More

    ಕಡಲ ಜೀವಶಾಸ್ತ್ರಕ್ಕೆ ಕೆಪಿಎಸ್​ಸಿ ಒದಗಿಸಲು ಕ್ರಮ- ಕವಿವಿ ಉಪಕುಲಪತಿ ಭರವಸೆ

    ಕಾರವಾರ : ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಪದವಿಗೆ ಕೆಪಿಎಸ್​ಸಿ ಮಾನ್ಯತೆ ನೀಡುವ ಕುರಿತು ಕ್ರಮ ವಹಿಸುವುದಾಗಿ ಕವಿವಿ ಉಪ ಕುಲಪತಿ ಕೆ.ಬಿ.ಗುಡಸಿ ಭರವಸೆ ನೀಡಿದರು. ಬಹುವರ್ಷಗಳ ನಂತರ ಇಲ್ಲಿನ ಕೋಡಿಬಾಗದ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜನೆಯಾಗಿದ್ದ ವಿವಿ ಸಿಂಡಿಕೇಟ್ ಸಭೆಯಲ್ಲಿ ಭಾಗವಹಿಸಿದ್ದ ಅವರು ‘ವಿಜಯವಾಣಿ’ ಜತೆ ಮಾತನಾಡಿದರು.

    ರಾಜ್ಯದಲ್ಲಿ ಕಾರವಾರದಲ್ಲಿ ಮಾತ್ರ ಇರುವ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಇತರ ಸಾಮಾನ್ಯ ವಿಜ್ಞಾನ ಸ್ನಾತಕೋತ್ತರ ಪದವಿಗಳಿಗೆ ತತ್ಸಮಾನ ಎಂದು ಪರಿಗಣಿಸಿಲ್ಲ. ಇದರಿಂದ ಇಲ್ಲಿ ಪಿಜಿ ಮಾಡಿದವರಿಗೆ ಕೆಪಿಎಸ್​ಸಿ ನೇಮಕಾತಿಯಲ್ಲಿ ಮಾನ್ಯತೆ ಸಿಗುತ್ತಿಲ್ಲ. ಮೀನುಗಾರಿಕೆ ಇಲಾಖೆಯಲ್ಲಿ ನೇಮಕಾತಿಯಾಗುತ್ತಿಲ್ಲ. ಇತರ ವಿಜ್ಞಾನ ಸ್ನಾತಕೋತ್ತರರಂತೆ ಇಲ್ಲಿನ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಸಿಗಬೇಕಾದಲ್ಲಿ ಕೆಲವು ಮಾನದಂಡಗಳನ್ನು ಪೂರೈಸಬೇಕಿದ್ದು, ಅದಕ್ಕೆ ಬೇಕಾದ ಕ್ರಮ ವಹಿಸುವಂತೆ ಸ್ಥಳೀಯ ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದೇನೆ ಎಂದರು.

    ವಿವಿಯಿಂದ ಹೊಸ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಸ್ತಾಪವಿಲ್ಲ. ಇದ್ದ ಕೇಂದ್ರಗಳಿಗೆ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸುವ ಕುರಿತು ಗಮನ ಹರಿಸಲಾಗುವುದು. ಹೊಸ ಕೋರ್ಸ್​ಗಳಿಗೆ ಕಾರವಾರದಿಂದ ಪ್ರಸ್ತಾಪ ಬಂದರೆ, ಅದನ್ನು ಪ್ರಾರಂಭಿಸಲು ಅನುಮತಿ ನೀಡಲಾಗುವುದು ಎಂದರು.

    ಅಭಿವೃದ್ಧಿ ಸಮಿತಿ ಸಭೆ: ಎರಡು ವರ್ಷದ ಕೈಗಾರಿಕಾ ತರಬೇತಿ(ಐಟಿಐ) ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶಕ್ಕೆ ಈ ವರ್ಷ ಅವಕಾಶ ಕಲ್ಪಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದರು.

    ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

    ಭಾಷಾ ವಿಷಯಗಳನ್ನು ಓದಿಲ್ಲ ಎಂಬ ಕಾರಣಕ್ಕೆ ಪದವಿ ತರಗತಿಗೆ ಅವಕಾಶ ನೀಡುವುದಿಲ್ಲ ಎಂದು ಇತ್ತೀಚೆಗೆ ಕವಿವಿ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಐಟಿಐ ಮುಗಿಸಿದವರಿಗೆ ಇದರಿಂದ ಅನ್ಯಾಯವಾಗಿದೆ. ಒಂದು ವರ್ಷಕ್ಕೆ ಸೀಮಿತವಾಗಿ ಪದವಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ ಎಂದರು.

    ಕಾಲೇಜ್ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಸತ್ಯನಾರಾಯಣ, ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜೆ.ಎಲ್.ರಾಠೋಡ್, ಸಿಂಡಿಕೇಟ್ ಸದಸ್ಯರು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts