More

    ಕೊಳೆ ರೋಗದಿಂದ ಅಡಕೆ ಇಳುವರಿ ಕುಂಠಿತ

    ಆಲ್ದೂರು (ಚಿಕ್ಕಮಗಳೂರು ತಾ.): ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಡಕೆ ಬೆಳೆಗಾರರು ನಲುಗಿದ್ದಾರೆ. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಕೊಳೆ ರೋಗ ಹರಡಿ ಅಡಕೆ ಕೊಳೆತು ಉದುರಿದೆ. ಈ ರೋಗ ಬಾಧೆ ಕಾಫಿ ತೋಟದ ನಡುವೆ ಬೆಳೆದ ಅಡಕೆಗೆ ಹೆಚ್ಚಾಗಿ ತಗುಲಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

    ಆಲ್ದೂರು ಭಾಗದಲ್ಲಿ 144 ಎಕರೆ ಅಡಕೆ ತೋಟವಿದ್ದು 2-3 ವರ್ಷಗಳಿಂದ ಹಿಂಗಾರು ರೋಗ ಬಾಧೆ ಕಾಣಿಸತೊಡಗಿದೆ. ಮಲೆನಾಡಿನ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿರುವ ಅಡಕೆಗೆ 3-4 ವರ್ಷಗಳಿಂದ ಉತ್ತಮ ಧಾರಣೆ ಬಂದಿದ್ದು ಹಸಿ ಅಡಕೆ ಕೆಜಿಗೆ 37 ರೂ. ದರ ಪಡೆದುಕೊಂಡಿದೆ. ಆದರೆ ಈ ಬಾರಿ ಅಡಕೆ ಫಸಲು ಕಡಿಮೆಯಾಗಿದೆ.

    ಕೂಲಿ ಕಾರ್ವಿುಕರ ಸಮಸ್ಯೆ, ದುಪ್ಪಟ್ಟು ಕೂಲಿ, ಹೆಚ್ಚುತ್ತಿರುವ ರಸಗೊಬ್ಬರದ ಧಾರಣೆಯಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜತೆ ಗಾಯದ ಮೇಲೆ ಬರೆ ಎಳೆದಂತೆ ಅತಿವೃಷ್ಟಿಯಿಂದಾಗಿ ಅಡಕೆ ಕಾಯಿಗಳು ಉದುರಿದ್ದು ಈ ವರ್ಷದ ಫಸಲು ಬಹುತೇಕ ನೆಲಕಚ್ಚಿದೆ.

    ಜಿಲ್ಲೆಯ ಬಹು ಭಾಗಗಳಲ್ಲಿ ಅಡಕೆ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕೆಲವು ಬೆಳೆಗಾರರು ಭತ್ತದ ಗದ್ದೆಗಳಲ್ಲಿ ಪ್ರತ್ಯೇಕವಾಗಿ ಅಡಕೆ ಬೆಳೆದಿದ್ದಾರೆ. ಇನ್ನು ಕೆಲವರು ಕಾಫಿ ತೋಟಗಳ ಮಧ್ಯೆ ಬೆಳೆದಿದ್ದಾರೆ. ಆಲ್ದೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ಬೆಳೆಗಾರರು ಹಸಿ ಅಡಕೆಯನ್ನೇ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಹುಂಡಿ ಅಥವಾ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಈ ಭಾಗದಲ್ಲಿ ಕೆಲವರು ಅಡಕೆ ಬೆಳೆಯನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡದೆ ಕಾಫಿ ತೋಟಗಳ ಮಧ್ಯೆ ಬೆಳೆಯುತ್ತಿದ್ದಾರೆ. ಇತಿ್ತೕಚಿನ ದಿನಗಳಲ್ಲಿ ಈ ಭಾಗದ ಅಡಕೆ ತೋಟಗಳಿಗೆ ಕೊಳೆ ರೋಗ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕೊಳೆ ನಿರೋಧಕ ಔಷಧ ಸಿಂಪಡಣೆ ಮಾಡಿ ಬೆಳೆ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಅಡಕೆಯನ್ನೇ ಪ್ರತ್ಯೇಕವಾಗಿ ಬೆಳೆದ ಬೆಳೆಗಾರರು ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ಆದರೆ ಕಾಫಿ ತೋಟದ ಮಧ್ಯೆ ಉಪ ಬೆಳೆಯಾಗಿ ಬೆಳೆದ ಅಡಕೆ ಬೆಳೆಗಾರರು ಕೈಚೆಲ್ಲಿ ಕುಳಿತಿದ್ದು ಇಂತಹ ತೋಟಗಳಲ್ಲಿ ಅಡಕೆ ಫಸಲು ಸಂಪೂರ್ಣವಾಗಿ ನೆಲಕಚ್ಚಿದೆ.

    ನಾವು ಈ ಬಾರಿ ಅಡಕೆ ತೋಟಗಳಿಗೆ ರೋಗ ನಿರೋಧಕ ಔಷಧ ಸಿಂಪಡಣೆ ಮಾಡಿದ್ದು ಶೇ.40-50 ರಷ್ಟು ಫಸಲು ಉಳಿಸಿಕೊಳ್ಳಲು

    ಸಾಧ್ಯವಾಯಿತು. ಕೆಲವು ಅಡಕೆ ಮರಗಳಲ್ಲಿ ಕಾಯಿಗಳು ಕೊಳೆತಿವೆ. ಇನ್ನು ಕೆಲವು ಮರಗಳಲ್ಲಿ ಕಾಯಿಗಳು ಉದುರಿವೆ. 3-4 ವರ್ಷಗಳಿಂದ ಇದೇ ಸಮಸ್ಯೆ ಕಾಡುತ್ತಿದೆ. ಈ ಬಾರಿ ಅಡಕೆಗೆ ಉತ್ತಮ ಧಾರಣೆಯಿದ್ದು ಹಸಿ ಅಡಕೆ ಕೆಜಿಗೆ 37-40 ರೂ.ವರೆಗೆ ಧಾರಣೆ ಇದೆ ಎನ್ನುತ್ತಾರೆ ಅಡಕೆ ಬೆಳೆಗಾರ ಬೋರಿಗುಡ್ಡೆ ಮಂಜುನಾಥ್.

    ವಾತಾವರಣದ ವೈಪರೀತ್ಯ ಹಾಗೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಅಡಕೆ ತೋಟಗಳಿಗೆ ಕೊಳೆ ರೋಗ ಹರಡುತ್ತಿದೆ. ಕೊಳೆ ರೋಗ ಅರೆ ಮಲೆನಾಡು, ಬಯಲು ಸೀಮೆ ಭಾಗದಲ್ಲಿ ಹೆಚ್ಚು ಕಂಡು ಬಂದಿತ್ತು. 3-4 ವರ್ಷಗಳಿಂದ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿಯೂ ಕಂಡು ಬರುತ್ತಿದೆ. ಮೊದಲ ಸುತ್ತು ಅಡಕೆ ಕೊಯ್ಲು ಮಾಡಿದ ತಕ್ಷಣ ಕಾರ್ಬನ್ ಡೆನ್ಜಿಂಮ್ ಮತ್ತು ಮ್ಯಾಂಕ್​ಜೆಫ್ ಸಿಂಪಡಣೆ ಮಾಡಿದರೆ ಕೊಳೆರೋಗ ಹತೋಟಿಗೆ ತರಬಹುದು ಎಂಬುದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಿರೀಶ್ ಅವರ ಅಭಿಪ್ರಾಯ.

    ಅಡಕೆ ರೋಗ ಬಾಧೆ ತಡೆಯಲು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಿರೀಶ್ (ಮೊ. 9739916660) ಅವರನ್ನು ಸಂರ್ಪಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts