More

    ನೊಂದವರ ನೆರವಿಗೆ ಹೊಯ್ಸಳ: ರಾಮನಗರ ಪೊಲೀಸರ ಜನಸ್ನೇಹಿ ನಡೆ

    ರಾಮನಗರ: ಪೊಲೀಸ್ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ಮೊದಲ ಬಾರಿಗೆ ಹೊಯ್ಸಳ ಸೇವೆ ಆರಂಭಿಸಲಿದೆ.

    ಪೊಲೀಸರು ನೊಂದವರಿಗೆ ತಕ್ಷಣವೇ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ. ಈ ಅಪವಾದದಿಂದ ದೂರವಾಗುವ ನಿಟ್ಟಿನಲ್ಲಿ ಮುಂದಿನ ತಿಂಗಳಿಂದ 112 ಟೋಲ್ ಫ್ರಿ ಸಂಖ್ಯೆಯನ್ನು ಪೊಲೀಸರು ಜಾರಿಗೆ ತರಲಿದ್ದಾರೆ. ಈ ಕರೆ ತಲುಪುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ವಾಹನದೊಂದಿಗೆ ನೊಂದವರ ಬಳಿಗೆ ತೆರಳಲಿದ್ದಾರೆ.

    24 ಗಂಟೆ ಸೇವೆ: ಬೆಂಗಳೂರಿನಲ್ಲಿ ಹೊಯ್ಸಳ ಸೇವೆ ಯಶಸ್ವಿಯಾಗಿದೆ. ಇದೇ ಮಾದರಿ ಸೇವೆ ಜಿಲ್ಲೆಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಹೀಗಾಗಿ ಸಾರ್ವಜನಿಕರು ತುರ್ತು ಸನ್ನಿವೇಶಗಳಲ್ಲಿ 112ಕ್ಕೆ ಕರೆ ಮಾಡಬಹುದು. ಬೆಂಗಳೂರಿನಲ್ಲಿ ಒಂದು ನಿಮಿಷದೊಳಗೆ ಹೊಯ್ಸಳ ಸೇವೆ ಲಭ್ಯವಾದರೆ, ಜಿಲ್ಲೆಯಲ್ಲಿ ಗರಿಷ್ಠ 20 ನಿಮಿಷದೊಳಗೆ ಸೇವೆ ಒದಗಿಸುವ ಸಲುವಾಗಿ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ.

    112ಕ್ಕೆ ಕರೆ ಮಾಡಿ: ಈಗಾಗಲೆ ತುರ್ತು ಸ್ಪಂದನೆಗೆ ಜಾರಿಯಲ್ಲಿರುವ 100ರ ಬದಲಿಗೆ 112 ಸಹ ಸೇವೆಗೆ ಲಭ್ಯವಾಗುವುದರಿಂದ ಕಂಟ್ರೋಲ್ ರೂಂ ಸಂಖ್ಯೆಯಾದ 100ರ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಲಿದೆ. ಸಾರ್ವಜನಿಕರು ಸಹ ಪೊಲೀಸರಿಗೆ ಮಾಹಿತಿ ನೀಡುವುದು ಮಾತ್ರವಲ್ಲದೇ, ಪೊಲೀಸರು ಸಹ ಸಾರ್ವಜನಿಕರಿಗೆ ಹತ್ತಿರವಾಗಲಿದ್ದಾರೆ. ಇನ್ನು ಹೊಯ್ಸಳ ಸೇವೆ ಹೆಚ್ಚಾಗಿ ಶಾಲಾ-ಕಾಲೇಜುಗಳ ಮೇಲೆ ಹದ್ದಿನ ಕಣ್ಣಿಡುವುದರಿಂದ ಡ್ರಗ್ಸ್ ಸೇರಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬಹುದಾಗಿದೆ.

    ಕಾರ್ಯನಿರ್ವಹಣೆ ಹೇಗೆ?: ಪ್ರಸ್ತುತ ಜಿಲ್ಲೆಯಲ್ಲಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ 10 ಹೆದ್ದಾರಿ ಗಸ್ತು ವಾಹನಗಳು ಸಂಚರಿಸುತ್ತಿವೆ. ಇವುಗಳು ಹೆದ್ದಾರಿಯಲ್ಲಿ ಸುಖಾಸುಮ್ಮನೆ ಸಂಚರಿಸುತ್ತಿವೆ. ಅಪಘಾತ ನಡೆದರೆ ಇಲ್ಲವೆ, ಹೆದ್ದಾರಿ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡುವುದಕ್ಕೆ ಸೀಮಿತವಾಗಿವೆ. ಹೀಗಾಗಿ ಈ ವಾಹನಗಳನ್ನೇ ಹೊಯ್ಸಳ ವಾಹನಗಳನ್ನಾಗಿ ಪರಿವರ್ತಿಸಿ, ಹೈವೆ ಪೆಟ್ರೋಲಿಂಗ್ ಕೆಲಸವನ್ನು ಸಹ ಒಟ್ಟಿಗೆ ನಡೆಸುವುದು ಇದರ ಉದ್ದೇಶ.

    ಹೊಯ್ಸಳಕ್ಕೆ ಕರೆ ಮಾಡಿ, ತುರ್ತು ದೂರು ಇಲ್ಲವೇ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅಗತ್ಯಬಿದ್ದರೆ ಅಪರಾಧ ಮಾಹಿತಿಯನ್ನು ಸಹ ನೀಡಬಹುದಾಗಿದೆ. ಕರೆ ಸ್ವೀಕರಿಸಿದ 20 ನಿಮಿಷದೊಳಗೆ ಪೊಲೀಸರು ಸ್ಥಳಕ್ಕೆ ಧಾವಿಸಲಿದ್ದಾರೆ. ಇರುವ 10 ವಾಹನಗಳ ಪೈಕಿ ಪ್ರತಿ 2 ಠಾಣೆಗಳಿಗೆ ಒಂದರಂತೆ ಹೊಯ್ಸಳ ವಾಹನಗಳು ಸೇವೆ ನೀಡಲಿವೆ. ಮುಂದಿನ ತಿಂಗಳೊಳಗೆ ಈ ಹೊಯ್ಸಳ ವಾಹನಗಳು ಸೇವೆ ಆರಂಭಿಸಲಿವೆ. ಹೀಗಾಗಿ ಸಾರ್ವಜನಿಕರಿಗೆ ಇನ್ನಷ್ಟು ತ್ವರಿತವಾಗಿ ಪೊಲೀಸ್ ಸೇವೆ ದೊರೆಯಲಿದೆ. ಇದಕ್ಕಾಗಿ ಹೈವೆ ಗಸ್ತು ವಾಹನಗಳೇ ಹೊಯ್ಸಳ ವಾಹನಗಳಾಗಲಿರುವ ಹಿನ್ನೆಲೆಯಲ್ಲಿ ವಾಹನದ ಶೈಲಿಯೂ ಬದಲಾಗಲಿದೆ. ಇನ್ನೋವಾ ಕಾರುಗಳ ವಿನ್ಯಾಸವೂ ಬದಲಾಗಿದ್ದು, ಅಂತಿಮ ಹಂತದ ನಿರೀಕ್ಷೆಯಲ್ಲಿದೆ.

    ಜಿಲ್ಲೆಯಲ್ಲಿ ಜಾರಿಗೆ ತರಲು ಹೊರಟಿರುವ ಹೊಯ್ಸಳ ವಾಹನಗಳಾಗಿ ಹೈವೆ ಗಸ್ತು ವಾಹನಗಳನ್ನೇ ಪರಿವರ್ತಿಸಲಾಗುವುದು. ಪ್ರತಿ 2 ಠಾಣೆಗೊಂದು ವಾಹನಗಳು ಸೇವೆ ನೀಡಲಿದ್ದು, ಮುಂದಿನ ತಿಂಗಳೊಳಗೆ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಟೋಲ್ ಫ್ರಿ ಸಂಖ್ಯೆ 112ಕ್ಕೆ ಕರೆ ಮಾಡಿ ಸೇವೆ ಪಡೆದುಕೊಳ್ಳಬಹುದಾಗಿದೆ.
    ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts