More

    ನಾಮಫಲಕಗಳಲ್ಲಿ ಕನ್ನಡ ಬಳಸದ ಮಳಿಗೆಗೆ ನೋಟಿಸ್ ಎಚ್ಚರಿಕೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ಪ್ರಮಾಣದ ಕನ್ನಡ ಭಾಷೆಯನ್ನು ಬಳಸದಿದ್ದಲ್ಲಿ ನೋಟಿಸ್ ನೀಡಲಾಗುವುದು ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,
    ನಗರದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್, ಮಾಲ್ ಸೇರಿ ಇನ್ನಿತರ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಈ ನಿಯಮ ಪಾಲನೆ ಮಾಡದ ಮಳಿಗೆಗಳ ವಿರುದ್ಧ ಶಿಸ್ತುಕ್ರಮವಾಗಿ ನೋಟಿಸ್ ಜಾರಿ ಮಾಡುವಂತೆ ವಲಯ ಆಯುಕ್ತರಿಗೆ ಸೂಚನೆ ನೀಡಿದರು.

    ಮೊದಲ ಹಂತದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿವ ವಾಣಿಜ್ಯ ಮಳಿಗೆಗಳ ಸರ್ವೇ ಕಾರ್ಯವನ್ನು ಪ್ರಾರಂಭಿಸಿ ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸದಿರುವ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಬೇಕು. ನಂತರ ಅನುಷ್ಠಾನಗೊಳಿಸಲು ಗಡವು ನೀಡಬೇಕು. ಇದರ ನಂತರವೂ ನಾಮಫಲಕ ಬದಲಾಯಿಸದಿದ್ದಲ್ಲಿ ಪರವಾನಗಿಯನ್ನು ಅಮಾನತುಗೊಳಿಸಿ ನಂತರ ಆ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸ್ಪಷ್ಟಪಡಿಸಿದರು.

    ಮಾಲ್ ಪ್ರತಿನಿಧಿಗಳೊಂದಿ ಸಭೆಗೆ ಸೂಚನೆ:

    ಎಲ್ಲ ವಲಯಗಳಲ್ಲಿ 15 ದಿನಗಳೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ನೋಟಿಸ್ ನೀಡಬೇಕು. ಜತೆಗೆ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಮಾಲ್‌ಗಳ ಪ್ರತಿನಿಧಿಗಳೊಂದಿಗೆ ಜತೆ ಸಭೆ ನಡಿಸಿ ಮಾಲ್ಗಳಲ್ಲಿರುವ ಎಲ್ಲ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅಳವಡಿಸಲು ಸೂಚಿಸಬೇಕು. ಈ ನಿಯಮವನ್ನು ಉಲ್ಲಂಸುವ ಮಳಿಗೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಬೇಕು ಎಂದು ವಲಯ ಮುಖ್ಯಸ್ಥರಿಗೆ ತುಷಾರ್ ಗಿರಿನಾಥ್ ತಾಕೀತು ಮಾಡಿದರು.

    ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಹರೀಶ್‌ಕುಮಾರ್, ರೆಡ್ಡಿ ಶಂಕರ ಬಾಬು, ಎಲ್ಲ ವಲಯಗಳ ಆಯುಕ್ತರು, ಜಂಟಿ ಆಯುಕ್ತರು, ಆಡಳಿತ ವಿಭಾಗದ ಉಪ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts