More

    ಮನೆ ಬಾಗಿಲಿಗೆ ನರೇಗಾ ಮಾಹಿತಿ

    ಲಕ್ಷ್ಮೇಶ್ವರ: ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶ ಹಾಗೂ ಪ್ರತಿ ಮನೆಗೂ ನರೇಗಾ ಯೋಜನೆ ತಲುಪಿಸುವ ಗುರಿಯೊಂದಿಗೆ 2024-25ನೇ ಸಾಲಿನ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಮನೆ ಮನೆಗೆ ಅಭಿಯಾನ ಅ. 2ರಿಂದ ಶುರುವಾಗಿದೆ.

    ತಾಲೂಕಿನಾದ್ಯಂತ ನರೇಗಾ ಯೋಜನೆಯ ಮಹತ್ವ ಹಾಗೂ ಯೋಜನೆಯ ಅವಕಾಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಗುರಿಯನ್ನಿಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಯೋಜನೆಯ ಮಾಹಿತಿ ಭಿತ್ತಿಪತ್ರಗಳನ್ನು ತಲುಪಿಸಲಾಗುತ್ತದೆ. ಒಂದು ತಿಂಗಳ ಕಾಲ ಗ್ರಾಮದ ಪ್ರತಿ ಮನೆಗೂ ನರೇಗಾ ಯೋಜನೆ ಮಾಹಿತಿ ತಲುಪಲಿದೆ. ಈಗಾಗಲೇ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯ ಸಾಕಾರಕ್ಕೆ ಕಾರ್ಯಕ್ರಮ ರೂಪಿಸಲಾಗುತ್ತಿದೆ.

    ಅಭಿಯಾನದಲ್ಲಿ ಯೋಜನೆಯಡಿ ದೊರೆಯುವ 316 ರೂಪಾಯಿ ಕೂಲಿ ಮೊತ್ತ, ಗಂಡು, ಹೆಣ್ಣಿಗೆ ಸಮಾನ ಕೂಲಿ, ಕೆಲಸದ ಪ್ರಮಾಣ, ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯುಕ್ತಿಕ ಸೌಲಭ್ಯಗಳು, ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಶೇ. 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ.

    ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಡ್ಡಾಯ: ಪ್ರತಿ ಗ್ರಾಮ ಹಾಗೂ ಗ್ರಾಪಂ ಕಚೇರಿಯಲ್ಲಿ ನರೇಗಾ ಯೋಜನೆಯ ಬಗ್ಗೆ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯನ್ನಿಟ್ಟು ಒಂದು ತಿಂಗಳ ಕಾಲ ಬೇಡಿಕೆ ಸ್ವೀಕರಿಸಲಾಗುತ್ತಿದೆ. ಶೇ. 65ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಕಾಮಗಾರಿಗಳನ್ನು ಮೀಸಲಿಡಬೇಕು. ಮನೆ ಭೇಟಿಯ ಜತೆಗೆ ಜಾಗೃತಿ ವಾಹನದ ಮೂಲಕ ಪ್ರಚಾರಕ್ಕೂ ಸೂಚನೆ ನೀಡಲಾಗಿದೆ. ಯೋಜನೆಯ ಮಾಹಿತಿಗಾಗಿ ಕ್ಯುಆರ್ ಕೋಡ್ ಒಳಗೊಂಡ ಕರಪತ್ರ ಹಂಚಿಕೆ ನಡೆಯಲಿದೆ.

    ನರೇಗಾ ಆಯವ್ಯಯಕ್ಕೆ ಸಿದ್ಧತೆ: ಜನರಿಂದ ಸಂಗ್ರಹಿಸಿದ ಅರ್ಜಿಗಳನ್ನು ಪರಿಶೀಲಿಸಿ ನ. 15ರೊಳಗೆ ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ಅನುಮೋದಿಸಿ ಗ್ರಾಮಸಭೆಗೆ ಸಲ್ಲಿಸಬೇಕು. ನ. 30ರೊಳಗೆ ಗ್ರಾಮಸಭೆ ಪೂರ್ಣಗೊಳಿಸಿ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಬೇಕು. ಗ್ರಾಮಸಭೆಯ ಕ್ರಿಯಾಯೋಜನೆಯನ್ನು ಡಿ. 5ರೊಳಗೆ ತಾಪಂ ಸಲ್ಲಿಸಿ ಡಿ. 20ರೊಳಗೆ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲಿಂದ ರಾಜ್ಯ, ಕೇಂದ್ರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆದು 2024ರ ಫೆ. 20ರ ಬಳಿಕ ಆಯವ್ಯಯ ಸಿದ್ಧತೆ ಪೂರ್ಣಗೊಳ್ಳಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಅಭಿಯಾನ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ವರ್ಷದ ಬೇಡಿಕೆಗಳೇನು ಎಂಬುದನ್ನು ತಿಳಿದುಕೊಳ್ಳಲು ಇದು ಅನುಕೂಲವಾಗಲಿದೆ. ಬೇಡಿಕೆಗೆ ತಕ್ಕಂತೆ ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿ ಕೈಗೊಳ್ಳುವ ಮೂಲಕ ಬರಗಾಲದಿಂದ ಸಂಕಷ್ಟದಲ್ಲಿರುವ ಕೃಷಿ ಕೂಲಿಕಾರರಿಗೆ ಅನುಕೂಲ ಕಲ್ಪಿಸಲಾಗುವುದು.
    I ಧರ್ಮರ ಕೃಷ್ಣಪ್ಪ, ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts