More

    ಕನ್ನಡಿಗರ ವಿದ್ಯೆ, ಉದ್ಯೋಗ ಅನ್ಯಭಾಷಿಕರ ಪಾಲು

    ಮದ್ದೂರು: ಕನ್ನಡಿಗರ ವಿದ್ಯೆ ಮತ್ತು ಉದ್ಯೋಗವನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಕಸಿದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಕುಣಿಗಲ್ ಅರೇ ಶಂಕರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

    ಪಟ್ಟಣದ ಗುರುಭವನದಲ್ಲಿ ಭಾನುವಾರ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಕರ್ನಾಟಕ, ಶ್ರೀ ಮಾರುತಿ ನೇಗಿಲಯೋಗಿ ಜನಪದ ಮಹಿಳಾ ಕಲಾತಂಡದಿಂದ ಸಂಗೀತ ಮತ್ತು ಜನಪದ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಮಟ್ಟದ ಕನ್ನಡದ ಕಂದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಕರ್ನಾಟಕದಲ್ಲಿ ಕನ್ನಡಿಗರು ವಿದ್ಯೆ ಮತ್ತು ಉದ್ಯೋಗವನ್ನು ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಸನ್ನಿವೇಶ ತಲುಪಿದ್ದು, ಇದರ ವಿರುದ್ಧ ಕನ್ನಡ ಪರ ಹೋರಾಟಗಾರರು ಹಾಗೂ ಸಂಘ ಸಂಸ್ಥೆಗಳು ನಿರಂತರ ಹೋರಾಟ ಮಾಡುವ ಮೂಲಕ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರು ಶೋಚನೀಯ ಸ್ಥಿತಿಗೆ ತಲುಪಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ತ್ರಿ ಭಾಷ ನೀತಿ ಜಾರಿಯಲ್ಲಿರುವುದರಿಂದ ಕನ್ನಡಿಗರ ಉದ್ಯೋಗ, ವಿದ್ಯೆ ಸೇರಿದಂತೆ ಬಹುತೇಕ ಸವಲತ್ತು ಅನ್ಯ ಭಾಷಿಕರ ಪಾಲಾಗುತ್ತಿವೆ. ನಮ್ಮ ಸರ್ಕಾರಗಳು ಕನ್ನಡಿಗರ ಪರ ಧ್ವನಿ ಎತ್ತಬೇಕು. ರಾಷ್ಟ್ರೀಯತೆಯ ಹೆಸರಿನಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕಿದೆ ಎಂದರು.

    ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಇತರ ರಾಜ್ಯಗಳು ಅಲ್ಲಿಯ ಸ್ಥಳೀಯ ಭಾಷೆಗೆ ಮತ್ತು ನಿವಾಸಿಗಳಿಗೆ ಅನುಕೂಲವಾಗುವಂತೆ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳನ್ನು ನಮ್ಮ ರಾಜ್ಯದಲ್ಲೂ ಸರ್ಕಾರಗಳು ಕೈಗೊಂಡು ವಿದ್ಯೆ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳು ಕನ್ನಡಿಗರಿಗೆ ಸಿಗುವಂತೆ ಕಾನೂನುಗಳನ್ನು ರೂಪಿಸಬೇಕು ಎಂದು ತಿಳಿಸಿದರು.

    ಮನಮುಲ್ ನಿರ್ದೇಶಕಿ ರೂಪಾ ‘ಕನ್ನಡ ಕಂದ’ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಹೆಚ್ಚಾಗಿ ಮಾತನಾಡಬೇಕು. ಕನ್ನಡ ರಾಜ್ಯೋತ್ಸವವನ್ನು ನವಂಬರ್ ತಿಂಗಳಿಗೆ ಮಾತ್ರ ಮೀಸಲಿಡುವುದು ಸರಿಯಲ್ಲ. ಕನ್ನಡ ನಾಡು ನುಡಿ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟ ಮಾಡುವ ಮೂಲಕ ನಮ್ಮ ಭಾಷೆ, ನೆಲ, ಜಲಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

    ಕನ್ನಡ ಕಂದ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿ.ಎ.ಕ್ರಾಂತಿ ಸಿಂಹ, ವಿ.ಸಿ.ಉಮಾಶಂಕರ್, ವಸಂತ ಕರಡಗೆರೆ, ಎಚ್.ಎಸ್.ಪ್ರಭುಲಿಂಗ, ಎಂ.ಪಿ.ವೆಂಕಟೇಶ್, ಡಾ.ಕೆ.ಎಸ್.ಜೀವನ್‌ಕುಮಾರ್, ಬೋರೇಗೌಡ, ಎಂ.ಪಿ.ರಾಮಚಂದ್ರಗೌಡ, ಲೋಹಿತೇಶ್ವರ, ಅಬ್ದುಲ್‌ಸಮೀರ್, ಕೆ.ಸೌಭಾಗ್ಯ, ಪ್ರತಿಮಾ ಪ್ರಜ್ವಲ್‌ಗೌಡ, ಪದ್ಮಾ ಶ್ರೀನಿವಾಸ್, ಕೆ.ಸಿ.ಹರಿಣಾಕ್ಷಿ, ಆರ್.ಕೆ.ಅರುಣ್‌ಕುಮಾರಿ, ವಿಜಯ ತಿಮ್ಮೇಗೌಡ, ರಕ್ಷಿತ್ ಕುಮಾರ್ ಹಾಗೂ ಸುಂದರೇಶ್ ಅವರಿಗೆ ಕನ್ನಡದ ಕಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್.ಕೆ.ವಿದ್ಯಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮನ್‌ಮುಲ್ ಮಾಜಿ ನಿರ್ದೇಶಕ ಡಾ. ಕುಮಾರ್ ಕೊಪ್ಪ ಆಶಯ ನುಡಿಯನ್ನಾಡಿದರು.

    ಸಮಾರಂಭದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಜಾನಪದ ಕಲಾವಿದರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಾನಪದ ಕಲಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದ ಆಯೋಜಕರಾದ ಶೋಭಾ ಪಿ.ಗೌಡ, ಲೀಲಾವತಿ, ಮೈಲಾರಿ, ವಿಜಯಲಕ್ಷ್ಮೀ, ಜಡೆಸ್ವಾಮಿ, ಯೋಗೇಶ್, ತಾಯಮ್ಮ, ಪಿಡಬ್ಲುೃಡಿ ಇಂಜಿನಿಯರ್ ಪ್ರಭು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಜಶೇಖರ್, ಪತ್ರಕರ್ತ ಆನಂದ, ಮುಖಂಡರಾದ ಯರಗನಹಳ್ಳಿ ಮಹಾಲಿಂಗು, ಸೋಂಪುರ ಉಮೇಶ್, ಕೊತ್ತನಹಳ್ಳಿ ಉಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts