More

    5 ವರ್ಷವಾದರೂ ಅಪೂರ್ಣ ಕಾಮಗಾರಿ

    ಕಡಬ: 2015-16ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಕೈಗೆತ್ತಿಕೊಂಡ ಸಭಾಂಗಣದ ಕಾಮಗಾರಿ ಐದು ವರ್ಷವಾದರೂ ಪೂರ್ಣವಾಗಿಲ್ಲ.

    ನೂಜಿಬಾಳ್ತಿಲ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡೆಗೊಂಡು ಗ್ರಾಮದ ಅಭಿವೃದ್ಧಿಗೆ 75 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ಅದರಲ್ಲಿ 18 ಲಕ್ಷ ರೂ.ನಲ್ಲಿ ನೂಜಿಬಾಳ್ತಿಲ ಗ್ರಾಪಂ ಕಚೇರಿಯ ಮೇಲ್ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಂಗಣದ ಕಾಮಗಾರಿ ಕಳೆದ 5 ವರ್ಷಗಳಿಂದ ಕುಂಟುತ್ತಿದೆ. ಜತೆಗೆ ಗ್ರಾಪಂ ಮುಂಭಾಗದಲ್ಲಿ 2.5 ಲಕ್ಷ ರೂ.ನಲ್ಲಿ ನಡೆಯಬೇಕಾದ ಇಂಟರ್‌ಲಾಕ್ ಕೆಲಸವೂ ಪೂರ್ಣಗೊಂಡಿಲ್ಲ.
    ಕೆಆರ್‌ಡಿಎಲ್ ಗುತ್ತಿಗೆ ಪಡೆದಿರುವ ಸಭಾಂಗಣದ ಕಾಮಗಾರಿಯ ಪಿಲ್ಲರ್ ಹಾಗೂ ಗೋಡೆಗಳ ನಿರ್ಮಾಣ ಕೆಲಸ ಮುಗಿದಿದೆ. ಕಾಂಕ್ರೀಟ್ ಕೆಲಸ, ಸಾರಣೆ ಸೇರಿದಂತೆ ಬಹುತೇಕ ಕಾರ್ಯಗಳು ಅಪೂರ್ಣ ಸ್ಥಿತಿಯಲ್ಲಿವೆ. ವಠಾರದಲ್ಲಿ ತಂದು ಹಾಕಿರುವ ಮರಳು, ಜಲ್ಲಿ, ಇಟ್ಟಿಗೆ ಕಲ್ಲುಗಳು ಹಾಗೇ ಇವೆ.

    ಲೋಕಾಯುಕ್ತಕ್ಕೆ ದೂರು: ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ನೂಜಿಬಾಳ್ತಿಲ ಗ್ರಾ.ಪಂ. ಹಾಗೂ ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಸಂಬಂಧಪಟ್ಟವರ ನಿರ್ಲಕ್ಷೃದಿಂದ ಕಾಮಗಾರಿ ನಡೆಯದೆ ಇರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೂಜಿಬಾಳ್ತಿಲ ಪಂಚಾಯಿತಿ ಸಭಾಂಗಣದ ಕಾಮಗಾರಿ ಪೂರ್ಣಗೊಳಿಸುವಂತೆ ನಾವು ಅನೇಕ ಬಾರಿ ಒತ್ತಡ ತಂದಿದ್ದೇವೆ. ಅಲ್ಲದೇ ಜಿಪಂಗೂ ದೂರು ನೀಡಿದ್ದೇವೆ. ಕಾಮಗಾರಿ ಇಂತಿಷ್ಟು ಸಮಯದಲ್ಲಿ ಪೂರ್ಣಗೊಳಿಸಬೇಕು ಎಂಬ ನಿಯಮ ಇಲ್ಲದೇ ಇರುವುದೇ ಕುಂಠಿತವಾಗಲು ಕಾರಣ.
    ಪಿ.ಪಿ.ವರ್ಗೀಸ್, ಜಿ.ಪಂ. ಸದಸ್ಯ

    ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ನಿರ್ಲಕ್ಷೃದಿಂದ ಕಾಮಗಾರಿ ಅಪೂರ್ಣಗೊಂಡಿದೆ. ಒಂದು ವಾರದ ಸಮಯಾವಕಾಶ ನೀಡಲಾಗಿದ್ದು, ಬಳಿಕವೂ ಕೆಲಸ ಪ್ರಾರಂಭಿಸದಿದ್ದಲ್ಲಿ ಬೇರೆಯವರಿಗೆ ಕೆಲಸ ಮುಂದುವರಿಸಲು ಸೂಚಿಸಲಾಗುವುದು.
    ರಮೇಶ್ ಕುಮಾರ್, ಇಂಜಿನಿಯರ್ ಕೆಆರ್‌ಡಿಎಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts