More

    ಬ್ಯಾಡಗಿ ತಾಪಂ ಹೊಸ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

    ಬ್ಯಾಡಗಿ: ತಾಲೂಕು ಪಂಚಾಯಿತಿಯ ಹೊಸ ಕಟ್ಟಡ ನಿರ್ವಣವಾಗಿ ಹಲವು ತಿಂಗಳು ಗತಿಸಿದರೂ, ಉದ್ಘಾಟನೆ ಭಾಗ್ಯ ಕಂಡಿಲ್ಲ. ಹೀಗಾಗಿ ಶಿಥಿಲವಾದ ಹಳೇ ಕಟ್ಟಡದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತಾಗಿದೆ.

    ಸದ್ಯ ತಾಪಂ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿದೆ. ಹೀಗಾಗಿ ಎರಡು ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ 1 ಕೋಟಿ ರೂ. ಮಂಜೂರಾಗಿ, 2019ರ ಆ. 6ರಂದು ಸ್ಥಳೀಯ ಶಾಸಕರು ಭೂಮಿಪೂಜೆ ನೆರವೇರಿಸಿದ್ದರು. ಕೆಆರ್​ಐಡಿಎಲ್​ಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಇದೀಗ ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆ ಮುಹೂರ್ತ ಕೂಡಿಬಂದಿಲ್ಲ.

    ಕ್ರಿಯಾ ಯೋಜನೆ ಪಾಲಿಸಿಲ್ಲ: ತಾಲೂಕು ಪಂಚಾಯಿತಿ ಕಾರ್ಯಾಲಯ ಕಟ್ಟಡಕ್ಕಾಗಿ 1 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಂತೆ 99.50 ಲಕ್ಷ ರೂ.ವೆಚ್ಚವಾಗಿದೆ ಎಂದು ಪ್ರಗತಿಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಕ್ರಿಯಾ ಯೋಜನೆಯಲ್ಲಿ ಇರುವ ಕೊಳವೆ ಬಾವಿ ಕೊರೆಸಿ ನೀರು ಪೂರೈಸುವುದು, ಧ್ವಜ ಕಂಬ ನಿರ್ಮಾಣ ಸೇರಿದಂತೆ ಹಲವು ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿವೆ. ಇಂಜಿನಿಯರ್ ಹಸ್ತಾಂತರ ಪತ್ರ ಪಡೆಯಲು ಮುಂದಾಗಿದ್ದರೂ, ಆಗ ತಾ.ಪಂ. ಸದಸ್ಯರು ತಕರಾರು ಎತ್ತಿದ್ದಾರೆ. ಅಲ್ಲದೆ, ಟೆಂಡರ್ ನಿಯಮ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಕೆಡಿಪಿ ಸಭೆ ಠರಾವಿಗೆ ಬೆಲೆಯಿಲ್ಲ: 15 ದಿನದಲ್ಲಿ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಸುವಂತೆ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಸದಸ್ಯರು ಕಳೆದ ಕೆಡಿಪಿ ಸಭೆಯಲ್ಲಿ ತಾಕೀತು ಮಾಡಿದ್ದು, ಇದ್ಯಾವುದಕ್ಕೆ ಇಂಜಿನಿಯರ್ ಕ್ಯಾರೆ ಎನ್ನದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

    ಕ್ರಿಯಾ ಯೋಜನೆಯಂತೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ನಿಗದಿತ ಅವಧಿಯೊಳಗೆ ಹಸ್ತಾಂತರಿಸಲು ಸೂಚಿಸಿರುವೆ. ಈ ಹಿಂದೆ ಕೆಆರ್​ಐಡಿಎಲ್ ಇಂಜಿನಿಯರ್ ನಿರ್ಲಕ್ಷ್ಯ ಖಂಡಿಸಿ ಸಭೆಯಲ್ಲಿ ಠರಾವು ಮಾಡಿದೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕೊಳವೆ ಬಾವಿ ಕೊರೆಸಿ, ಧ್ವಜ ಕಂಬ ನಿರ್ವಿುಸಬೇಕು. ಬಾಕಿ ಸಣ್ಣಪುಟ್ಟ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ, ಉದ್ಘಾಟನೆ ನೆರವೇರಿಸಬೇಕು. ನಿರ್ಲಕ್ಷಿಸಿದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವೆ.
    | ಸವಿತಾ ಸುತ್ತಕೋಟಿ ತಾ.ಪಂ. ಅಧ್ಯಕ್ಷೆ

    ಹೊಸ ಕಟ್ಟಡ ಪೂರ್ಣಗೊಂಡಿದ್ದು, ಧ್ವಜ ಕಂಬಕ್ಕೆ ಜಾಗವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲೇ ಕಟ್ಟಡ ಹಸ್ತಾಂತರಿಸುವೆ. ಕಟ್ಟಡಕ್ಕೆ ಪೀಠೋಪಕರಣ ಕೊಡಿಸಲು ಅಧಿಕಾರಿಗಳು ಒತ್ತಾಯಿಸಿದ್ದು, ನಮ್ಮ ಬಳಿ ಹಣವಿಲ್ಲ ಎಂದು ತಿಳಿಸಿರುವೆ. ಅಂದಾಜು ಪತ್ರಿಕೆಯಲ್ಲಿನ ಕಾಮಗಾರಿ ಹೆಚ್ಚೂ ಕಡಿಮೆಯಾಗಿದ್ದು ಸರಿಪಡಿಸುವೆ.
    | ಆರ್.ಮಹೇಂದ್ರಕರ ಕೆಆರ್​ಐಡಿಎಲ್ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts