More

    ಚಳಿಯ ಕಚಗುಳಿ ದೂರ

    ಭರತ್ ಶೆಟ್ಟಿಗಾರ್, ಮಂಗಳೂರು
    ಡಿಸೆಂಬರ್ ತಿಂಗಳೆಂದರೆ ಅತೀ ಹೆಚ್ಚು ಚಳಿ ಅನುಭವವಾಗುತ್ತಿದ್ದ ತಿಂಗಳು. ಚಳಿಯ ಕಚಗುಳಿಯಿಂದಾಗಿ ಬೆಳಗ್ಗೆ ಬೇಗ ಏಳಲು, ಎದ್ದರೂ ನಡುಗುವ ಚಳಿಗೆ ಹೊರಗೆ ಹೋಗಲೂ ಕಷ್ಟ ಪಡುವಷ್ಟು ಥಂಡಿ ವಾತಾವರಣದಲ್ಲಿರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಳಿಗಾಲ ಪೂರ್ತಿ ಅಂತಹ ಚಳಿ ವಾತಾವರಣವೇ ಕಂಡುಬರಲಿಲ್ಲ. ಈ ಬಾರಿ ಚಳಿಗಾಲದ ಮೂರು ತಿಂಗಳು ಕಳೆದರೂ ಜನರಿಗೆ ತಾಳಿಕೊಳ್ಳಲಾರಷ್ಟು ತಂಪಿನ ಅನುಭವವಾಗಲೇ ಇಲ್ಲ.

    ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಎರಡು ಮೂರು ದಿನ ಸ್ವಲ್ಪ ತೀವ್ರ ಎನ್ನುಬಹುದಾದ ಚಳಿಯ ಅನುಭವ ಹೊರತುಪಡಿಸಿದರೆ ನಗರ-ಗ್ರಾಮಾಂತರ ಭಾಗದಲ್ಲಿ ಚಳಿಯೇ ಇರಲಿಲ್ಲ. ಒಮ್ಮೆ ಮಾತ್ರ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಉಳಿದಂತೆ 22-24 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ತಾಪಮಾನ ಕಂಡುಬರುತ್ತಿದೆ. ಡಿಸೆಂಬರ್‌ನಲ್ಲಿ ಚಳಿ ಕಚಗುಳಿ ಇಡುವ ಸಾಧ್ಯತೆ ಇತ್ತಾದರೂ, ಚಂಡಮಾರುತ, ಮಳೆ, ಮೋಡಗಳ ಚಲನೆ ಪರಿಣಾಮ ಚಳಿ ದೂರವಾಗಿದೆ. ಡಿಸೆಂಬರ್‌ನಲ್ಲಿ ಇಲ್ಲಿವರೆಗಿನ ಕನಿಷ್ಠ ತಾಪಮಾನ 21.1 ಡಿಗ್ರಿ ಸೆಲ್ಸಿಯಸ್. ತಿಂಗಳಾಂತ್ಯದಿಂದ ಜನವರಿ ಮಧ್ಯಭಾಗದವರೆಗೆ ಚಳಿಯ ಸಾಧ್ಯತೆಯಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

    ಭತ್ತ, ಮಾವು-ಗೇರಿನ ಮೇಲೆ ಪರಿಣಾಮ: ಚಳಿ ಕಡಿಮೆಯಾದರೆ ಕರಾವಳಿಯಲ್ಲಿ ಮುಖ್ಯವಾಗಿ ಪರಿಣಾಮ ಆಗುವುದು ಭತ್ತದ ಮೇಲೆ. ಚಳಿಯಿದ್ದಷ್ಟೂ ಭತ್ತದ ಪೈರು ಉತ್ತಮ ವಾಗಿ ಬರುತ್ತದೆ. ಗದ್ದೆಯಲ್ಲಿ ನೀರಿನ ಅಂಶವೂ ಇರುತ್ತದೆ. ಆದರೆ ಪ್ರಸ್ತುತ ಬಿಸಿಲ ಧಗೆಯಿಂದ ಗದ್ದೆಯಲ್ಲಿ ನೀರು ಆವಿಯಾಗುವ ಪ್ರಮಾಣ ಹೆಚ್ಚಾಗಿದೆ. ಈ ಬಾರಿಯೂ ಕಳೆದ ವರ್ಷದಂತೆ ಉತ್ತಮ ಬೆಳೆಯ ನಿರೀಕ್ಷೆಯಿಲ್ಲ ಎನ್ನುತ್ತಾರೆ ಕೃಷಿಕರು. ಭತ್ತ ಹೊರತು ಪಡಿಸಿದರೆ, ಗೇರು, ಮಾವು, ಹಲಸಿನ ಮರಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಆದರೆ ಚಳಿಯಿಲ್ಲದೆ ಈ ಬಾರಿ ಹೂ ಬಿಡುವುದು ನಿಧಾನ. ಇದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.

    ಹಿಂಗಾರು ಮಳೆ ಉತ್ತಮ: ಕಳೆದ ವರ್ಷದಂತೆ ಈ ಬಾರಿಯೂ ಹಿಂಗಾರು ಮಳೆ ಉತ್ತಮವಾಗಿತ್ತು. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ ಶೇ.36 ಹೆಚ್ಚು ಮಳೆ ದಾಖಲಾಗಿದೆ. ಹಿಂಗಾರು ಅವಧಿ ಮುಗಿಯಲು ಕೆಲವೇ ದಿನಗಳು ಬಾಕಿಯಿದೆ. ಆದರೆ ಮುಂದಕ್ಕೆ ಒಣ ಹವೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮಳೆ ಪ್ರಮಾಣ ಹೆಚ್ಚಳ ನಿರೀಕ್ಷೆ ಇಲ್ಲ.

    ಕರಾವಳಿಯಲ್ಲಿ ಇಲ್ಲಿಯವರೆಗೆ ಅಷ್ಟಾಗಿ ಚಳಿ ಇರಲಿಲ್ಲ. ಪ್ರಸ್ತುತ ಮಳೆ ವಾತಾವರಣ ದೂರವಾಗಿದ್ದು, ಶುಭ್ರ ಆಕಾಶ ಕಂಡುಬರುವ ಸಾಧ್ಯತೆ ಇರುವುದರಿಂದ ಚಳಿ ಆರಂಭವಾಗಲಿದೆ. ಜತೆಗೆ ಬೆಳಗ್ಗಿನ ಅವಧಿಯಲ್ಲಿ ಇಬ್ಬನಿಯೂ ಇರಲಿದೆ.
    ಸುನೀಲ್ ಗಾವಸ್ಕರ್ ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts