More

    ಬೆಳೆ ವಿಮೆ ನೋಂದಣಿಗೆ ಸೇವಾ ಶುಲ್ಕ ಬೇಡ

    ಹಾವೇರಿ: ಬೆಳೆ ವಿಮೆ ಕುರಿತಂತೆ ರೈತರಿಗೆ ವ್ಯಾಪಕ ಮಾಹಿತಿ ನೀಡಿ ಹೆಚ್ಚು ಜನರು ನೋಂದಾಯಿಸಲು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ವಿಮಾ ನೋಂದಣಿಗೆ ರೈತರಿಂದ ಸೇವಾ ಶುಲ್ಕಗಳನ್ನು ಪಡೆಯದಂತೆ ಬ್ಯಾಂಕ್ ಮತ್ತು ಸೇವಾ ಕೇಂದ್ರಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಬೆಳೆ ವಿಮೆ ನೋಂದಣಿ ಕುರಿತು ಬುಧವಾರ ಆಯೋಜಿಸಿದ್ದ ಬೆಳೆ ವಿಮೆ ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಬೆಳೆ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವಿಮಾ ಕಂಪನಿಗಳೇ ರೈತರ ಪರವಾಗಿ ಸೇವಾ ಶುಲ್ಕವನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೆ ಭರಿಸುವುದರಿಂದ ಯಾವುದೇ ಕಾರಣಕ್ಕೂ ರೈತರಿಂದ ಸೇವಾ ಶುಲ್ಕ ಪಡೆಯಬಾರದು. ವಿಮೆ ಮೊತ್ತ ಮಾತ್ರ ಪಡೆಯಬೇಕು. ವಿಮಾ ನೋಂದಣಿ, ಬೆಳೆಗಳ ಮಿಸ್​ವ್ಯಾಚ್ ಸೇರಿ ಹಲವು ಗೊಂದಲ ಉಂಟಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

    ಪ್ರತಿ ತಾಲೂಕುವಾರು ವಿಮಾ ಕಂಪನಿಗಳ ಶಾಖೆಗಳನ್ನು ತೆರೆದು ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಮಾಹಿತಿ ನೀಡಿ, ರೈತರಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸಬೇಕು. ಶಾಖಾ ಕಚೇರಿಗಳನ್ನು ಆರಂಭಿಸಲು ತಕ್ಷಣ ಕ್ರಮ ವಹಿಸಬೇಕು ಎಂದು ಬೆಳೆ ವಿಮೆ ನೋಂದಾಯಿತ ಕಂಪನಿಗಳಿಗೆ ಸೂಚಿಸಿದರು.

    ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾಹಿತಿ ನೀಡಿ, ಪ್ರಸಕ್ತ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಸೇರಿಸಲಾಗಿರುತ್ತದೆ. ಸೇರ್ಪಡೆಗೆ ಆಸಕ್ತಿಯಿಲ್ಲದ ರೈತರು ವಿಮಾ ಕಂತು ತುಂಬುವ ಕೊನೆಯ ದಿನಾಂಕದ 7 ದಿನಗಳೊಳಗಾಗಿ ಯೋಜನೆಯಿಂದ ಕೈಬಿಡುವಂತೆ ಬ್ಯಾಂಕ್​ಗಳಿಗೆ ಆಪ್ಟ್ ಔಟ್ (opt out) ಮೂಲಕ ಕೋರಿಕೆ ಸಲ್ಲಿಸಬೇಕು ಎಂದರು.

    ತೋಟಗಾರಿಕೆ ಉಪನಿರ್ದೇಶಕ ಎಲ್. ಪ್ರದೀಪ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಹಸಿ ಮೆಣಸಿನಕಾಯಿ, ಅಡಕೆ ಹಾಗೂ ಶುಂಠಿ ಈ ಮೂರು ಬೆಳೆಗಳನ್ನು ಅಧಿಸೂಚಿಸಲಾಗಿದೆ. ವಿಮೆ ಕಂತು ತುಂಬಲು ಜೂನ್ 30 ಕೊನೆಯ ದಿನವಾಗಿದೆ. ಜಿಲ್ಲೆಯ ಬ್ಯಾಡಗಿ, ಹಾನಗಲ್ಲ, ಹಿರೇಕೆರೂರು ಹಾಗೂ ಶಿಗ್ಗಾಂವಿ ತಾಲೂಕಿಗೆ ಹಸಿಮೆಣಸಿನಕಾಯಿ, ಅಡಕೆ ಮತ್ತು ಶುಂಠಿ, ಹಾವೇರಿ, ರಾಣೆಬೆನ್ನೂರು ಹಾಗೂ ಸವಣೂರು ತಾಲೂಕಿಗೆ ಹಸಿಮೆಣಸಿನಕಾಯಿ ಬೆಳೆ ಅಧಿಸೂಚಿಸಲಾಗಿದೆ ಎಂದರು.

    ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್ ರೋಷನ್, ಕೃಷಿ ಉಪನಿರ್ದೇಶಕರಾದ ಸ್ಪೂರ್ತಿ, ಕರಿಯಲ್ಲಪ್ಪ ಕೊರಚರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ., ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts