More

    ಕರೊನಾ ಅಬ್ಬರ ಉಲ್ಬಣ: ದೈನಿಕ ಕೇಸ್​ನಲ್ಲಿ ಏರಿಕೆ, ಒಮಿಕ್ರಾನ್ ಪ್ರಕರಣದಲ್ಲೂ ಹೆಚ್ಚಳ

    ನವದೆಹಲಿ: ಭಾರತದಲ್ಲಿ ಮಾರಕ ಒಮಿಕ್ರಾನ್ ಪ್ರಭೇದದ ಸಂಖ್ಯೆಯಲ್ಲಿ ಏರಿಕೆ ಮಾತ್ರವಲ್ಲದೆ ಒಟ್ಟಾರೆ ಕರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದು ಮಹಾಮಾರಿಯ ಮೂರನೇ ಅಲೆಗೆ ಮುನ್ನುಡಿಯಾಗಿರಬಹುದೆಂಬ ಆತಂಕ ಕಾಡಲಾರಂಭಿಸಿದೆ. ಶುಕ್ರವಾರ ದೇಶದಲ್ಲಿ ಕರೊನಾ ಸಾಂಕ್ರಾಮಿಕತೆಯ 16,764 ಹೊಸ ಪ್ರಕರಣಗಳು ದಾಖಲಾಗಿವೆ. ಗುರುವಾರ 13,154 ಕೇಸ್​ಗಳು ವರದಿಯಾಗಿದ್ದು ಒಂದೇ ದಿನದಲ್ಲಿ ದೈನಿಕ ಕೇಸ್​ನಲ್ಲಿ 3,600ಕ್ಕೂ ಅಧಿಕ ಏರಿಕೆ ದಾಖಲಾಗಿದ್ದರಿಂದ ಚಿಂತೆ ಉಂಟಾಗಿದೆ.

    ಸೋಂಕಿನ ದೈನಿಕ ಕೇಸ್ ಕಳೆದ 64 ದಿನಗಳಲ್ಲಿ 16,000ದ ಗಡಿ ದಾಟಿದ್ದು ಇದೇ ಮೊದಲ ಸಲವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದೊಂದು ದಿನದಲ್ಲಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿಯ 309 ಕೇಸ್​ಗಳು ವರದಿಯಾಗಿದ್ದು ಹೊಸ ತಳಿಯ ಪ್ರಕರಣದ ಸಂಖ್ಯೆ 1,270ಕ್ಕೆ ಏರಿದೆ. ಸಕ್ರಿಯ ಕೇಸ್​ಗಳ ಸಂಖ್ಯೆ 91,361ಕ್ಕೆ ಏರಿರುವುದು ಕೂಡ ಕಳವಳ ಹೆಚ್ಚಲು ಇನ್ನೊಂದು ಕಾರಣವಾಗಿದೆ.

    1,270 ಒಮಿಕ್ರಾನ್ ಕೇಸ್: ವೇಗವಾಗಿ ಹರಡುವ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ಈಗ ಭಾರತದ 23 ರಾಜ್ಯಗಳಲ್ಲಿ ಪತ್ತೆಯಾಗಿದ್ದು 309 ಹೊಸ ಕೇಸ್​ನೊಂದಿಗೆ ಒಟ್ಟು 1,270 ಜನರು ಹೊಸ ರೂಪಾಂತರಿಯಿಂದ ಸೋಂಕಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 450 ಹಾಗೂ ದೆಹಲಿಯಲ್ಲಿ 320 ಒಮಿಕ್ರಾನ್ ಪ್ರಕರಣಗಳಿವೆ. ಕೇರಳದಲ್ಲಿ 109 ಪ್ರಕರಣಗಳಿದ್ದು ಕರ್ನಾಟಕದಲ್ಲಿ 34 ಕೇಸ್​ಗಳು ದೃಢಪಟ್ಟಿವೆ.

    ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ: ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ಪ್ರಭೇದ ಭಾರತ ಸಹಿತ ಜಗತ್ತಿನ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಹೇರುವುದು ನಿಶ್ಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ. ಆಸ್ಪತ್ರೆಗಳ ಒಳರೋಗಿ ವಿಭಾಗಗಳ ಜೊತೆ ಹೊರ ರೋಗಿ ವಿಭಾಗಗಳಿಗೆ ಚಿಕಿತ್ಸೆ ಹೊಣೆ ಸ್ಥಳಾಂತರಗೊಳ್ಳಲಿದೆ. ಐಸಿಯುನಿಂದ ಮನೆಯಲ್ಲೇ ಕಾಳಜಿ ವಹಿಸುವ ಕ್ರಮ ಹೆಚ್ಚಲಿದೆ ಎಂದು ಅವರು ವಿವರಿಸಿದ್ದಾರೆ. ಸೋಂಕು ತುಂಬಾ ಬೇಗನೆ ಹರಡಿ ಬಹಳಷ್ಟು ಜನರು ರೋಗಗ್ರಸ್ಥರಾಗಲಿದ್ದಾರೆ. ಜನರು ಚಿಂತಿತರಾಗಿದ್ದಾರೆ. ನಿಮಗೆ ಸೋಂಕಿನ ಲಕ್ಷಣ ಇಲ್ಲದಿದ್ದರೂ ವೈದ್ಯರೊಂದಿಗೆ ಸಮಾಲೋಚಿಸಲು ಬಯಸುತ್ತೀರಿ. ಆರೋಗ್ಯ ಕಾರ್ಯಕರ್ತರನ್ನು ಕಂಡು ಸಲಹೆ ಪಡೆಯಲು ಇಚ್ಛಿಸುತ್ತೀರಿ. ಅವೆಲ್ಲದಕ್ಕೆ ನಾವು ಸಿದ್ಧರಾಗಬೇಕಿದೆ’ ಎಂದು ಸ್ವಾಮಿನಾಥನ್ ಹೇಳಿದ್ದಾರೆ.

    ರಾತ್ರಿ ಕರ್ಫ್ಯೂ ಅವೈಜ್ಞಾನಿಕ: ಕರೊನಾ ಸೋಂಕು ನಿಯಂತ್ರಿಸಲು ಭಾರತದಲ್ಲಿ ಹೇರುತ್ತಿರುವ ರಾತ್ರಿ ಕರ್ಫ್ಯೂಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ಭಾರತದಂಥ ದೇಶಗಳು ವೈಜ್ಞಾನಿಕ ನೀತಿಗಳನ್ನು ರೂಪಿಸುವುದು ಅಗತ್ಯ ಎಂದು ಸಂದರ್ಶನವೊಂದರಲ್ಲಿ ಅವರು ಪ್ರತಿಪಾದಿಸಿದ್ದಾರೆ.

    ವಿಮಾನ ಟಾಯ್ಲೆಟ್​ನಲ್ಲಿ ಕ್ವಾರಂಟೈನ್!
    ಅಮೆರಿಕದ ಷಿಕಾಗೋದಿಂದ ಐಸ್​ಲ್ಯಾಂಡ್​ಗೆ ಪ್ರಯಾಣಿಸುತ್ತಿದ್ದ ಮಹಿಳೆ ಕರೊನಾ ಪಾಸಿಟಿವ್ ಆಗಿರುವುದು ಪ್ರಯಾಣದ ಮಧ್ಯದಲ್ಲೇ ದೃಢಪಟ್ಟಿದ್ದರಿಂದ ಆಕೆ ವಿಮಾನದ ಟಾಯ್ಲೆಟ್​ನಲ್ಲಿ ಮೂರು ಗಂಟೆ ಕಾಲ ಸ್ವಯಂ-ಕ್ವಾರಂಟೈನ್​ಗೆ ಒಳಪಟ್ಟ ಘಟನೆ ವರದಿಯಾಗಿದೆ. ಡಿಸೆಂಬರ್ 19ರಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಟಲು ಕೆರೆತ ಆರಂಭವಾದ್ದರಿಂದ ಬಾತ್​ರೂಮ್ೆ ತೆರಳಿ ರ್ಯಾಪಿಡ್ ಕೋವಿಡ್ ಟೆಸ್ಟ್ ನಡೆಸಿಕೊಂಡಿದ್ದಾಗಿ ಮಿಚಿಗನ್​ನ ಶಿಕ್ಷಕಿ ಮರೀಸಾ ಫೋಟಿಯೊ ಹೇಳಿದ್ದಾರೆ. ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದರಿಂದ ಟಾಯ್ಲೆಟ್​ನಲ್ಲೇ 3 ಗಂಟೆ ಸ್ವಯಂ-ಕ್ವಾರಂಟೈನ್​ಗೆ ಒಳಪಟ್ಟೆ ಎಂದು ಆಕೆ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾಳೆ.

    ಅಮೆರಿಕದಲ್ಲಿ ಆತಂಕ
    ಅಮೆರಿಕದ ಅತಿ ಹೆಚ್ಚು ಜನದಟ್ಟಣೆಯ ರಾಜ್ಯ ನ್ಯೂಜೆರ್ಸಿಯಲ್ಲಿ ಕಳೆದ ಒಂದು ವಾರದಿಂದೀಚೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಶೇಕಡ 60ರಷ್ಟು ಏರಿಕೆಯಾಗಿದೆ. 24 ಗಂಟೆ ಅವಧಿಯಲ್ಲಿ 38 ಕರೊನಾ ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಂದೇ ದಿನ ದಾಖಲೆಯ 27,975 ಕೇಸ್​ಗಳು ವರದಿಯಾಗಿದ್ದು ಕೆಲವು ನಗರಗಳಲ್ಲಿ ಮೇಯರ್​ಗಳು ಕಠಿಣ ನಿರ್ಬಂಧಗಳನ್ನು ಹೇರಿದ್ದಾರೆ.

    ಫ್ರಾನ್ಸ್​ನಲ್ಲಿ ಪ್ರಮುಖ ತಳಿ
    ಒಮಿಕ್ರಾನ್ ಫ್ರಾನ್ಸ್​ನಲ್ಲಿ ಕಾಡುತ್ತಿರುವ ಪ್ರಮುಖ ತಳಿಯಾಗಿ ಹೊರಹೊಮ್ಮುತ್ತಿದೆ. ವಾರದ ಆರಂಭದಲ್ಲಿ ಪರೀಕ್ಷೆ ನಡೆಸಲಾದ ಸ್ಯಾಂಪಲ್​ಗಳಲ್ಲಿ ಶೇಕಡ 62.4ರಷ್ಟು ಒಮಿಕ್ರಾನ್ ಕೇಸ್​ಗಳು ದೃಢಪಟ್ಟಿವೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆ ವಿವರಿಸಿದೆ.

    ಔಷಧಗಳ ಕೊರತೆ ಭೀತಿ
    ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ ಅಮೆರಿಕದಲ್ಲಿ ಏರಿಕೆಯಾಗುತ್ತಿರುವುದರ ಜೊತೆಯಲ್ಲಿ ಅಗತ್ಯ ಔಷಧಗಳ ಕೊರತೆಯೂ ಕಾಡಲಾರಂಭಿಸಿದೆ. ಆಸ್ಪತ್ರೆಗೆ ದಾಖಲಾಗಿರದ ಹೆಚ್ಚು ಅಪಾಯವಿರದ ರೋಗಿಗಳಿಗೆ ಫೈಜರ್​ನ ಪಾಕ್ಸಾಲೋವಿಡ್ ಮತ್ತು ಮೆರೆಕ್ ಕಂಪೆನಿಯ ಮೊಲ್ನುಪಿರವಿರ್ ನೀಡಲು ಆಹಾರ ಮತ್ತು ಔಷಧ ಪ್ರಾಧಿಕಾರ ಅನುಮತಿ ನೀಡಿದೆ. ಆದರೆ ಅವುಗಳ ಕೊರತೆಯಿದೆ ಎಂದು ಅಮೆರಿಕದ ಸೋಂಕು ರೋಗಗಳ ಸಂಸ್ಥೆಯ ಪ್ರತಿನಿಧಿ ಹೇಳಿದ್ದಾರೆ. ಸೊಟ್ರೊವಿಮ್ಯಾಬ್ ಕೊರತೆಯಿರುವ ಇನ್ನೊಂದು ಔಷಧಿಯಾಗಿದೆ.

    ಬೂಸ್ಟರ್ ಪಡೆಯದವರಲ್ಲಿ ಅಪಾಯ
    ಬ್ರಿಟನ್​ನಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ಗುರುವಾರದವರೆಗೆ 11,452 ಆಗಿತ್ತು. ಆ ಪೈಕಿ ಶೇಕಡ 90 ಜನರು ಬೂಸ್ಟರ್ ಡೋಸ್ ಲಸಿಕೆ ಪಡೆದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳಿವೆ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ತಳಿಯನ್ನು ಕಟ್ಟಿಹಾಕುವ ತಂತ್ರವಾಗಿ ಇಂಗ್ಲೆಂಡ್​ನ ಪ್ರತಿಯೊಬ್ಬ ವಯಸ್ಕರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಅವಕಾಶವಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರ ಪ್ರಕಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts