.
    | ಜಿಲಾನಿ ಮೊಕಾಶಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು

    ಗ್ರಾಮ ಲೆಕ್ಕಾಧಿಕಾರಿಯ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದಿಂದ ರೈತರಿಗೆ ಅನ್ಯಾಯವಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಪಿಎಸ್ ತಂತ್ರಾಂಶ ಅಪ್ಡೇಟ್ ಮಾಡುವ ದಿನಾಂಕ ವಿಸ್ತರಿಸಬೇಕು. ಸಮಸ್ಯೆಗೆ ಪರಿಹಾರ ಹುಡುಕಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
    | ನಿಂಗಪ್ಪ ಚೌಡಣ್ಣವರ ಅಧ್ಯಕ್ಷ, ಪಿಕೆಪಿಎಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts