More

    ನೋಟಾದತ್ತ ಮತದಾರರ ನೋಟ..!

    • 2018ರಲ್ಲಿ 16,362 ಮತಗಳು ಚಲಾವಣೆ
    • ಈ ಬಾರಿ ಎಷ್ಟು ಜನ ಅಭ್ಯರ್ಥಿಗಳು ತಿರಸ್ಕರಿಸಲಿದ್ದಾರೆ?

    ಸದೇಶ್ ಕಾರ್ಮಾಡ್ ಮೈಸೂರು
    ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಆಯೋಗ ಪರಿಚಯಿಸಿದ ನೋಟಾವನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 16,362 ಜನರು ನೋಟಾ ಚಲಾಯಿಸಿದ್ದಾರೆ..!

    ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮತದಾರರಿಗೆ ಇಚ್ಛೆ ಇಲ್ಲದೆ ಇದ್ದರೆ ನೋಟಾಗೆ ಮತ ಚಲಾಯಿ ಸಬಹುದು. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರಗಳಲ್ಲೂ ನೋಟಾ ಕಡೆಯ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. 11 ಕ್ಷೇತ್ರಗಳ ಪೈಕಿ ನೋಟಾ 6 ಕ್ಷೇತ್ರಗಳಲ್ಲಿ 4ನೇ ಸ್ಥಾನ, 4 ಕ್ಷೇತ್ರಗಳಲ್ಲಿ 5ನೇ ಸ್ಥಾನ ಹಾಗೂ 1 ಕ್ಷೇತ್ರದಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

    ಜಿಲ್ಲೆಯ 11 ಕ್ಷೇತ್ರಗಳ ಫಲಿತಾಂಶದ ಮೇಲೆ ನೋಟಾ ಯಾವುದೇ ರೀತಿಯ ಗಂಭೀರ ಪರಿಣಾಮ ಬೀರದೆ ಇದ್ದರೂ ಹಲವು ಕ್ಷೇತ್ರ ಗಳಲ್ಲಿ ಅಭ್ಯರ್ಥಿಗಳ ಸೋಲು ಹಾಗೂ ಗೆಲುವಿನ ಅಂತರ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಕಳೆದ ಬಾರಿ ಕೆಲವು ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರಿಗಿಂತ ಹೆಚ್ಚಿನ ಮತವನ್ನು ನೋಟಾ ಪಡೆದುಕೊಂಡಿದೆ. ಈ ಎಲ್ಲ ಅಂಕಿ ಅಂಶಗಳು ನೋಟಾದ ಮಹತ್ವವನ್ನು ಎತ್ತಿ ತೋರಿಸುತ್ತದೆ.

    ಕ್ಷೇತ್ರವಾರು ನೋಟಾ ಪಡೆದ ಮತಗಳೆಷ್ಟು?:

    ತಿ.ನರಸೀಪುರ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು (ನೋಟಾ ಸೇರಿದಂತೆ) ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1660 (ಶೇ.7.61)ಮತಗಳನ್ನು ಪಡೆದು 4ನೇ ಸ್ಥಾನ ಪಡೆದಿತ್ತು. ಕ್ಷೇತ್ರದಲ್ಲಿ ಜೆಡಿಎಸ್‌ನ ಎಂ. ಅಶ್ವಿನ್ ಕುಮಾರ್ ಕಾಂಗ್ರೆಸ್‌ನ ಡಾ.ಎಚ್.ಸಿ. ಮಹದೇವಪ್ಪ ವಿರುದ್ಧ 28,478 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ವರುಣದಲ್ಲಿ ಒಟ್ಟು 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1497 (ಶೇ.0.86) ಮತಗಳೊಂದಿಗೆ 4ನೇ ಸ್ಥಾನ ಪಡೆಕೊಂಡಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ಬಿಜೆಪಿಯ ತೋಟದಪ್ಪ ಬಸವರಾಜು ವಿರುದ್ಧ 58,616 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ನರಸಿಂಹರಾಜ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ ನೋಟಾ 1,206 (ಶೇ.0.74) ಮತಗಳನ್ನು ಪಡೆದು 6ನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್ ತನ್ವೀರ್ ಸೇಠ್ ಬಿಜೆಪಿಯ ಸಂದೇಶ್ ಸ್ವಾಮಿ ವಿರುದ್ಧ 18,127 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.

    ಚಾಮರಾಜದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿ ನೋಟಾ 1561(ಶೇ.1.11) ಮತಗಳನ್ನು ಪಡೆದು 5ನೇ ಸ್ಥಾನ ಪಡೆದಿತ್ತು. ಬಿಜೆಪಿಯ ಎಲ್. ನಾಗೇಂದ್ರ ಕಾಂಗ್ರೆಸ್‌ನ ವಾಸು ವಿರುದ್ಧ 14,936 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಕೃಷ್ಣರಾಜದಲ್ಲಿ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1441(ಶೇ.0.98) ಮತಗಳನ್ನು ಪಡೆದು 4ನೇ ಸ್ಥಾನ ಪಡೆದಿತ್ತು. ಬಿಜೆಪಿಯ ಎಸ್.ಎ. ರಾಮದಾಸ್ ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್ ವಿರುದ್ಧ 26,347 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

    ಚಾಮುಂಡೇಶ್ವರಿಯಲ್ಲಿ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 5ನೇ 1549 (ಶೇ.0.68) ಸ್ಥಾನ ಪಡೆದುಕೊಂಡಿತ್ತು. ಜೆಡಿಎಸ್‌ನ ಜಿ.ಟಿ. ದೇವೇಗೌಡ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರುದ್ಧ 36,042 ಮತಗಳ ಅಂತರದ ಗೆಲುವು ಸಾಧಿಸಿದ್ದರು. ನಂಜನಗೂಡು ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1947 (ಶೇ.1.19) ಮತಗಳನ್ನು ಗಳಿಸಿ 4ನೇ ಸ್ಥಾನ ಪಡೆದಿತ್ತು. ಬಿಜೆಪಿಯ ಬಿ. ಹರ್ಷವರ್ಧನ್ ಕಾಂಗ್ರೆಸ್‌ನ ಕಳಲೆ ಎನ್. ಕೇಶವಮೂರ್ತಿ ವಿರುದ್ಧ 12,479 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಎಚ್.ಡಿ. ಕೋಟೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1596 (ಶೇ.0.93) ಮತಗಳನ್ನು ಪಡೆದು 5ನೇ ಸ್ಥಾನ ಪಡೆದಿತ್ತು. ಕಾಂಗ್ರೆಸ್‌ನ ಸಿ. ಅನಿಲ್ ಕುಮಾರ್ ಜೆಡಿಎಸ್‌ನ ಚಿಕ್ಕಣ್ಣ ವಿರುದ್ಧ 22,093 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹುಣಸೂರಿನಲ್ಲಿ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1534 (ಶೇ.0.82) ಮತಗಳನ್ನು ಪಡೆದು 4ನೇ ಸ್ಥಾನ ಪಡೆದಿತ್ತು.. ಜೆಡಿಎಸ್‌ನ ಅಡಗೂರು ಎಚ್. ವಿಶ್ವನಾಥ್ ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ್ ವಿರುದ್ಧ 8,575 ಮತಗಳ ಅಂತರದಿಂದ ಗೆಲುವು ಪಡೆದಿದ್ದರು.

    ಕೆ.ಆರ್. ನಗರದಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1193 (ಶೇ.0.68) ಮತಗಳನ್ನು ಪಡೆದು 5ನೇ ಸ್ಥಾನ ಪಡೆದಿತ್ತು. ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್ ವಿರುದ್ಧ 1,779 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪಿರಿಯಾಪಟ್ಟಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 1178 (ಶೇ.0.76) ಮತಗಳನ್ನು ಪಡೆದು 4ನೇ ಸ್ಥಾನ ಪಡೆದಿತ್ತು. ಜೆಡಿಎಸ್‌ನ ಕೆ. ಮಹದೇವ್ ಕಾಂಗ್ರೆಸ್‌ನ ಕೆ. ವೆಂಕಟೇಶ್ ವಿರುದ್ಧ 7,493 ಮತಗಳ ಅಂತರದಿಂದ ಜಯಿಸಿದ್ದರು.

    ನೋಟಾ ಹೆಚ್ಚು ಮತ ಪಡೆದರೆ ಮುಂದೇನು?

    ಒಂದುವೇಳೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗಿಂತ ನೋಟಾ ಹೆಚ್ಚಿನ ಮತ ಪಡೆದರೆ ಮುಂದೇನು ಎಂಬ ಪ್ರಶ್ನೆ ಸಹಜ. ನೋಟಾ 1ನೇ ಸ್ಥಾನ ಪಡೆದರೆ 2ನೇ ಸ್ಥಾನ ಪಡೆದ ಅಭ್ಯರ್ಥಿನ್ನು ವಿಜೇತ ಅಭ್ಯರ್ಥಿ ಎಂದು ಪ್ರಕಟಿಸಲಾಗುತ್ತದೆ. ನೋಟಾ 1ನೇ ಸ್ಥಾನ ಪಡೆದರೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ಅನರ್ಹಗೊಳಿಸಿ ಮರು ಮತದಾನ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ 2021ರಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ವಾದವನ್ನು ಸುಪ್ರೀಂಕೋರ್ಟ್ ಅಂಗೀಕರಿಸಲಿಲ್ಲ. ‘ಈ ರೀತಿ ಮರು ಮತದಾನ ನಡೆಸುತ್ತಾ ಹೋದರೆ ಸಾರ್ವತ್ರಿಕ ಚುನಾವಣೆ ಬಳಿಕ ವಿಧಾನಸಭೆ ಅಥವಾ ಲೋಕಸಭೆಯನ್ನು ರಚನೆ ಮಾಡೋದು ಕಷ್ಟ ಸಾಧ್ಯವಾಗುತ್ತದೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts