More

    ಬಂದರು ಭದ್ರತೆ ಮರೆತರೆ ಆಪತ್ತು: ಸಾವಿರಾರು ಕಾರ್ಮಿಕರು ದುಡಿಯುವ ಸ್ಥಳ ಮಲ್ಪೆ ಪ್ರವಾಸಿಗರ ಮೇಲೂ ನಿಗಾ ಇಲ್ಲ

    ((ವಿಜಯವಾಣಿ ಕಾಳಜಿ))

    • ಶ್ರೀಪತಿ ಹೆಗಡೆ ಹಕ್ಲಾಡಿ ಉಡುಪಿ
      ಮಲ್ಪೆ ಬಂದರಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಕೆಲಸಕ್ಕಾಗಿ ಬಂದವರ ಯಾವುದೇ ಮಾಹಿತಿ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಬಳಿ ಇಲ್ಲ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ನಂತರವೂ ಇಲಾಖೆಗಳು ಎಚ್ಚೆತ್ತುಕೊಂಡಂತಿಲ್ಲ.
    • ಮಂಗಳೂರು ಸ್ಫೋಟದ ನಂತರ ಜಿಲ್ಲೆಯ ಕರಾವಳಿ ಭಾಗದಲ್ಲಿ ಆತಂಕ ಹೆಚ್ಚಿದೆ. ಆರೋಪಿ ಮಹಮದ್ ಶಾರೀಕ್ ಉಡುಪಿಗೂ ಭೇಟಿ ನೀಡಿದ್ದ ಎಂಬುದು ಗಮನಾರ್ಹ. ಮಂಗಳೂರಲ್ಲಿ ದುಷ್ಕೃತ್ಯ ನಡೆಸಿದ ಆರೋಪಿಯ ಬಳಿಯಿದ್ದ ಆಧಾರ್ ಸಹಿತ ದಾಖಲೆಗಳೆಲ್ಲ ನಕಲಿ ಎನ್ನುವುದು ಆತಂಕ ಹೆಚ್ಚಲು ಕಾರಣ. ಸಮುದ್ರ ಮಾರ್ಗ ಭಯೋತ್ಪಾದನೆಗೆ ಹೆಬ್ಬಾಗಿಲಾಗುತ್ತಿರುವ ಮಾಹಿತಿ ಇರುವಾಗ ಮಂಗಳೂರು ಘಟನೆ ಬಂದರು ಪ್ರದೇಶದ ಭದ್ರತೆ ಬಗ್ಗೆ ಆತಂಕ ಮೂಡಿಸುತ್ತಿದೆ.
    • ಉಡುಪಿ, ಮಲ್ಪೆ ಲಕ್ಷಾಂತರ ಜನ ಭೇಟಿ ನೀಡುವ ಪ್ರವಾಸಿ ತಾಣ. ಬಂದರಿನಲ್ಲಿ ದುಡಿಯಲು ಸಾವಿರಾರು ಕಾರ್ಮಿಕರು ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದ ಬರುತ್ತಾರೆ. ಇಂಥ ಜಾಗದಲ್ಲಿ ಪೊಲೀಸ್, ಕಾರ್ಮಿಕ, ಮೀನುಗಾರಿಕಾ ಇಲಾಖೆಗಳು ಬಂದರಿನ ಜತೆಗೆ ಮರಳು, ಕಟ್ಟಡ ಕಾರ್ಮಿಕರ ಮಾಹಿತಿ ಸಂಗ್ರಹಿಸಿದರೆ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ತಪ್ಪಿಸಬಹುದು.
    • ಸುರಕ್ಷಾ ಕ್ರಮಗಳೇನು?: ಹಣ ಕೊಟ್ಟರೆ ನಕಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕೃಷ್ಣ ಮಠ, ಸೇಂಟ್ ಮೇರಿಸ್ ಐಲೆಂಡ್ ವೀಕ್ಷಣೆ, ಮಲ್ಪೆ ಬಂದರಿಗೆ ದುಡಿಯಲು ಬರುವ ಕಾರ್ಮಿಕರ ದಾಖಲೆ ಸತ್ಯಾಸತ್ಯತೆ ಪರಿಶೀಲನೆ ಆಗಬೇಕು. ಸಮುದ್ರದಲ್ಲಿ ಅಪಾಯ ಸಂಭವಿಸಿದರೆ ತಕ್ಷಣ ಪ್ರತಿಕ್ರಿಯೆಗೆ ಕಡಲಲ್ಲಿ ಆಂಬುಲೆನ್ಸ್ ಇದೆ ಎನ್ನುವುದು ಹೇಳಿಕೆಗಷ್ಟೇ ಸೀಮಿತ. ಸರ್ಕಾರ ಸುರಕ್ಷತಾ ಕ್ರಮ ಕೈಗೊಳ್ಳಲು ಬೇಕಾದ ಆಧುನಿಕ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಬೇಡಿಕೆ.

    ರಿಪ್ಪರ್ ಚಂದ್ರನ್ ನೆನಪಿದೆಯೇ?: ಅವಿಭಜಿತ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ರಿಪ್ಪರ್ ಚಂದ್ರನ್ ಸ್ಟೋರಿಯನ್ನು ಅಧಿಕಾರಿಗಳು ಮರೆತಂತಿದೆ. ಉಡುಪಿ ಜನರನ್ನು ಕನಸಲ್ಲೂ ಬೆಚ್ಚಿ ಬೀಳಿಸುವ ಚಂದ್ರನ್ ಅಬ್ಬೆಪಾರಿಯಾಗಿ ಉಡುಪಿಯಲ್ಲಿ ಇದ್ದುಕೊಂಡೇ ಕುಕೃತ್ಯ ನಡೆಸುತ್ತಿದ್ದ. ಹೊರಗಡೆಯಿಂದ ಬಂದವರ ಮಾಹಿತಿ ಕಲೆ ಹಾಕುವುದರಲ್ಲಿ ಇಲಾಖೆ ವಿಫಲವಾಗಿದ್ದೇ ಕೃತ್ಯಕ್ಕೆ ಕಾರಣವಾಯಿತು. ಚಂದ್ರನ್ ಭಯ ಉಡುಪಿಯಲ್ಲಿ ಎಷ್ಟಿತ್ತು ಎಂದರೆ ಇಲಿ ಶಬ್ದ ಮಾಡಿದರೂ ಜನ ಬೆಚ್ಚಿ ಬೀಳುತ್ತಿದ್ದರು. ನಾಗರಿಕರೇ ತಂಡ ರಚಿಸಿಕೊಂಡು ರಾತ್ರಿ ಕಾವಲು ಕಾಯಬೇಕಾಯಿತು. ಉಡುಪಿ ಸ್ಲಮ್‌ನಿಂದಲೇ ಚಂದ್ರನ್ ರಾತ್ರಿ ದಾಳಿ ಮಾಡುತ್ತಿದ್ದ.

    ಕೃಷ್ಣ ಮಠ ಸುರಕ್ಷಿತವೇ?: ಉಡುಪಿ ಕೃಷ್ಣ ಮಠಕ್ಕೆ ಭಯೋತ್ಪಾದಕರ ಭೀತಿ ಇರುವ ಕಾರಣ ರಥಬೀದಿಗೆ ವಾಹನ ಪ್ರವೇಶ ಬಂದ್ ಮಾಡಿ, ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಿಗೆ ಗೇಟ್ ಅಳವಡಿಸಿ, ಸೆಕ್ಯುರಿಟಿ ನೇಮಕ ಮಾಡಲು ಆಗ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ನಿರ್ದೇಶನ ನೀಡಿದ್ದರು. ರಾಜಾಂಗಣ ಬಳಿ ಪೊಲೀಸ್ ಔಟ್‌ಪೋಸ್ಟ್ ಆರಂಭಿಸಲಾಗಿತ್ತು. ಕೃಷ್ಣ ಮಠಕ್ಕೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಆರಂಭದಲ್ಲಿ ಎಲ್ಲವೂ ಸರಿಯಿತ್ತು. ಬರಬರುತ್ತಾ ಎಲ್ಲವೂ ಸಡಿಲವಾಗಿ ವಾಹನಗಳು ರಥಬೀದಿಗೆ ಬರುವುದಿಲ್ಲ ಎನ್ನುವುದೊಂದು ಬಿಟ್ಟರೆ ಮತ್ತೆಲ್ಲಾ ಮಾಮೂಲಾಗಿದೆ. ಪೊಲೀಸ್ ಔಟ್‌ಪೋಸ್ಟ್ ತೆರವು ಮಾಡಲಾಗಿದೆ. ಪರ್ಯಾಯ, ವಿಟ್ಲಪಿಂಡಿ, ಜನ್ಮಾಷ್ಟಮಿ, ಇನ್ನಿತರ ವಿಶೇಷ ಸಮಯದಲ್ಲಿ ಬಿಟ್ಟರೆ ಮತ್ತೆ ಸೆಕ್ಯುರಿಟಿ ದುರ್ಬೀನು ಹಾಕಿ ಹುಡುಕಬೇಕು.

    ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್, ಬೋಟಲ್ಲಿರುವ ಕೆಲಸಗಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಲ್ಪೆ ಬಂದರು ಪ್ರದೇಶದಲ್ಲಿ ಬರುವುದರಿಂದ ಅವರೇ ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಬೇರೆ ಇಲಾಖೆಗಳಿಂದ ನಿಯೋಜನೆ ಮೇಲೆ ಕೋಸ್ಟಲ್ ಸೆಕ್ಯುರಿಟಿಗೆ ಸಿಬ್ಬಂದಿ ಬರುವುದರಿಂದ ಸಮುದ್ರ ಮೀನುಗಾರಿಕೆ ಬಗ್ಗೆ ಅಷ್ಟೊಂದು ತಿಳಿವಳಿಕೆ ಇರುವುದಿಲ್ಲ. ಕೋಸ್ಟಲ್ ಸೆಕ್ಯುರಿಟಿ ಹುದ್ದೆಗೆ ನೇಮಕ ಮಾಡುವಾಗ ನುರಿತ ಮೀನುಗಾರರಿಗೆ ಆದ್ಯತೆ ನೀಡಿದರೆ ಪ್ರಯೋಜನ ಆಗುತ್ತದೆ.
    ಯಶ್‌ಪಾಲ್ ಸುವರ್ಣ, ಮೀನುಗಾರ ಮುಖಂಡ

    ಮಲ್ಪೆ ಬಂದರಲ್ಲಿ ಸಾವಿರಾರು ಕಾರ್ಮಿಕರ ಮೇಲೆ ಕಣ್ಣಿಡುವುದು, ಸಾವಿರ ಲೆಕ್ಕದಲ್ಲಿ ಬರುವ ಐಲೆಂಡ್ ಬೀಚ್ ಪ್ರವಾಸಿಗರ ಮೇಲೆ ಕಣ್ಣಿಡುವುದು ಪ್ರಾಯೋಗಿಕವಾಗಿ ಸುಲಭಸಾಧ್ಯವಲ್ಲ. ಅಹಿತಕರ ಘಟನೆ ನಡೆದಾಗ ಸಾರ್ವಜನಿಕರು ಕೈಜೋಡಿಸುವ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲರೂ ಸೇರಿ ಇಂಥ ಘಟನೆ ನಡೆಯದಂತೆ ಪರಿಹಾರ ಕಂಡುಕೊಳ್ಳಬೇಕಿದೆ. ಬೀಚ್‌ನಲ್ಲಿ, ಬಂದರಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಎಲ್ಲರನ್ನೂ ಪೊಲೀಸರು ಪರಿಶೀಲಿಸಲು ಸಾಧ್ಯವಿಲ್ಲ. ಸಾಮೂಹಿಕ ಜವಾಬ್ದಾರಿಯಿಂದ ಎಲ್ಲರೂ ಒಟ್ಟಾಗಿ ನಿಂತಾಗ ಸಾಧ್ಯ.
    ಹಾಕೆ ಅಕ್ಷಯ್ ಮಚ್ಚಿಂದ್ರ, ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts