More

    ಬಿಡಿಎ ಕಚೇರಿಯೇ ನಕಲಿ!; ಸಿಕ್ಕಿಬಿದ್ರು ನಕಲಿ ದಾಖಲೆ ತಯಾರಿಸುತ್ತಿದ್ದ ಖದೀಮರು, ತಪ್ಪಿತು 300 ಕೋಟಿ ರೂ. ಭೂಹಗರಣ

    ಬೆಂಗಳೂರು: 300 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಭೂಹಗರಣವೊಂದು ಬಿಡಿಎ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದಾಗಿ ತಪ್ಪಿದಂತಾಗಿದೆ. ಅಲ್ಲದೆ, ಖಾಸಗಿ ವ್ಯಕ್ತಿಯೊಬ್ಬರ ಜತೆ ಸೇರಿ ಪರ್ಯಾಯ ಬಿಡಿಎ ಕಚೇರಿಯನ್ನೇ ಸೃಷ್ಟಿಸಿದ್ದ ಅಧಿಕಾರಿಗಳು, ಈ ಹಗರಣಕ್ಕೆ ಸಾಥ್​ ನೀಡಿರುವುದು ಬೆಳಕಿಗೆ ಬಂದಿದೆ.

    ಬಿಡಿಎ ದಾಖಲೆಗಳನ್ನು ಅಧಿಕಾರಿಗಳೇ ನಕಲು ಮಾಡಿ, ನಿವೇಶನ ಹಂಚಿಕೆಗೆ ಮುಂದಾಗಿರುವ ಕುರಿತು ಕಳೆದ 15 ದಿನಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಆಯುಕ್ತ ಡಾ.ಎಚ್​.ಆರ್​. ಮಹದೇವ್​ ಅವರಿಗೆ ದೂರು ನೀಡಿದ್ದರು. ಆ ದೂರನ್ನಾಧರಿಸಿ ಪರಿಶೀಲಿನೆ ನಡೆಸಿದ್ದ ಆಯುಕ್ತರು, ಬಿಡಿಎ ಅಧಿಕಾರಿಗಳು ಖಾಸಗಿ ವ್ಯಕ್ತಿಯೊಬ್ಬರ ಜತೆ ಸೇರಿ ಅಕ್ರಮ ಎಸಗುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಕೊನೆಗೆ ಪೊಲೀಸ್​ ಆಯುಕ್ತ ಕಮಲ್​ಪಂತ್​ ಜತೆ ಚಚಿರ್ಸಿದ್ದ ಮಹದೇವ್​, ಬಿಡಿಎ ಜಾಗೃತ ದಳ ಮತ್ತು ಪೊಲೀಸರ ಜತೆಗೂಡಿ ಶುಕ್ರವಾರ ಕನ್ನಿಂಗ್​ಹ್ಯಾಂ ರಸ್ತೆಯಲ್ಲಿನ ರೆಡ್ಹಾನ್ ಸಂಸ್ಥೆ ಮೇಲೆ ದಾಳಿ ನಡೆಸಿ ನಕಲಿ ದಾಖಲೆ ಮತ್ತು ಸಂಬಂಧಪಟ್ಟವರನ್ನು ವಶಕ್ಕೆ ಪಡೆದಿದ್ದಾರೆ.

    60 ನಿವೇಶನ ಹಂಚಿಕೆಗೆ ಸಿದ್ಧತೆ

    ಕಾರ್ಯಾಚರಣೆ ವೇಳೆ ಹಲವು ನಕಲಿ ದಾಖಲೆಗಳು ಸಿಕ್ಕಿವೆ. ಅದರಂತೆ ಬಿಡಿಎ ಲೆಟರ್​ಹೆಡ್​ ಬಳಸಿ ಬಿಡಿಎ ನಿಮಿರ್ಸಿದ್ದ ವಿವಿಧ ಬಡಾವಣೆಗಳಲ್ಲಿನ 60 ಖಾಲಿ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ, ಅವುಗಳ ಹಂಚಿಕೆ ಪತ್ರವನ್ನು ಸಿದ್ಧಪಡಿಸಲಾಗಿತ್ತು. ಅಲ್ಲದೆ, ದಾಳಿ ವೇಳೆ ಖಾಸಗಿ ಕಚೇರಿಯಲ್ಲಿದ್ದ ಬಿಡಿಎಯ ಉಪ ನಿದೇಶಕ, ತಹಶೀಲ್ದಾರ್​ ನಕಲಿ ದಾಖಲೆಗಳಿಗೆ ಸಹಿ ಮಾಡಿದ್ದು ಕಂಡುಬಂದಿತು. ಈ ನಿವೇಶನಗಳ ಮೌಲ್ಯ 300 ಕೋಟಿ ರೂ.ಗಳಾಗಿದ್ದು ಎಂದು ಅಂದಾಜಿಸಲಾಗಿದ್ದು, ತನಿಖೆ ನಂತರ ಸಂಪೂರ್ಣ ಮೌಲ್ಯ ತಿಳಿದುಬರಲಿದೆ.

    ಬಿಡಿಎ ಕಚೇರಿಯೇ ನಕಲಿ!; ಸಿಕ್ಕಿಬಿದ್ರು ನಕಲಿ ದಾಖಲೆ ತಯಾರಿಸುತ್ತಿದ್ದ ಖದೀಮರು, ತಪ್ಪಿತು 300 ಕೋಟಿ ರೂ. ಭೂಹಗರಣ
    ಅಧಿಕಾರಿಗಳಿಂದ ದಾಳಿ

    ವಿತರಿಸಿರುವ ಬಗ್ಗೆ ಮಾಡಬೇಕಿದೆ ಪತ್ತೆ

    ನಕಲಿ ದಾಖಲೆಯನ್ನಷ್ಟೇ ಸೃಷ್ಟಿಸಲಾಗಿದೆಯೇ ಅಥವಾ ಈ ಹಿಂದೆ ನಕಲಿ ದಾಖಲೆಗಳ ಮೂಲಕ ನಿವೇಶನ ಮಾರಾಟ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಈ ಕುರಿತು ಶೇಷಾದ್ರಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಒಂದು ವೇಳೆ ನಕಲಿ ದಾಖಲೆ ಮೂಲಕ ನಿವೇಶನ ಹಂಚಿಕೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಿರುವುದು ತಿಳಿದು ಬಂದರೆ, ಮೋಸ ಹೋದವರನ್ನು ಪತ್ತೆ ಹಚ್ಚಬೇಕಿದೆ.

    15 ದಿನಗಳ ಮೇಲೆ ನಿಗಾ

    ಖಾಸಗಿ ವ್ಯಕ್ತಿ ದೂರು ನೀಡಿದ ಕೂಡಲೆ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸದ ಬಿಡಿಎ ಆಯುಕ್ತರು, ಅವರ ಚಲನವಲನಗಳ ಮೇಲೆ ನಿಗಾವಹಿಸುವಂತೆ ಜಾಗೃತ ದಳದ ಸಿಬ್ಬಂದಿಗೆ ಸೂಚಿಸಿದ್ದರು. ಕಚೇರಿ ಸಮಯದಲ್ಲಿಯೇ ಬಿಡಿಎ ಅಧಿಕಾರಿಗಳು ಖಾಸಗಿ ಸಂಸ್ಥೆಯ ಕಚೇರಿಗೆ ತೆರಳುತ್ತಾರೆ ಎಂಬುದು ಪತ್ತೆಯಾಗಿದೆ.

    ನಾಲ್ವರು ಅಧಿಕಾರಿಗಳು ಭಾಗಿ

    ಪ್ರಾಥಮಿಕ ತನಿಖೆಯಲ್ಲಿ ಬಿಡಿಎ ಉಪ ನಿದೇಶಕ -3 ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಅಕ್ರಮದಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಅದರಂತೆ ಉಪ ನಿರ್ದೇಶಕ-3, ತಹಶೀಲ್ದಾರ್​ ಕಮಲಮ್ಮ, ಕೇಸ್​ ವರ್ಕರ್​ ಸಂಪತ್​ ಮತ್ತು ಎಫ್​ಡಿಎ ಪವಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ರೆಡ್ಹಾನ್​ ಕಂಪೆನಿ ಮಾಲೀಕ ಇಂದ್ರಕುಮಾರ್​ ಮೇಲೂ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ. ಶ್ರೀಘ್ರದಲ್ಲಿ ಈ ಕುರಿತು ಬಿಡಿಎ ಆಯುಕ್ತರು ಆದೇಶವನ್ನು ಹೊರಡಿಸಲಿದ್ದಾರೆ.

    ಬಿಡಿಎ ಕಚೇರಿಯೇ ನಕಲಿ!; ಸಿಕ್ಕಿಬಿದ್ರು ನಕಲಿ ದಾಖಲೆ ತಯಾರಿಸುತ್ತಿದ್ದ ಖದೀಮರು, ತಪ್ಪಿತು 300 ಕೋಟಿ ರೂ. ಭೂಹಗರಣ
    ಪ್ರಮುಖ ಆರೋಪಿ ಇಂದ್ರಕುಮಾರ್

    ಮನೆಗಳ ಮೇಲೂ ದಾಳಿ: ರೆಡ್ಹಾನ್​ ಕಚೇರಿ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿಯೇ ಅಕ್ರಮದಲ್ಲಿ ಭಾಗಿಯಾಗಿದ್ದ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲೂ ಬಿಡಿಎಗೆ ಸಂಬಂಧಿಸಿದ ಹಲವು ದಾಖಲೆಗಳು ದೊರೆತಿವೆ.

    ಆಯುಕ್ತರ ಲೆಟರ್​ಹೆಡ್​ ಕೂಡ ನಕಲಿ: ಕಾರ್ಯಾಚರಣೆ ವೇಳೆ ದೊರೆತ ದಾಖಲೆಗಳನ್ನು ನೋಡಿ ಖುದ್ದು ಬಿಡಿಎ ಆಯುಕ್ತರೇ ಆಘಾತಕ್ಕೊಳಗಾಗಿದ್ದಾರೆ. ಬಿಡಿಎ ಲೆಟರ್​ಹೆಡ್​ ಅಷ್ಟೇ ಅಲ್ಲದೆ, ಆಯುಕ್ತರ ಹೆಸರಿನ ಲೆಟರ್​ಹೆಡ್​ಗಳೂ ದಾಳಿ ವೇಳೆ ದೊರೆತಿವೆ. ಅವು ಅಲ್ಲಿಗೆ ಹೇಗೆ ಬಂದವು ಎಂಬ ಬಗ್ಗೆಯೂ ತನಿಖೆ ನಡೆಸುವುದಾಗಿ ಆಯುಕ್ತರು ತಿಳಿಸಿದ್ದಾರೆ.

    ಬಿಡಿಎ ಶಾಖಾ ಕಚೇರಿ: ಅಕ್ರಮ ಎಸಗಿರುವ ಅಧಿಕಾರಿಗಳು ಕನ್ನಿಂಗ್​ಹ್ಯಾಂ ರಸ್ತೆಯಲ್ಲಿ ಬಿಡಿಎ ಶಾಖಾ ಕಚೇರಿಯನ್ನೇ ತೆರೆದಿದ್ದರು. ಹಲವು ವಿಭಾಗದ ಲೆಟರ್​ಹೆಡ್​ಗಳು, ಸೀಲ್​, ಪ್ರಿಂಟರ್​ ಹೀಗೆ ಬಿಡಿಎ ಕಚೇರಿಯಲ್ಲಿರುವ ವ್ಯವಸ್ಥೆಗಳೆಲ್ಲವೂ ಅಲ್ಲಿ ಇದ್ದವು.

    ಅಕ್ರಮ ಪ್ರಮಾಣಪತ್ರ ಸಿದ್ಧಪಡಿಸಿ 300 ಕೋಟಿ ರೂ. ಮೌಲ್ಯದ 60 ನಿವೇಶನಗಳ ಹಂಚಿಕೆಗೆ ಸಿದ್ಧತೆ ನಡೆಸಿದ್ದ ಪ್ರಕರಣ ಬಯಲಾಗಿದೆ. ಬಿಡಿಎ ಅಧಿಕಾರಿಗಳೇ ಅದರಲ್ಲಿ ಪಾಲ್ಗೊಂಡಿದ್ದು ಆಘಾತ ತಂದಿದೆ. ಪರ್ಯಾಯ ಬಿಡಿಎ ಕಚೇರಿಯನ್ನೇ ಸೃಷ್ಟಿಸಿಕೊಂಡು, ಅಕ್ರಮ ಎಸಗಲಾಗುತ್ತಿತ್ತು. ಈ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಸಲಾಗುತ್ತದೆ.
    | ಡಾ.ಎಚ್​.ಆರ್​. ಮಹದೇವ್​ ಬಿಡಿಎ ಆಯುಕ್ತ

    ಕಳ್ಳನೇ ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​!; ಕಳ್ಳತನದಲ್ಲಿ 12 ವರ್ಷಗಳ ಅನುಭವ, ಈಗ ಕೊಡುತ್ತಿದ್ದಾನೆ ಮನೆಗಳವು ತಡೆಯುವಂಥ ಐಡಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts