More

    ಸಾರ್ವಜನಿಕ ಗಣೇಶೋತ್ಸವ ಇಲ್ಲ

    ಧಾರವಾಡ: ಗಣೇಶೋತ್ಸವ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣದ ಮುನ್ನೆಚ್ಚರಿಕೆಗಾಗಿ ಈ ವರ್ಷವೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ. ಸುರಕ್ಷತಾ ಕ್ರಮಗಳೊಂದಿಗೆ ದೇವಸ್ಥಾನ ಹಾಗೂ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು. ಸಿಎಸ್​ಐಆರ್ ಮತ್ತು ನೀರಿ ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಬ್ಬದ ಆಚರಣೆ ಮುಂಜಾಗ್ರತೆ ಕ್ರಮಗಳ ಜಿಲ್ಲಾ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಈಗಾಗಲೇ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ನಿತ್ಯ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲೂ ಆಗಸ್ಟ್ ಅಂತ್ಯಕ್ಕೆ ಏರಿಕೆಯಾಗುವ ಸಂಭವವಿದೆ. ಸೆಪ್ಟಂಬರ್ ವೇಳೆಗೆ ಸಂಭಾವ್ಯ 3ನೇ ಅಲೆ ಅತ್ಯಧಿಕವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದರು.

    ಪ್ಲಾಸ್ಟರ್ ಆಫ್ ಪ್ಯಾರಿಸ್​ನಿಂದ ತಯಾರಿಸಿದ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಮೂರ್ತಿ ತಯಾರಕರು ಇದನ್ನು ಗಮನಿಸಬೇಕು. ಹೊರ ರಾಜ್ಯಗಳಿಂದ ಇಂತಹ ಮೂರ್ತಿಗಳು ಬರುವ ಮಾಹಿತಿ ಇದ್ದರೆ ಜಿಲ್ಲಾಡಳಿತ, ಪೊಲೀಸ್ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೆ ಅಂತಹ ವಿಗ್ರಹಗಳನ್ನು ವಶಕ್ಕೆ ಪಡೆಯಲಾಗುವುದು. ನದಿ, ಕೆರೆ, ಕಾಲುವೆ ಹಾಗೂ ಬಾವಿಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆ ನಿಷೇಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನೆಗೆ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಕೃತಕ ಟ್ಯಾಂಕ್​ಗಳ ವ್ಯವಸ್ಥೆ ಮಾಡಲಿವೆ. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು ಎಂದರು.

    ಪರಿಸರ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು. ಅಧಿಕೃತ ಲಾಂಛನ, ಕ್ಯೂಆರ್ ಕೋಡ್ ಇಲ್ಲದ ಪಟಾಕಿಗಳನ್ನು ಮಾರಾಟಗಾರರು ದಾಸ್ತಾನು ಮಾಡುವಂತಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 2020ರ ನ. 9ರಂದು ನೀಡಿರುವ ಆದೇಶವನ್ನು ಕಡ್ಡಾಯವಾಗಿ ಜಾರಿ ಮಾಡಲಾಗುವುದು ಎಂದರು.

    ಹು-ಧಾ ನಗರ ಉಪ ಪೊಲೀಸ್ ಆಯುಕ್ತ ಕೆ. ರಾಮರಾಜನ್ ಮಾತನಾಡಿ, ಕೋವಿಡ್ ನಿಯಂತ್ರಣ ಉದ್ದೇಶದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ಜನತೆ ಪಾಲಿಸಿ ಸಹಕರಿಸಬೇಕು. ಆರೋಗ್ಯ ರಕ್ಷಣೆ, ಸಾಮಾಜಿಕ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

    ಚೆಕ್ ಪೋಸ್ಟ್ ಸ್ಥಾಪನೆ: ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಛಬ್ಬಿ ಗ್ರಾಮದ ಕೆಲ ಕುಟುಂಬಗಳ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ದರ್ಶನಕ್ಕೆ ಹೊರ ರಾಜ್ಯಗಳಿಂದ ಜನರು ಬರುತ್ತಾರೆ. ಇವರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ತಪಾಸಣೆ ಮಾಡಲು ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದರು.

    ಪ್ರೊಬೆಷನರಿ ಐಎಎಸ್ ಅಧಿಕಾರಿ ಮಧುಕರ ಗುತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ.ಬಿ., ಜಿಪಂ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ, ಡಿವೈಎಸ್​ಪಿ ಎನ್.ಎಂ. ಸಂಕದ, ಅಬಕಾರಿ ಉಪ ಆಯುಕ್ತ ಪ್ರಶಾಂತ ಕುಮಾರ, ಪಾಲಿಕೆ ಉಪ ಆಯುಕ್ತ ಸಮೀರ್ ಮುಲ್ಲಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೋಭಾ ಪೋಳ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಪಟಾಕಿ ಮಾರಾಟಗಾರರು, ವಿಗ್ರಹಗಳ ತಯಾರಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts