More

    17ನೇ ವಯಸ್ಸಿಗೆ ಮದುವೆ ಆದರೆ ಬುದ್ಧಿವಂತ ಮಕ್ಕಳು ಹುಟ್ತಾರೆ..!

    ಡಾ.ಚನ್ನಣ್ಣ ವಾಲೀಕರ ವೇದಿಕೆ: ನಿಜ ಕಾರಣ ಹೇಳಿದರೆ ತಪ್ಪಾಗುತ್ತದೆ. ಸರ್ಕಾರದ ಪ್ರಕಾರ ಗಂಡಿಗೆ 21, ಹೆಣ್ಣುಗೆ 18 ವರ್ಷ ಎಂದು ವಯಸ್ಸು. ಆದರೆ, ವೈಜ್ಞಾನಿಕವಾಗಿ 17 ವರ್ಷಕ್ಕೆ ಮದುವೆ ಆಗಬೇಕು. ಹಾರ್ಮೋನ್​ಗಳ ಬೆಳವಣಿಗೆಗೆ ಪೂರಕವಾದ ಈ ವಯಸ್ಸಿನಲ್ಲಿ ಮದುವೆಯಾದರೆ ಬುದ್ಧಿವಂತ ಮಕ್ಕಳು ಹುಟ್ಟುತ್ತಾರೆ.

    ಹೀಗೊಂದು ಸ್ವಾರಸ್ಯಕರ ವಿಚಾರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪವಾಯಿತು. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಗೋಷ್ಠಿಯಲ್ಲಿ ಸಭಿಕರೊಂದಿಗೆ ಸಂವಾದದ ವೇಳೆ ಇಂತಹ ಚರ್ಚೆ ನಡೆಯಿತು.

    ಈ ವೇಳೆ ವೈದ್ಯ ವಿಜ್ಞಾನದ ಬಗ್ಗೆ ಡಾ.ಎಸ್.ಎಸ್. ಪಾಟೀಲ್ ಮಂದರವಾಡರಿಗೆ ಈ ಪ್ರಶ್ನೆ ಎದುರಾಯಿತು. ಅದಕ್ಕುತ್ತರಿಸಿದ ಅವರು, ಎಲ್ಲದರಲ್ಲೂ ಹಿಂದುಳಿದಿರುವ ಬಿಹಾರದವರೇ ಅತಿ ಹೆಚ್ಚು ಐಎಎಸ್ ಪರೀಕ್ಷೆಯನ್ನೇಕೆ ಪಾಸ್ ಮಾಡುತ್ತಾರೆಂದರೆ ಇದೇ ಕಾರಣಕ್ಕೆ. ಜರ್ಮನಿಯಲ್ಲೂ ಇಂಥದ್ದು ನಡೆಯುತ್ತದೆ. ಮುಂದಿನ ತಲೆಮಾರುಗಳಾದರೂ 17 ವರ್ಷಕ್ಕೆ ಮದುವೆಯಾಗುವುದು ಸೂಕ್ತ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

    ಇದೇ ವೇಳೆ ಇನ್ನೊಂದು ಸಂಗತಿ ಪ್ರಸ್ತಾಪಿಸಿ ಹಾಸ್ಯದ ಹೊನಲು ಹರಿಸಿದರು. ಆಲ್ಕೋಹಾಲ್ ಕುಡಿಯುವವರಿಗೆ ಹೆಚ್ಚು ರೋಗ ಬರುವುದಕ್ಕಿಂತ, ಇವರೊಟ್ಟಿಗೆ ಕುಳಿತು ಕುರುಕುಲು ತಿಂಡಿಗಳನ್ನು ಮೆಲ್ಲುವವರಿಗೇ ಅಪಾಯ ಕಟ್ಟಿಟ್ಟ ಬುತ್ತಿ ಎಂದಾಗ ಇಡೀ ಸಭೆಯಲ್ಲಿ ನಗೆ ಕಾಣಿಸಿತು.

    ಮುಟ್ಟು ಮುಂದೂಡಿದ್ರೆ ಕ್ಯಾನ್ಸರ್: ಮಡಿ ಮಡಿ ಎಂದು ಮುಟ್ಟು ಮುಂದೂಡಿದರೆ ಮಾರಕ ಕ್ಯಾನ್ಸರ್ ಕಾಯಿಲೆ ಬರುತ್ತದೆ ಎಂದು ವೈದ್ಯ ವಿಜ್ಙಾನ ಗೋಷ್ಠಿಯಲ್ಲಿ ಡಾ.ಡಾ.ಎಸ್.ಎಸ್. ಪಾಟೀಲ ಮಂದರವಾಡ ಹೇಳಿದರು.

    ದೇವರ ಪೂಜೆ, ಹಬ್ಬ, ಮಡಿ ಎಂದು ಮುಟ್ಟನ್ನು ಮುಂದೆ ಹಾಕುವುದು ಅವಲಕ್ಷಣ. ಅದು ನಿಸರ್ಗ ಕ್ರಿಯೆ ಅಷ್ಟೆ ಎಂದು ಹೇಳಿದ ಅವರು ತಮ್ಮ ಸ್ವರಚಿತ ಕವನವನ್ನೇ ವಾಚಿಸಿ ಗಮನ ಸೆಳೆದರು. ಮಹಿಳೆ ಪೂಜಿಸುವ ಲಕ್ಷ್ಮೀ ದೇವರು ಮುಟ್ಟು ಆಗುವುದಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

    ಬೆಂಗಳೂರು ಸಾಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಿ: ಹತ್ತು ವರ್ಷ ಮುಗಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಬೀಗ ಹಾಕಿಬಿಡಿ, ಇಷ್ಟು ವರ್ಷ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಸಾಕು ಇನ್ನಾದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಿ ಎಂದು ಭೂಗರ್ಭ ವಿಜ್ಞಾನಿ ಡಾ.ಎಚ್.ಎಂ.ಎಸ್. ಪ್ರಕಾಶ್ ಸರ್ಕಾರಕ್ಕೆ ಖಡಕ್ ಸಲಹೆ ನೀಡಿದ್ದಾರೆ.

    ಪರಿಸರ ವಿಜ್ಞಾನದ ಬಗ್ಗೆ ಮಾತನಾಡಿದ ಅವರು, ಅಭಿವೃದ್ಧಿಗೆ ಆದ್ಯತೆ ಸಿಗದ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಾರೆ. ಕರ್ನಾಟಕ ಒಂದಾಗಿ ಇರಬೇಕೆಂಬುದು ನನ್ನ ಆಶಯ. ಬೆಂಗಳೂರು ಅಭಿವೃದ್ಧಿಗೆ ಗಮನ ನೀಡುವ ಮೊದಲು ಸರ್ಕಾರ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಿ ಎಂದರು.

    ನದಿ ತಿರುವಿನ ಬಗ್ಗೆ ಪ್ರಸ್ತಾಪಿಸಿದ ಅವರು, ನದಿ ತಿರುವಿನಿಂದ ಹಲವು ಸಮಸ್ಯೆಗೆ ಪರಿಹಾರ ಸಿಗಲಿದೆ. ಪ್ರವಾಹ ಸಂದರ್ಭದಲ್ಲಿಯಾದರೂ ನೀರನ್ನು ಬೇರೆಡೆ ತಿರುಗಿಸಿಕೊಳ್ಳಬೇಕು. ಅದಕ್ಕೆ ತಕ್ಕನಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಇದರಿಂದ ಪ್ರವಾಹವೂ ನಿಯಂತ್ರಣದಲ್ಲಿರುತ್ತದೆ, ಒಣ ಭೂಮಿಗೆ ನೀರೂ ಸಿಗುತ್ತದೆ ಎಂದು ಹೇಳಿದರು.

    ಕಲಬುರಗಿ ಭಾಗದಲ್ಲಿ ಸಿಮೆಂಟ್ ಕಾರ್ಖಾನೆಗಳು ಹೆಚ್ಚಿವೆ. ಇದರಿಂದ ಮಳೆ ಸುರಿಯಲು ತೊಂದರೆಯಾಗುತ್ತದೆ. ಕಾರ್ಖಾನೆಯಿಂದ ಬರುವ ಹೊಗೆ ದಪ್ಪ ಪದರವಾಗಿ ಮಳೆ ಮಾರುತ ಚಲನೆಗೆ ಅಡ್ಡಿಯಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts