More

    ತನಿಖೆಗೂ ಮುನ್ನ ಉದ್ಘಾಟನೆ ಬೇಡ

    ರಾಮನಗರ: ಅರಣ್ಯ ಇಲಾಖೆಗೆ ಸಂಬಂಧಿಸಿದ ಬಫರ್ ಜೋನ್ ಭೂಮಿಯನ್ನು ರಾಯಸಂದ್ರದ ಬಳಿ ಕರ್ನಾಟಕ ಹೌಸಿಂಗ್ ಬೋರ್ಡ್ ಮನೆ ನಿರ್ವಣಕ್ಕೆ ಬಳಕೆ ಮಾಡಿದ್ದು, ತನಿಖೆಯಾಗುವವರೆಗೆ ವಸತಿ ಸಚಿವ ವಿ. ಸೋಮಣ್ಣ ಉದ್ಘಾಟನೆ ಮುಂದಾಗಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್ ಮನವಿ ಮಾಡಿದರು.

    ನಗರ ಹೊರವಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕಪುರ ತಾಲೂಕಿನ ರಾಯಸಂದ್ರದ ಬಳಿ ರೈತರಿಂದ 164 ಎಕರೆ ಜಮೀನನ್ನು ಕರ್ನಾಟಕ ಹೌಸಿಂಗ್ ಬೋರ್ಡ್​ಗೆ ಭೂಸ್ವಾಧೀನ ಮಾಡಿಕೊಂಡು ಸರ್ಕಾರದ ಹಣ ಲೂಟಿ ಹೊಡೆಯಲು ರಾಯಸಂದ್ರ ರವಿ ಜತೆ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿದ್ದಾರೆ. 38 ಎಕರೆಗೂ ಹೆಚ್ಚು ಭೂಮಿ ಅರಣ್ಯ ಪ್ರದೇಶದ ಬಫರ್ ಜೋನ್​ನಲ್ಲಿದೆ. ಇವರಿಗೆ ಸರ್ಕಾರದಿಂದ ಸಾಗುವಳಿ ಚೀಟಿ ನೀಡದಿದ್ದರೂ, ರೈತರಿಗೆ ಹಣದ ಆಮಿಷ ತೋರಿಸಿ ಕಾನೂನು ರೀತಿ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ರೈತರನ್ನು ದಾರಿ ತಪ್ಪಿಸಿ, ವಂಚನೆ ಮಾಡಿ ಸರ್ಕಾರದ ದುಪ್ಪಟ್ಟು ಹಣವನ್ನು ಮಧ್ಯವರ್ತಿಗಳಿಗೆ ಸಿಗುವಂತೆ ಜಾಲ ರೂಪಿಸಿದ್ದಾರೆ ಎಂದು ಆರೋಪಿಸಿದರು.

    ಹೌಸಿಂಗ್ ಬೋರ್ಡ್ ನಿರ್ವಿುಸುತ್ತಿರುವ ಸ್ಥಳ ಗೋಮಾಳ, ಅರಣ್ಯ ವ್ಯಾಪ್ತಿಯ ಭೂಮಿ ಎಂದು ಸಚಿವ ವಿ.ಸೋಮಣ್ಣ, ಸಂಸದ ಡಿ.ಕೆ.ಸುರೇಶ್ ಅವರಿಗೂ ತಿಳಿದಿದೆ. ಕಾನೂನು ರೀತಿ 2 ಸಾವಿರ ಮನೆಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೂ ತೊಂದರೆಯಾಗಲಿದೆ. ಹಾಗಾಗಿ ಕೆರೆ ಒತ್ತುವರಿ, ಸರ್ಕಾರಿ ಗೋಮಾಳ ಭೂಮಿ ಕಬಳಿಕೆ ಮತ್ತು ಅರಣ್ಯ ಇಲಾಖೆ ಭೂಮಿಯ ದುರ್ಬಳಕೆಯಾಗಿದ್ದು, ಸೂಕ್ತ ತನಿಖೆಯಾಗುವವರೆಗೆ ಫಲಾನುಭವಿಗಳಿಗೆ ಮನೆಗಳನ್ನು ವಿತರಣೆ ಮಾಡಬಾರದು. ಅಲ್ಲದೆ ಪರಿಹಾರದ ಮಾರ್ಗಸೂಚಿ ದರ ಸಿಗದಿರುವುದನ್ನು ಪ್ರಶ್ನಿಸಿ ರೈತರು ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ಹೇಳಿದರು.

    ರೈತರಿಗೆ ಸಿಗಬೇಕಾದ ಹಣ ಬೇನಾಮಿ ವ್ಯಕ್ತಿಗಳಿಗೆ

    ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತ ರಾಮಲಿಂಗೇಗೌಡ ಮಾತನಾಡಿ, ಹೌಸಿಂಗ್ ಬೋರ್ಡ್​ಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಮೂಲ ರೈತರಿಂದ ಕಸಿದುಕೊಂಡು ಅವರಿಗೆ ಸಿಗಬೇಕಾದ ಹಣವನ್ನು ಬೇನಾಮಿ ವ್ಯಕ್ತಿಗಳು ಪಡೆಯುವ ಒಂದು ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಕೇವಲ ರೈತರಿಗಷ್ಟೆ ಅಲ್ಲ, ಮನೆ ಆಕಾಂಕ್ಷಿ ಫಲಾನುಭವಿಗಳಿಗೂ ತೊಂದರೆಯಾಗಲಿದೆ. ಸಚಿವರು ಇದೇ 24ರಂದು ಉದ್ಘಾಟನೆ ಮಾಡಲು ಆಗಮಿಸುತ್ತಿರುವುದರಿಂದ ಈ ವಿಷಯವನ್ನು ಸೋಮಣ್ಣ ಮತ್ತು ರಾಜ್ಯ ಪ್ರಧಾನ ಕಾರ್ಯಧರ್ಶಿ ಅಶ್ವತ್ಥ ನಾರಾಯಣಗೌಡ ಅವರ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts