More

    ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಗೆ ಬೀಗ! , ಜನರ ಪರದಾಟ

    ಹಟ್ಟಿಚಿನ್ನದಗಣಿ: ಕಳೆದ ನಾಲ್ಕು ದಿನಗಳಿಂದ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಗೆ ಬೀಗ ಹಾಕಲಾಗಿದ್ದು, ಜನನ-ಮರಣ ಪ್ರಮಾಣ ಪತ್ರ ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಕಚೇರಿಗೆ ಆರು ವರ್ಷಗಳಿಂದ ಕಾಯಂ ಮುಖ್ಯಾಧಿಕಾರಿ ಇಲ್ಲ. ಲಿಂಗಸುಗೂರು ಪುರಸಭೆ ಅಧಿಕಾರಿಗೆ ಪ್ರಭಾರ ನೀಡಲಾಗಿದ್ದು, ಇದರಿಂದ ಸಮಸ್ಯೆ ಉಂಟಾಗಿದೆ. ಅಲ್ಲದೇ, ಕಚೇರಿ ಎಸ್‌ಡಿಎ ಹಾಗೂ ಗುತ್ತಿಗೆ ಆಧಾರದ ನೌಕರ ಚುನಾವಣೆ ಕಾರ್ಯನಿರ್ವಹಿಸುತ್ತಿದ್ದು, ಕಚೇರಿಗೆ ಬೀಗ ಹಾಕುವಂತಾಗಿದೆ. ಸಾರ್ವಜನಿಕರು ಸರ್ಕಾರಿ ಸೇವೆ ಪಡೆಯಲು ಹರಸಾಹಸ ಪಡುವಂತಾಗಿದೆ.

    ಈ ಹಿಂದೆ ಕಚೇರಿಯು ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಪುಸ್ತಕಗಳಿಗೆ ಹಾಗೂ ಸಿಎಫ್‌ಸಿ ಅಡಿ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿತ್ತು. ಕೌಶಲಾಭಿವೃದ್ಧಿ ತರಬೇತಿ ಹಾಗೂ ವಾಸಸ್ಥಳ ಪ್ರಮಾಣ ಪತ್ರ ವಿತರಣೆ ಸೇರಿ ವಿವಿಧ ಸರ್ಕಾರಿ ಸೇವೆಗಳನ್ನು ನೀಡುತ್ತಿತ್ತು. ಹೀಗಾಗಿ ಕಚೇರಿ ಸದಾ ಜನರಿಂದ ತುಂಬಿ ತುಳುಕುತ್ತಿತ್ತು. ಈಗ ಜನನ-ಮರಣ ಪ್ರಮಾಣ ಪತ್ರ ವಿತರಣೆಗೆ ಮಾತ್ರ ಸೀಮಿತವಾಗಿದೆ.

    ಅನುದಾನದ ಕೊರತೆ:

    ಅನುದಾನದ ಸಮಸ್ಯೆಯಿಂದ ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ದೇವದುರ್ಗ, ಲಿಂಗಸುಗೂರು ಮುಖ್ಯಾಧಿಕಾರಿಗಳಿಗೆ ಪ್ರಭಾರ ಹುದ್ದೆಯನ್ನು ವಹಿಸಲಾಗುತ್ತಿತ್ತು. ಹಟ್ಟಿ ಗ್ರಾಪಂ, ಪಪಂ ಆಗಿ ಮೇಲ್ದರ್ಜೆಗೇರಿದ ನಂತರ ಮುಖ್ಯಾಧಿಕಾರಿಗೆ ಪ್ರಭಾರ ನೀಡಲಾಗುತ್ತಿದೆ. ಈಗಿರುವ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಪ್ರಭಾರ ವಹಿಸಿಕೊಳ್ಳದ ಕಾರಣ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣಗೆ ಪ್ರಭಾರ ನೀಡಲಾಗಿದೆ.

    ಸಮಸ್ಯೆಗೆ ಕಾರಣವೇನು ?:

    ಹಟ್ಟಿಯ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಯನ್ನು 22 ಕಿ.ಮೀ ದೂರದ ಲಿಂಗಸುಗೂರು ಅಧಿಕಾರಿಗೆ ಪ್ರಭಾರ ನೀಡಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಒಂದು ಜನನ-ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳುಗಟ್ಟಲೆ ಕಾಯಬೇಕು. ಮುಖ್ಯಾಧಿಕಾರಿ ಕಚೇರಿಯಲ್ಲೂ ಇರಲ್ಲ ಹಾಗೂ ಫೋನ್ ಕರೆಗೂ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

    ಇದನ್ನೂ ಓದಿ: ಸಕಾಲ ಯೋಜನೆಯಲ್ಲಿ ತತ್ಕಾಲ್ ಸೇವೆ ಆರಂಭಕ್ಕೆ ಚಿಂತನೆ
    ಅಧಿಸೂಚಿತ ಪ್ರದೇಶ ಸಮಿತಿ ಕಚೇರಿ ಹಟ್ಟಿ ಪ.ಪಂ ಜತೆ ವಿಲೀನಗೊಳಿಸಲು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜನರಿಗೆ ಸಕಾಲಕ್ಕೆ ಸರ್ಕಾರಿ ಸೇವೆಯನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಅಧಿಸೂಚಿತ ಪ್ರದೇಶ ಸಮಿತಿ ಪ್ರಭಾರವನ್ನು ಲಿಂಗಸುಗೂರು ಪುರಸಭೆ ಅಧಿಕಾರಿಗೆ ನೀಡಿರುವುದು ಕುರಿತು ತಿಳಿದುಕೊಳ್ಳಲಾಗುವುದು. ಹಟ್ಟಿ ಮುಖ್ಯಾಧಿಕಾರಿಗೆ ಪ್ರಭಾರ ವಹಿಸಲು ಕ್ರಮಕೈಗೊಳ್ಳಲಾಗುವುದು. ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸೂಚಿಸಲಾಗುವುದು.
    ಡಿ.ಎಸ್.ಜಮಾದಾರ್
    ತಹಸೀಲ್ದಾರ್, ಲಿಂಗಸುಗೂರು


    ಅನುದಾನವಿಲ್ಲದ ಕಚೇರಿ ಅಧಿಕಾರಿ ವಹಿಸಿಕೊಳ್ಳಲು ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಸರ್ಕಾರ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಹಟ್ಟಿ ಪ.ಪಂ ಮುಖ್ಯಾಧಿಕಾರಿಗೆ ಪ್ರಭಾರ ಜವಾಬ್ದಾರಿ ನೀಡಬೇಕು.
    ವಿಜ್ಞೇಶ್ ನಾಯಕ್, ಹಟ್ಟಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts