More

    Web Exclusive: ಶುಶ್ರೂಷಾಧಿಕಾರಿಗಳ ಕೂಗು ಕೇಳುತ್ತಿಲ್ಲ: ಸರ್ಕಾರ ವಿರುದ್ಧ ನರ್ಸ್​ಗಳ ಸಮರ

    | ರೇವಣಸಿದ್ದಪ್ಪ ಪಾಟೀಲ್ ಬೀದರ್

    ವೇತನ ಪರಿಷ್ಕರಣೆ ಸಂಬಂಧ ಪ್ರತಿಭಟನಾನಿರತ ವೈದ್ಯರ ಜತೆ ಸಂಧಾನ ಸಭೆ ನಡೆಸಿ ಅವರ ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ರಾಜ್ಯ ಸರ್ಕಾರ, ಶುಶ್ರೂಷ ಅಧಿಕಾರಿ (ನರ್ಸ್)ಗಳ ಬೇಡಿಕೆ ಈಡೇರಿಕೆ ವಿಷಯ ಬಂದಾಗ ತೆಪ್ಪಗೆ ಕುಳಿತಿದೆ. ಸರ್ಕಾರದ ಈ ತಾರತಮ್ಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ನರ್ಸ್​ಗಳು ಹೋರಾಟಕ್ಕೆ ಅಣಿಯಾಗಿದ್ದಾರೆ.

    ಆರೋಗ್ಯ ಇಲಾಖೆಯಲ್ಲಿರುವ ಶುಶ್ರೂಷ ಅಧಿಕಾರಿಗಳ ಪದೋನ್ನತಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿತ್ತು. ಈ ಗಡುವು ಮುಗಿದು ವಾರವಾಗುತ್ತಿದ್ದರೂ ಬಾಯಿ ಬಿಡದ ಆರೋಗ್ಯ ಇಲಾಖೆ ವಿರುದ್ಧ ನರ್ಸ್​ಗಳು ಸಿಟ್ಟಿಗೆದಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಧೋರಣೆ ಬಿಡದಿದ್ದರೆ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಗುಡುಗಿದ್ದಾರೆ.

    ವೈದ್ಯರ ಮುಷ್ಕರಕ್ಕೆ ಮುನ್ನವೇ ಶುಶ್ರೂಷ ಅಧಿಕಾರಿಗಳ ಪದೋನ್ನತಿ ಸೇರಿ ವಿವಿಧ ಬೇಡಿಕೆ ಮಂಡಿಸಿ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿ ಗಡುವು ವಿಧಿಸಲಾಗಿತ್ತು. ಆರೋಗ್ಯ ಇಲಾಖೆ ವೈದ್ಯರ ವೇತನ ಪರಿಷ್ಕರಣೆ ಬೇಡಿಕೆಗೆ ಸ್ಪಂದಿಸಿದೆ. ಆದರೆ ಶುಶ್ರೂಷ ಅಧಿಕಾರಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕರೊನಾ ವಾರಿಯರ್ಸ್​ಗಳಾಗಿ ಹಗಲಿರುಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ನಮ್ಮ ಬಗ್ಗೆ ಏಕೆ ತಾತ್ಸಾರ ಧೋರಣೆ ಎಂಬುದು ನರ್ಸ್​ಗಳ ಪ್ರಶ್ನೆಯಾಗಿದೆ.

    ರಾಜ್ಯದಲ್ಲಿ ಸುಮಾರು 15 ಸಾವಿರ ಶುಶ್ರೂಷ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಸರ್ಕಾರ ತಾರತಮ್ಯ ನೀತಿ ಕೈಬಿಟ್ಟು ಬೇಡಿಕೆ ಈಡೇರಿಸಲು ಮುಂದಾಗಬೇಕು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಂಬಂಧ ಶೀಘ್ರ ಸಂಘದ ಸಭೆ ನಡೆಸಿ ಮೊದಲ ಹಂತವಾಗಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಾಗುವುದು. ಇದಕ್ಕೂ ಮಣಿಯದಿದ್ದರೆ ಕೆಲಸ ಬಹಿಷ್ಕರಿಸಿ ಉಗ್ರ ಸ್ವರೂಪದ ಹೋರಾಟ ಮಾಡುವುದು ಅನಿವಾರ್ಯ ಎಂದು ಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ ಎಚ್ಚರಿಸಿದ್ದಾರೆ. ವೈದ್ಯರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಮುಷ್ಕರಕ್ಕೆ ಬ್ರೇಕ್ ಹಾಕಿದ್ದ ಸರ್ಕಾರಕ್ಕೆ ಈಗ ನರ್ಸ್​ಗಳ ಹೋರಾಟದ ಬಿಸಿ ತಟ್ಟುವ ಸಾಧ್ಯತೆಗಳಿವೆ.

    ವೇತನ ಪರಿಷ್ಕರಣೆ ಸಂಬಂಧ ವೈದ್ಯರ ಹೋರಾಟಕ್ಕೆ ಆರೋಗ್ಯ ಇಲಾಖೆ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ಅದೇ ಇಲಾಖೆಯಲ್ಲಿರುವ ಶುಶ್ರೂಷ ಅಧಿಕಾರಿಗಳ ಬೇಡಿಕೆಗೆ ಕಡೆಗಣಿಸುತ್ತಿರುವುದು ಸರಿಯಲ್ಲ. ಸರ್ಕಾರ ನಮ್ಮ ಬೇಡಿಕೆಗೆ ನಿರ್ಲಕ್ಷಿಸಿದರೆ ಶೀಘ್ರದಲ್ಲಿ ರಾಜ್ಯವ್ಯಾಪಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುವುದು. ನಂತರ ಸಭೆ ನಡೆಸಿ ಉಗ್ರ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು.

    | ರಾಜಕುಮಾರ ಮಾಳಗೆ, ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts