More

    ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಲು ಫೈನಾನ್ಸ್ ಕಂಪನಿಗೆ ಸೂಚಿಸಿದ ಗ್ರಾಹಕರ ನ್ಯಾಯಾಲಯ

    ಹಾವೇರಿ: ಟ್ರಾೃಕ್ಟರ್ ಸಾಲದ ಕಂತನ್ನು ಸಂಪೂರ್ಣ ಪಾವತಿಸದರೂ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡದ ಕಾರಣ ಗ್ರಾಹಕರಿಗೆ 30 ದಿನದೊಳಗಾಗಿ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡುವಂತೆ ಚೋಳಮಂಡಳಂ ಇನ್‌ವೆಸ್ಟಮೆಂಟ್ ಆಂಡ್ ಫೈನಾನ್ಸ್ ಕಂಪನಿಯ ಹಾವೇರಿ ಶಾಖೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
    ಹಾನಗಲ್ಲ ತಾಲೂಕು ಇನಾಂ ದ್ಯಾಮನಕೊಪ್ಪದ ದುಂಡಪ್ಪ ಫಕ್ಕೀರಪ್ಪ ಕುದರಿ ಎಂಬುವರು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರದ ಕಾರಣ ಸುಭಾಸ ದುಂಡಪ್ಪ ಕುದರಿ ಅವರ ಹೆಸರಿನಲ್ಲಿ ಟ್ರ್ಯಾಕ್ಟರ್ ಖರೀದಿಸಲು ಚೋಳಮಂಡಳಂ ಇನ್‌ವೆಸ್ಟಮೆಂಟ್ ಆಂಡ್ ಫೈನಾನ್ಸ್ ಕಂಪನಿಯಲ್ಲಿ 4.20 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮತ್ತು ಬಡ್ಡಿ ಸೇರಿ 5,11,648 ಮೊತ್ತವನ್ನು 73,086ರಂತೆ ಎಂಟು ಕಂತುಗಳಲ್ಲಿ ಪಾವತಿಸಿದ್ದರು.
    ಸಾಲದ ಕಂತು ತುಂಬಿದ ನಂತರ ಟ್ರ್ಯಾಕ್ಟರ್ ಮಾರಾಟ ಮಾಡಲು ಫೈನಾನ್ಸ್ ಕಂಪನಿಯಲ್ಲಿ ಕ್ಲಿಯರನ್ಸ್ ಸರ್ಟಿಫಿಕೇಟ್ ಕೇಳಿದಾಗ ಫ್ಯೂಟರ್ ಇನ್‌ಸ್ಟಾಲ್ ಮೆಂಟ್ಸ್ 46,968 ರೂ. ಬಾಕಿ ಇರುವುದಾಗಿ ತಿಳಿಸಿದ್ದರು. ಆದರೆ ಸಾಲ ಪಡೆಯುವಾಗ ಈ ವಿಷಯವನ್ನು ತಿಳಿಸಿರಲಿಲ್ಲ. ಹಾಗಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಲು ಆದೇಶಿಸಿದೆ. ಆರ್ಥಿಕ ಹಾಗೂ ಮಾನಸಿಕ ತೊಂದರೆಗೆ 2 ಸಾವಿರ ರೂ. ಮತ್ತು ಪ್ರಕರಣದ ಖರ್ಚು 2 ಸಾವಿರ ರೂ.ಅನ್ನು 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ. 6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts