More

    ಜಾನುವಾರು ಮಾರುಕಟ್ಟೆಯಲ್ಲಿ ಜನಜಂಗುಳಿ

    ವಿಜಯವಾಣಿ ವಿಶೇಷ ಹಾವೇರಿ

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಅಧಿಕವಾಗುತ್ತಿದೆ. ಅದರಲ್ಲಿಯೂ ಜಿಲ್ಲಾ ಕೇಂದ್ರ ಹಾವೇರಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ. ಈ ಸಮಯದಲ್ಲಿ ನಗರದಲ್ಲಿ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಅದರಲ್ಲೂ ಜಾನುವಾರು ಮಾರುಕಟ್ಟೆಯಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ಆತಂಕ ಉಂಟು ಮಾಡುತ್ತಿದೆ.

    ಹಾವೇರಿಯ ಜಾನುವಾರು ಮಾರುಕಟ್ಟೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ವಾರದ ಏಳು ದಿನವೂ ಜಾನುವಾರಗಳ ಮಾರಾಟ ನಡೆಯುತ್ತದೆ. ಅದರಲ್ಲಿಯೂ ಗುರುವಾರ ಸಂತೆಯ ದಿನವಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದಿಂದ ಜಾನುವಾರು ಮಾರಾಟ ಹಾಗೂ ಖರೀದಿಗೆ ವ್ಯಾಪಾರಸ್ಥರು ಬರುತ್ತಾರೆ. ಆದರೆ, ಇಲ್ಲಿ ಕರೊನಾ ಹರಡದಂತೆ ತಡೆಯಲು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ಇರುವ ಪರಿಣಾಮ ಕರೊನಾ ವೈರಸ್ ಹರಡುವ ಭೀತಿ ಆವರಿಸಿದೆ.

    ಜನರಲ್ಲಿಯೂ ಜಾಗೃತಿಯಿಲ್ಲ: ಜಾನುವಾರು ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿಯೂ ಕರೊನಾದ ಜಾಗೃತಿ ಮೂಡಿಲ್ಲ. ಪರಸ್ಪರ ಅಂತರದ ಸುರಕ್ಷತೆಯನ್ನು ಯಾರೂ ಅನುಸರಿಸುತ್ತಿಲ್ಲ. ಅಲ್ಲದೆ, ಗುರುವಾರ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿರುವುದರಿಂದ ಎಪಿಎಂಸಿಯ ಆವರಣದಲ್ಲಿ ಜಾನುವಾರುಗಳನ್ನು ನಿಲ್ಲಿಸಲು ಜಾಗವಿಲ್ಲದೆ ಹಾನಗಲ್ಲ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿಯೇ ವಹಿವಾಟನ್ನು ನಡೆಸಲಾಯಿತು. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಅಡೆತಡೆಯುಂಟಾಯಿತು.

    ಕೈ ಚೆಲ್ಲಿ ಕುಳಿತ ಎಪಿಎಂಸಿ: ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿಯವರು ಈಗಾಗಲೇ ಕಾಳುಕಡಿ ಹಾಗೂ ಕಾಯಿಪಲ್ಯ ಮಾರುಕಟ್ಟೆಗೆ ಬರುವವರ ಆರೋಗ್ಯ ತಪಾಸಣೆಗೆ ಮುಖ್ಯದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಬಿಡುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ಎಪಿಎಂಸಿಯಲ್ಲಿ ಹೆಚ್ಚಿನ ವಹಿವಾಟಿಲ್ಲದ ಕಾರಣ ಖರ್ಚು-ವೆಚ್ಚ ನಿಭಾಯಿಸುವುದು ಕಷ್ಟಕರ. ಈಗಾಗಲೇ ಮೂರು ಕಡೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾನುವಾರು ಮಾರುಕಟ್ಟೆಗೆ ಎರಡು ಪ್ರವೇಶ ದ್ವಾರಗಳಿದ್ದು, ಅಲ್ಲಿಯೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಎಪಿಎಂಸಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

    ಸಂಚಾರ ನಿಯಂತ್ರಿಸದ ಪೊಲೀಸರು: ಜಾನುವಾರು ಮಾರುಕಟ್ಟೆಯಲ್ಲಿ ಸಾರ್ವಜನಿಕರು ವಾಹನಗಳನ್ನು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ಆದರೆ, ಇವುಗಳನ್ನು ನಿಯಂತ್ರಿಸಬೇಕಾದ ಪೊಲೀಸರು ಮಾರುಕಟ್ಟೆಗೆ ಬರುವ ವಾಹನಗಳಿಂದ ಇಂತಿಷ್ಟು ಹಣ ಪಡೆದು ಹೋಗುತ್ತಾರೆ. ಇದರಿಂದ ಜಾನುವಾರುಗಳನ್ನು ರಸ್ತೆಗೆ ತಂದು ಮಾರುವ ಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಜಾನುವಾರು ಮಾರುಕಟ್ಟೆಯಲ್ಲಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗಾಗಿ ಸಮಸ್ಯೆಯಾಗುತ್ತಿದೆ. ಕರೊನಾ ಹರಡದಂತೆ ಮುಂಜಾಗ್ರತೆ ಕ್ರಮಕ್ಕೆ ಅಗತ್ಯ ಸೌಲಭ್ಯ ನೀಡಲು ಜಿಲ್ಲಾಧಿಕಾರಿ, ಡಿಎಚ್​ಒ, ಎಸ್​ಪಿ ಅವರಿಗೆ ಮನವಿ ಮಾಡಿದ್ದೇವೆ. ಯಾವುದೇ ಸ್ಪಂದನೆ ಬಂದಿಲ್ಲ. ಈಗ ಮತ್ತೊಮ್ಮೆ ಮನವಿ ಮಾಡುತ್ತೇವೆ. ಎಪಿಎಂಸಿಯಿಂದ ಕರೊನಾ ಮುಂಜಾಗ್ರತೆ ಕ್ರಮಕ್ಕೆ ಯಾವುದೇ ಅನುದಾನ ಬಳಕೆಗೆ ಸರ್ಕಾರದ ಮಾರ್ಗಸೂಚಿಯಿಲ್ಲ. ಹೀಗಾಗಿ, ಯಾವ ಅನುದಾನದಲ್ಲಿ ವೆಚ್ಚ ಮಾಡಬೇಕು ಎಂಬುದು ನಮಗೂ ಸಮಸ್ಯೆಯಾಗಿದೆ.

    | ಪರಮೇಶ್ವರ ನಾಯ್ಕ, ಕಾರ್ಯದರ್ಶಿ ಎಪಿಎಂಸಿ ಹಾವೇರಿ

    ಎಪಿಎಂಸಿಗೆ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿ ಯಾರಿಗಾದರೂ ಸೋಂಕು ಪತ್ತೆಯಾದರೆ ಮಾರುಕಟ್ಟೆಯನ್ನೇ ಸೀಲ್​ಡೌನ್ ಮಾಡುವ ಪ್ರಸಂಗ ಬರಲಿದೆ. ಎಪಿಎಂಸಿಯಲ್ಲಿ ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವು. ಅಲ್ಲಿಂದ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಬ್ಯಾರಿಕೇಡ್ ಅಳವಡಿಸಲು ಎಸ್​ಪಿಯವರಿಗೂ ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ಬ್ಯಾರಿಕೇಡ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್​ಗ್ಲೌಸ್ ಹಾಗೂ ಭದ್ರತೆಗೆ ಪೊಲೀಸ್ ಸಿಬ್ಬಂದಿ ಪೂರೈಸಿದರೆ ಜಾನುವಾರು ಮಾರುಕಟ್ಟೆಯಲ್ಲಿಯೂ ಮುಂಜಾಗ್ರತೆ ಕ್ರಮಕ್ಕೆ ಮುಂದಾಗುತ್ತೇವೆ.

    | ಮಲ್ಲಿಕಾರ್ಜುನ ಹಾವೇರಿ, ಅಧ್ಯಕ್ಷರು ಎಪಿಎಂಸಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts