More

    ಬಿಕೋ ಎಂದ ನಿಲ್ದಾಣ… ಪ್ರಯಾಣಿಕರು ಹೈರಾಣ..

    ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಮುಷ್ಕರ ಶುರುಮಾಡಿದ್ದು, ಸಾರ್ವಜನಿಕರು ಪರದಾಡಬೇಕಾಯಿತು.

    ಈ ಮಧ್ಯೆ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟದಿರುವಂತೆ ಮಾಡಲು ಧಾರವಾಡ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹುಬ್ಬಳ್ಳಿ, ಧಾರವಾಡ ಸೇರಿ ಪ್ರಮುಖ ಶಹರಗಳಿಂದ ಪಕ್ಕದ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಹೋಗುವವರಿಗಾಗಿ ಖಾಸಗಿ ಬಸ್ ಹಾಗೂ ಇತರ ಪ್ರಯಾಣಿಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

    ವಿಆರ್​ಎಲ್, ಗಣೇಶ, ಬೇಂದ್ರೆ ನಗರ ಸಾರಿಗೆ ಸೇರಿ ವಿವಿಧ ಖಾಸಗಿ ಸಂಸ್ಥೆಗಳ ಬಸ್​ಗಳನ್ನು ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿಸಲಾಯಿತು. ಸಿಬ್ಬಂದಿ ವರ್ಗದವರು ಪ್ರಯಾಣಿಕರನ್ನು ಎಂದಿನಂತೆಯೇ ಕೂಗಿ ಕರೆದು ವಾಹನ ಹತ್ತಿಸಿಕೊಂಡರು. ಕೆಲವು ಗ್ರಾಮೀಣ ಸಾರಿಗೆ ಬದಲು ಖಾಸಗಿ ವಾಹನಗಳಾದ ಮ್ಯಾಕ್ಸಿಕ್ಯಾಬ್, ಕ್ರೂಸರ್ ಮತ್ತಿತರ ವಾಹನಗಳು ಬಸ್ ನಿಲ್ದಾಣದಿಂದಲೇ ಸೇವೆ ನೀಡಲು ಅನುವು ಮಾಡಿಕೊಡಲಾಗಿತ್ತು. ಬೆರಳೆಣಿಕೆಯ ಸಾರಿಗೆ ನೌಕರರೂ ಪ್ರಮುಖ ಊರಿಗೆ ಸೇವೆ ನೀಡಿದರು. ಮಧ್ಯಾಹ್ನದ ವೇಳೆಗೆ ಅಧಿಕಾರಿಗಳು ಮನವೊಲಿಸಿದ್ದರಿಂದ ಚಾಲಕರು ಬಂದು 2 ನಗರ ಸಾರಿಗೆ ಹಾಗೂ 1 ಬಿಆರ್​ಟಿಎಸ್ ಬಸ್​ಅನ್ನು ಓಡಿಸಿದರು.

    ನಿಲ್ದಾಣ, ಬಸ್​ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸ್ ಆಯುಕ್ತ ಲಾಭೂರಾಮ ಸ್ವತಃ ಬಸ್ ನಿಲ್ದಾಣಕ್ಕೆ ಬಂದು ಭದ್ರತೆ ಪರಿಶೀಲಿಸಿ ತೆರಳಿದರು.

    ಡಿಪೋದಲ್ಲಿ ತೆಗೆದುಕೊಳ್ಳಲಿಲ್ಲ

    ವಸತಿ ಬಸ್​ಗಳು ಹಳೇ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿದ ನಂತರ ಘಟಕಕ್ಕೆ ತೆರಳಿದವು. ಆದರೆ, ಘಟಕಾಧಿಕಾರಿಗಳು ಎಲ್ಲ ಬಸ್​ಗಳನ್ನೂ ಸ್ವೀಕರಿಸಲಿಲ್ಲ. ನಿಮ್ಮ ಇಂದಿನ ಕರ್ತವ್ಯ ಮುಗಿಯುವಲ್ಲಿವರೆಗೆ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಗ್ರಾಮಾಂತರ ಸಾರಿಗೆ ಸೇವೆ ಮುಗಿಸಿಕೊಂಡು ನಂತರ ಬಸ್ ತಂದರೆ ಸ್ವೀಕರಿಸುತ್ತೇವೆ ಎಂದು ಹೇಳಿದರು. ಹೀಗಾಗಿ, ಚಾಲಕ-ನಿರ್ವಾಹಕರು ಕೆಲವು ಗ್ರಾಮೀಣ ಸಾರಿಗೆ ಸೇವೆ ಒದಗಿಸಿದ ನಂತರ ಮುಷ್ಕರದಲ್ಲಿ ಪಾಲ್ಗೊಂಡರು.

    ನಗರ ಸಾರಿಗೆ ವ್ಯತ್ಯಯ

    ಹುಬ್ಬಳ್ಳಿ ಸಿಬಿಟಿ ಖಾಲಿ ಖಾಲಿಯಾಗಿತ್ತು. ಒಂದೂ ಬಸ್ ಇರಲಿಲ್ಲ. ನಿಲ್ದಾಣಾಧಿಕಾರಿಗಳು ಮಾತ್ರ ಇದ್ದರು. ಸಿಬಿಟಿಯಿಂದ ಬೇರೆ ಕಡೆ ತೆರಳುವ ಮತ್ತು ನಗರದ ವಿವಿಧ ಭಾಗಗಳಿಂದ ಸಿಬಿಟಿ, ಇತರ ಕಡೆ ತೆರಳುವವರು ಸಹಜವಾಗಿ ಆಟೋರಿಕ್ಷಾ ಅವಲಂಬಿಸಿದರು. ಇದೇ ಸಮಯ ಎಂದು ಕೆಲವು ಆಟೋದವರು ದುಪ್ಪಟ್ಟು ಹಣ ಪಡೆದರು. ಸಿಬಿಟಿಯಿಂದ ಅನೇಕ ಆಟೋದವರು ವಿವಿಧ ಭಾಗಗಳಿಗೆ ಪಿಕ್​ಅಪ್ ಸೇವೆ ನೀಡಿದ್ದು ಕಂಡುಬಂತು.

    ಜನ ಕಡಿಮೆ ಇದ್ದರು

    ಸಾರಿಗೆ ನೌಕರರ ಮುಷ್ಕರದ ಅರಿವು ಇದ್ದುದರಿಂದ ಹಲವರು ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದರು. ಹೀಗಾಗಿ, ಬಸ್ ನಿಲ್ದಾಣದಲ್ಲಿ ಜನರ ಸಂಖ್ಯೆ ಕಡಿಮೆ ಇತ್ತು.

    ನಗರಕ್ಕೆ ಬಂದು ಹೋಗುವ ಅನಿವಾರ್ಯತೆ ಇರುವ ವಿದ್ಯಾರ್ಥಿಗಳು, ಸರ್ಕಾರಿ/ಖಾಸಗಿ ನೌಕರರು, ಇತರ ಉದ್ಯೋಗದವರು ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೇ ತೊಂದರೆ ಅನುಭವಿಸಿದರು.

    ಖಾಸಗಿ ಬಸ್ ಮೂಲಕ ಸೇವೆ ಒದಗಿಸಲು ಅನುಕೂಲವಾಗಲಿ ಎಂದು ಸಾರಿಗೆ ಅಧಿಕಾರಿಗಳು ಹೊಸೂರು ಮತ್ತು ಹೊಸ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಇಟ್ಟು, ಹಳೇ ಬಸ್ ನಿಲ್ದಾಣವನ್ನೇ ಕೇಂದ್ರ ಸ್ಥಳವಾಗಿ ಮಾಡಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts