More

    ಬೋನಿಗೆ ಬೀಳದ ಚಿರತೆ, 50 ಕಿಮೀ ವ್ಯಾಪ್ತಿ ಕಾರ್ಯಾಚರಣೆ; 75 ರಕ್ಷಕರ ಕಾರ್ಯಪಡೆ ರಚನೆ 12 ಕ್ಯಾಮರಾ, 6 ಬೋನ್‌ಗಳ ಬಳಕೆ

    ನ್ಯಾಮತಿ: ಕಳೆದ ಮೂರ‌್ನಾಲ್ಕು ದಿನಗಳಿಂದ ಬೋನಿಗೆ ಬೀಳದೆ, ಅಲ್ಲಲ್ಲಿ ಸುತ್ತಾಡುತ್ತಿರುವ ನರ ಭಕ್ಷಕ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಹೀಗಾಗಿ ಅರಣ್ಯ ಪಡೆ ಈಗ ತನ್ನ ಕಾರ್ಯಾಚರಣೆಯನ್ನು 50 ಕಿಮೀ. ವ್ಯಾಪ್ತಿಗೆ ವಿಸ್ತರಿಸಿಕೊಂಡಿದೆ.

    ಫಲವನಹಳ್ಳಿ ಗ್ರಾಮದ ಹೊಲದಲ್ಲಿ ರೈತ ಮಹಿಳೆ ಕಮಲಾಬಾಯಿ ರಕ್ತ ಹೀರಿದ ಚಿರತೆ ಹಲವೆಡೆ ತನ್ನ ಹೆಜ್ಜೆ ಗುರುತು ಮಾತ್ರ ಮೂಡಿಸುತ್ತಿದ್ದು, ಅರಣ್ಯ ಪಡೆಯ ಬೋನು, ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿಲ್ಲ.

    ಮಂಗಳವಾರ ಸಂಜೆಯಿಂದಲೇ ನರ ಹಂತಕ ಚಿರತೆ ಸೆರೆ ಹಿಡಿಯಲು ತ್ವರಿತ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ 12 ಟ್ರಾೃಪಿಂಗ್ ಕ್ಯಾಮರಾ, 6 ಬೋನ್‌ಗಳು, ಹತ್ತತ್ತು ಸಿಬ್ಬಂದಿಯ ತಂಡ ರಚಿಸಿಕೊಂಡು ಅಖಾಡಕ್ಕೆ ಇಳಿದಿದ್ದೇನೋ ನಿಜ. ಆದರೆ, ಚಿರತೆ ಮಾತ್ರ ಇವರ ಎಲ್ಲ ಕಾರ್ಯತಂತ್ರವನ್ನು ವಿಫಲಗೊಳಿಸುತ್ತಿದೆ.

    ಹತ್ತಾರು ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಈವರೆಗೂ ಚಿರತೆ ಚಲನವಲನದ ಸುಳಿವಿಲ್ಲ. ಗುರುವಾರ ಯರಗನಾಳು ಬಳಿ ಕಂಡಿದ್ದು ಚಿರತೆ ಅಲ್ಲ, ನರಿ ಹೆಜ್ಜೆ ಗುರುತು ಎನ್ನಲಾಗಿದೆ.

    ಕಾರ್ಯಾಚರಣೆ ವಿಸ್ತರಣೆ: ಶುಕ್ರವಾರದಿಂದ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಕ್ಷೇತ್ರವನ್ನು ವಿಸ್ತರಿಸಿದೆ ಅರಣ್ಯ ಇಲಾಖೆ. ಫಲವನಹಳ್ಳಿ ಸುತ್ತಮುತ್ತ 50 ಕಿ.ಮೀ. ವ್ಯಾಪ್ತಿಯಲ್ಲಿ ತಲಾ 15 ಜನರಂತೆ 5 ತಂಡಗಳನ್ನು ರಚಿಸಿ ಚಿರತೆ ಸೆರೆಗೆ ಸನ್ನದ್ಧವಾಗಿದೆ.

    ಹರಮಘಟ್ಟ ಮೀಸಲು ಅರಣ್ಯ ವ್ಯಾಪ್ತಿಯ ಫಲವನಹಳ್ಳಿಗೆ ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮುಂದಾಳತ್ವದಲ್ಲಿ ಕಾರ್ಯಾಚರಣೆಗೆ ಚುರುಕು ನೀಡಲಾಗಿದೆ.

    ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೂ ಕೂಂಬಿಂಗ್ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಹ ಕೈ ಜೋಡಿಸಿದ್ದಾರೆ. ಅರವಳಿಕೆ ಪರಿಣಿತರು, ಪಶು ಇಲಾಖೆ ವೈದ್ಯರು ಚಿರತೆ ಜಾಡು ಹಿಡಿದು ಅಲ್ಲಲ್ಲಿ ಬೋನ್ ಇರಿಸಿ ಖೆಡ್ಡಾಕ್ಕೆ ಕೆಡವಲು ಸಂಚು ರೂಪಿಸಿದೆ. ಮಾದೇನಹಳ್ಳಿ ಬಳಿ 1 ಹೊಸ ಬೋನ್ ಇರಿಸಿದೆ. ಫಲವನಹಳ್ಳಿ ಬಳಿ 4, ಅರಬಗಟ್ಟೆಯಲ್ಲಿ ಒಂದು ಬೋನ್ ಇಡಲಾಗಿದೆ.

    ಏನೇನು ಬಳಕೆ..?
    ತಲಾ ಒಂದೊಂದು ನಾಯಿಗಳ ಸಮೇತ 6 ಬೋನ್‌ಗಳು, 12 ಟ್ರಾೃಪಿಂಗ್ ಕ್ಯಾಮರಾ, ಸ್ಲೈಡಿಂಗ್ ಆ್ಯಕ್ಷನ್ ಗನ್-3, ಡಿಬಿಬಿಎಲ್ ಗನ್-3, 303 ರೈಫಲ್- 3, 20 ಕೂಂಬಿಂಗ್ ದೊಣ್ಣೆಗಳನ್ನು ಹಾಗೂ ತಲಾ 15 ಸಿಬ್ಬಂದಿಯುಳ್ಳ 5 ತಂಡಗಳನ್ನು ಚಿರತೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
    ಹೊನ್ನಾಳಿಯಲ್ಲೂ ಹಾವಳಿ
    ಚಿರತೆ ಹಾವಳಿ ಕೇವಲ ನ್ಯಾಮತಿ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಹೊನ್ನಾಳಿ ತಾಲೂಕಿನಲ್ಲೂ ಇದೆ. ಕತ್ತಿಗೆ, ಮಾದೇನಹಳ್ಳಿ, ಅರಬಗಟ್ಟೆ ಗ್ರಾಮದ ಸಮೀಪ ಇಂದಿರಾ ಗಾಂಧಿ ವಸತಿ ಶಾಲೆ ಬಳಿ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡಿದೆ. ಈಗಾಗಲೇ ಮಾದೇನಹಳ್ಳಿ ಹಾಗೂ ಕತ್ತಿಗೆ ಗ್ರಾಮದ ಸಮೀಪ ಬೋನ್ ಇಟ್ಟಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಚಿರತೆ ಮಾತ್ರ ಆಗಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆ ಕಡೆಸಿದೆ.

    ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಹಾಗೂ ಕತ್ತಿಗೆ ಸಮೀಪ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯ ಬೀಳಿಸಿದೆ. ಅರಣ್ಯ ಇಲಾಖೆಯವರು ಗ್ರಾಮದ ಹೊರ ಭಾಗದಲ್ಲಿ ಬೋನ್ ಇಟ್ಟಿದ್ದಾರೆ. ಆದರೆ ಚಿರತೆ ಕಾಣಿಸಿಕೊಳ್ಳುತ್ತಿರುವುದು ಮಾದೇನಹಳ್ಳಿ ಹಾಗೂ ಕತ್ತಿಗೆ ಗ್ರಾಮದ ನಡುವೆ. ಹಾಗಾಗಿ ಇಲ್ಲಿ ಬೋನ್ ಇಟ್ಟರೆ ಒಳ್ಳೆಯದು.
    ಸಿದ್ದೇಶ್, ಕತ್ತಿಗೆ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts