More

    2024ರ ಬಳಿಕವೇ ಪ್ರವಾಸಿ ಹಡಗು, ಕೇಂದ್ರದಿಂದ ಸಿಗದ ಅನುಮತಿ

    ಹರೀಶ್ ಮೋಟುಕಾನ ಮಂಗಳೂರು

    ವಿಶ್ವದಲ್ಲಿ ಕರೊನಾ ಸೋಂಕು ಕಡಿಮೆಯಾಗದ ಕಾರಣ ಭಾರತಕ್ಕೆ ಪ್ರವಾಸಿ ಹಡಗುಗಳ ಆಗಮನಕ್ಕೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ವರ್ಷದ ಮೊದಲೇ ಬುಕ್ ಆಗಬೇಕಾದ ಕಾರಣ ಈ ವರ್ಷ ಅನುಮತಿ ನೀಡಿದರೂ, 2024ರಲ್ಲಷ್ಟೇ ಮಂಗಳೂರಿಗೆ ಪ್ರವಾಸಿ ಹಡಗು ಬರುವ ನಿರೀಕ್ಷೆ ಹೊಂದಲಾಗಿದೆ.

    ಮುಂಬೈ-ಗೋವಾ ನಡುವೆ ಸಂಚರಿಸುತ್ತಿದ್ದ ಒಂದು ದೇಶೀಯ ಹಡಗಿಗೆ ಮಾತ್ರ ಅನುಮತಿ ಇತ್ತು. ದೇಶದಲ್ಲಿ ಕರೊನಾ ಮೂರನೇ ಅಲೆ ಹರಡಿದ ಕಾರಣ ಈ ಹಡಗು ಕೂಡ ಸ್ಥಗಿತಗೊಂಡಿದೆ. ಅಮೆರಿಕದಲ್ಲಿ ಹಡಗು ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ಆಯಾ ಖಂಡಗಳಲ್ಲಿ ಮಾತ್ರ ಸಂಚರಿಸುತ್ತಿವೆ. ಏಷ್ಯಾಕ್ಕೆ ಸದ್ಯ ಯಾವ ಹಡಗುಗಳೂ ಬರುತ್ತಿಲ್ಲ.
    ಸಾಮಾನ್ಯವಾಗಿ ಮಳೆಗಾಲ ಮುಗಿದ ಬಳಿಕ ನವೆಂಬರ್, ಡಿಸೆಂಬರ್, ಜನವರಿಯಲ್ಲಿ ಪ್ರವಾಸಿ ಹಡುಗಳ ಋತು ಆರಂಭಗೊಳ್ಳುತ್ತವೆ. ಈಗಾಗಲೇ ಈ ಅವಧಿ ಮುಗಿದಿದೆ. ಇನ್ನು ಕರೊನಾ ಸೋಂಕು ಕಡಿಮೆಯಾದರೆ ಈ ವರ್ಷಾಂತ್ಯಕ್ಕೆ ಅನುಮತಿ ಸಿಕ್ಕಿದರೆ ಬುಕಿಂಗ್ ಆರಂಭಗೊಂಡು ಬರುವ ವರ್ಷಾಂತ್ಯ ಅಥವಾ 2024ರ ಆರಂಭದಲ್ಲಿ ಪ್ರವಾಸಿ ಹಡಗುಗಳು ಸಂಚರಿಸುವ ಸಾಧ್ಯತೆ ಇದೆ ಎಂದು ಎನ್‌ಎಂಪಿಟಿ ಅಧಿಕಾರಿಗಳು ತಿಳಿಸಿದ್ದಾರೆ.

    2018ರಲ್ಲಿ 26 ವಿದೇಶಿ ಹಡಗುಗಳು ಎನ್‌ಎಂಪಿಟಿಗೆ ಆಗಮಿಸಿವೆ. ವಿವಿಧ ದೇಶಗಳ ಪ್ರವಾಸಿಗರು, ಮಂಗಳೂರು ಪರಿಸರದ ಪ್ರವಾಸಿತಾಣಗಳ ಸಂದರ್ಶನ ಮಾಡಿದ್ದರು. 2019ರಲ್ಲಿ 27 ವಿದೇಶಿ ಪ್ರವಾಸಿ ಹಡಗುಗಳ ಆಗಮನಕ್ಕೆ ಒಪ್ಪಂದ ನಡೆದಿತ್ತು. ಫೆಬ್ರವರಿ ತನಕ 24 ಹಡಗುಗಳು ಆಗಮಿಸಿತ್ತು. ಕರೊನಾ ಉಲ್ಭಣಗೊಳ್ಳುತ್ತಲೇ ಉಳಿದ ಹಡಗುಗಳ ಆಗಮನ ರದ್ದು ಮಾಡಲಾಗಿತ್ತು.

    ಎನ್‌ಎಂಪಿಟಿಯಲ್ಲಿ ಬರ್ತಿಂಗ್, ಎಮಿಗ್ರೇಶನ್ ಸೆಂಟರ್, ಪ್ರಿಪೇಯ್ಡಿ ಆಟೋ ವ್ಯವಸ್ಥೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳು, ತುಳುನಾಡಿನ ಜನಪದ ಕಲೆಗಳ ಅನಾವರಣ, ಹಡಗು ಬರುವ ಸಂದರ್ಭ ಕಲಾವಿದರಿಂದ ಸ್ವಾಗತ, ಪ್ರವಾಸಿ ತಾಣಗಳ ಸಂದರ್ಶನಕ್ಕಾಗಿ ಮಲ್ಟಿ ಆ್ಯಕ್ಸಿಲ್ ಬಸ್‌ಗಳು, ಟೂರಿಸ್ಟ್ ಕಾರು, ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಸಿಗರು ಗ್ರಾಮೀಣ ಹಾಗು ಕರಕುಶಲ ವಸ್ತುಗಳನ್ನು ಖರೀದಿಸುತ್ತಾರೆ. ಟ್ರಾವಲ್ ಏಜೆನ್ಸಿ, ಕಾರು, ಆಟೋ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ 400ರಿಂದ 500 ಮಂದಿಗೆ ವ್ಯಾಪಾರವಾಗುತ್ತಿತ್ತು. ಇವುಗಳಿಗೆಲ್ಲ ಕರೊನಾ ಅಡ್ಡಿಯಾಗಿದೆ.

    ಆರ್ಥಿಕ ಚಟುವಟಿಕೆಗಳಿಗೆ ಕತ್ತರಿ: ವಿದೇಶಿ ಪ್ರವಾಸಿಗರಲ್ಲಿ 800ರಷ್ಟು ಮಂದಿ ಬಂದರಿನಿಂದ ಹೊರಗೆ ಬಂದು ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಹೋಗುತ್ತಾರೆ. ಪ್ರತಿ ಹಡಗಿನ ಒಬ್ಬೊಬ್ಬ ಪ್ರವಾಸಿಯೂ ಟೂರಿಸ್ಟ್ ವಾಹನ, ವಸ್ತುಗಳ ಖರೀದಿಗೆ ಸುಮಾರು 150 ಯು.ಎಸ್.ಡಾಲರ್(ಸುಮಾರು 10 ಸಾವಿರ ರೂ.) ಖರ್ಚು ಮಾಡುತ್ತಾರೆ. ಒಂದು ಹಡಗಿನ 800 ಮಂದಿಯಿಂದ 8 ಲಕ್ಷ ರೂ., ಹಾಗೂ 24 ಹಡಗುಗಳ 19,200 ಪ್ರವಾಸಿಗರು 19.30 ಕೋಟಿ ರೂ. ಖರ್ಚು ಮಾಡುತ್ತಾರೆ. ಎನ್‌ಎಂಪಿಟಿಗೆ ಆಗಮಿಸುವ ದೊಡ್ಡ ಹಡಗುಗಳಿಗೆ 25 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಸುಮಾರು 6-7 ಕೋಟಿ ರೂ. ವಾರ್ಷಿಕ ಆದಾಯ ಬರುತ್ತದೆ. ದ.ಕ.ಜಿಲ್ಲೆಗೆ ಒಟ್ಟು 25 ಕೋಟಿ ರೂ. ಆದಾಯ ನಷ್ಟವಾಗಿದೆ.

    ಹಡಗುಗಳಲ್ಲಿ ಬರುವ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವಾಗ, ನಮಗೆ ಬಾಡಿಗೆ ಸಿಗುತ್ತಿತ್ತು. ಕರೊನಾ ಬಳಿಕ ಎಲ್ಲವೂ ಸ್ಥಗಿತಗೊಂಡು ಜೀವನವೇ ಕಷ್ಟವಾಗಿದೆ. ದೇಶದ ಆರ್ಥಿಕತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೊನಾ ಕಡಿಮೆಯಾದ ತಕ್ಷಣ ವಿದೇಶಿ ಪ್ರವಾಸಿ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಬೇಕು.
    – ಶುಭಕರ
    ಟ್ಯಾಕ್ಸಿ ಚಾಲಕ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts