More

    ಮೊದಲು ಬುಸ್, ಕೊನೆಗೆ ಠುಸ್: ದಾಳಿಗಷ್ಟೇ ಎಸಿಬಿ ಸೀಮಿತ, 5 ವರ್ಷದಲ್ಲಿ ಒಬ್ಬರಿಗೂ ಶಿಕ್ಷೆ ಆಗಿಲ್ಲ..

    | ಅವಿನಾಶ ಮೂಡಂಬಿಕಾನ ಬೆಂಗಳೂರು

    ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಮೇಲೆ ವೀರಾವೇಶದಿಂದ ದಾಳಿ ನಡೆಸಿ ಸಿಂಹಸ್ವಪ್ನವಾಗಿ ಕಾಡುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಆನಂತರ ಮಾತ್ರ ಹಲ್ಲಿಲ್ಲದ ಹಾವಾಗುತ್ತದೆ! ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಈ ತನಿಖಾ ಸಂಸ್ಥೆ ಅಘೋಷಿತ ಆಸ್ತಿ (ಡಿಸ್​ಪ್ರಪೋರ್ಷನೇಟ್ ಅಸೆಟ್ಸ್) ಪ್ರಕರಣಗಳಲ್ಲಿ ರಾಜ್ಯದಲ್ಲಿ 80ಕ್ಕೂ ಹೆಚ್ಚು ಕಾರ್ಯಾಚರಣೆ ಕೈಗೊಂಡಿದೆಯಾದರೂ, ಈವರೆಗೆ ಒಬ್ಬರಿಗೂ ಶಿಕ್ಷೆ ಆಗಿಲ್ಲ ಎನ್ನುವುದು ಓಪನ್ ಸೀಕ್ರೆಟ್! 2016ರ ಮಾ.14ರಂದು ಅಸ್ತಿತ್ವಕ್ಕೆ ಬಂದ ಎಸಿಬಿ ರಾಜ್ಯಾದ್ಯಂತ ಅಘೋಷಿತ ಆಸ್ತಿ ಕೇಸ್​ಗಳಿಗೆ ಸಂಬಂಧಿಸಿದಂತೆ 989ಕ್ಕೂ ಹೆಚ್ಚಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ದಾಳಿ ನಡೆಸಿದೆ. ಇದರಲ್ಲಿ 510ಕ್ಕೂ ಹೆಚ್ಚಿನ ಪ್ರಕರಣಗಳು ತನಿಖಾ ಹಂತದಲ್ಲಿವೆ. ದಾಳಿಗೊಳಗಾದ ಸಂದರ್ಭ ದಲ್ಲಷ್ಟೇ ಸುದ್ದಿಯಾಗುವ ಅಧಿಕಾರಿಗಳು ನಂತರ ಕೆಲವೇ ದಿನಗಳಲ್ಲಿ ಏನೂ ಆಗಿಲ್ಲ ಎನ್ನುವಂತೆ ಮತ್ತೆ ಅದೇ ಕಚೇರಿ, ಅದೇ ಹುದ್ದೆಗೆ ಹಾಜರಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ದೊಡ್ಡವರು ಸೇಫ್: 45 ಪ್ರಮುಖ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರ ಉನ್ನತ ಹುದ್ದೆಯ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ನಿರಾಕರಿಸಿದೆ. ಹೀಗಾಗಿ ಸಣ್ಣ-ಪುಟ್ಟ ಪ್ರಕರಣ ಹೊರತುಪಡಿಸಿ ದೊಡ್ಡ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಎಸಿಬಿ ವಿಫಲವಾಗಿದೆ. ಸರ್ಕಾರ ಎಸಿಬಿಗೆ ಬಲ ನೀಡುವ ಬದಲು ಇನ್ನಷ್ಟು ಕುಗ್ಗಿಸಲು ಹೊರಟಿದೆ. ಬಿಡಿಎ, ಲೋಕೋಪಯೋಗಿ, ಕೆಐಎಡಿಬಿ, ಕೃಷಿ, ಬಿಬಿಎಂಪಿ ಸೇರಿ ಇನ್ನಿತರ ಹಲವು ಇಲಾಖೆಗಳ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಜಂಟಿ ನಿರ್ದೇಶಕರು, ಇಂಜಿನಿಯರ್​ಗಳು ಕೋಟಿ – ಕೋಟಿ ಭ್ರಷ್ಟಾಚಾರ ಆರೋಪದ ಮೇಲೆ ಎಸಿಬಿ ಬಲೆಗೆ ಬಿದ್ದು ವರ್ಷಗಳೇ ಉರುಳಿದ್ದರೂ ಇನ್ನೂ ಚಾರ್ಜ್​ಶೀಟ್ ಸಲ್ಲಿಕೆಯಾಗಿಲ್ಲ.

    80 ಕೆಜಿ ಚಿನ್ನ ಜಪ್ತಿ: ಎಸಿಬಿ ದಾಳಿಯಲ್ಲಿ ಈವರೆಗೆ ಅಂದಾಜು 80 ಕೆಜಿಗೂ ಅಧಿಕ ಚಿನ್ನಾಭರಣ, 50 ಕೋಟಿ ರೂ. ಗೂ ಅಧಿಕ ನಗದು, ನೂರಾರು ಕೋಟಿ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. ಈ ಪೈಕಿ ಸೂಕ್ತ ದಾಖಲೆ ಕೊಟ್ಟವರಿಗೆ ಅವರ ಆಸ್ತಿ ಹಿಂತಿರುಗಿಸಲಾಗುತ್ತದೆ. ಶೇ.78 ಪ್ರಕರಣ ತನಿಖಾ ಹಂತದಲ್ಲಿದ್ದು, ಇದು ಇತ್ಯರ್ಥಗೊಂಡ ಬಳಿಕವೇ ದಾಳಿಗೊಳಗಾದವರ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.

    ಎಸಿಬಿಯಲ್ಲಿ ದಾಖಲಾದ ಪ್ರಕರಣಗಳು
    • ವರ್ಷ- ಪ್ರಕರಣ
    • 2016- 153
    • 2017- 289
    • 2018- 378
    • 2019- 379
    • 2020- 271
    • ಅಭಿವೃದ್ದಿ ಹಕ್ಕು ವರ್ಗಾವಣೆ (ಟಿಡಿಆರ್) ಹಗರಣದಲ್ಲಿ 5 ಪ್ರಕರಣಗಳಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಬಾಕಿ.
    • ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ, ಬಿಡಿಎ ಮುಖ್ಯ ಇಂಜಿನಿಯರ್ ಆಗಿದ್ದ ಜಿ.ಎನ್.ಗೌಡಯ್ಯ ಮೇಲಿನ ಕೇಸ್.
    • ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕನ ವಿರುದ್ಧ ದಾಖಲಾಗಿದ್ದ ಪ್ರಕರಣ.
    • ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯುಡಿ ಇಂಜಿನಿಯರ್​ಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ವಿುಕ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಧಿಕಾರಿಗಳು, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರರು, ಬಿಡಿಎ ಉಪನಿರ್ದೇಶಕರು, ಆರ್.ಟಿ.ಓ ಕಚೇರಿ ಮತ್ತು ಮನೆಗಳ ಮೇಲೆ ನಡೆದ ದಾಳಿಗಳು.

    ದಾಳಿಗೊಳಗಾದವರ ಆಸ್ತಿಗೆ ಸಂಬಂಧಿಸಿದ ಪ್ರತಿ ದಾಖಲೆಗಳನ್ನೂ ಕಲೆ ಹಾಕಿ ತನಿಖೆ ನಡೆಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ದೊಡ್ಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ವಿಳಂಬವಾಗುತ್ತದೆ. ಎಸಿಬಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

    | ಸೀಮಂತ್ ಕುಮಾರ್ ಸಿಂಗ್ ಎಸಿಬಿ, ಎಡಿಜಿಪಿ

    1638: ದಾಖಲಾಗಿರುವ ಕೇಸ್​ಗಳು

    368: ಆರೋಪಿ ಅಧಿಕಾರಿಗಳ ವಿಚಾರಣೆಗೆ ಸಿಕ್ಕಿಲ್ಲ ಸಕ್ಷಮ ಪ್ರಾಧಿಕಾರದ ಅನುಮತಿ

    615: ಅಧಿಕಾರಿಗಳ ವಿರುದ್ಧ ದೋಷಾ ರೋಪ ಪಟ್ಟಿ

    04: ಜನರಿಗಷ್ಟೇ ಶಿಕ್ಷೆ (ಎಲ್ಲ ಕೇಸ್ ಸೇರಿ)

    ತನಿಖೆ ಹಿನ್ನಡೆಗೆ ಕಾರಣ?

    • ಭ್ರಷ್ಟ ಅಧಿಕಾರಿಗಳು ರಾಜಕಾರಣಿಗಳ ಮೊರೆ ಹೋಗಿ ಸರ್ಕಾರದ ಮೂಲಕ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ, ಸಾಕ್ಷ್ಯ ಸಿಗದ ಕಾರಣಕ್ಕೆ ಬಿ-ರಿಪೋರ್ಟ್ ಹಾಕುವುದು ಸಾಮಾನ್ಯವಾಗಿದೆ
    • ರಾಜಕಾರಣಿಗಳು, ಪ್ರಭಾವಿಗಳ ಮಧ್ಯಪ್ರವೇಶದಿಂದ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ
    • ಉನ್ನತಾಧಿಕಾರಿಗಳ ಪ್ರಮುಖ ಪ್ರಕರಣಗಳಲ್ಲಿ ಅಭಿಯೋ ಜನೆ ಮಂಜೂರಾತಿ ಸಿಗುವುದು ವಿಳಂಬವಾಗುತ್ತದೆ
    • ವಿಚಾರಣೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದೇ ಇರುವುದರಿಂದ ತನಿಖೆ ಮುಂದೆ ಸಾಗುವುದಿಲ್ಲ
    • ಚಾರ್ಜ್​ಶೀಟ್ ಸಲ್ಲಿಸಲು ಎಸಿಬಿ ಅಧಿಕಾರಿಗಳು ತೋರು ತ್ತಿರುವ ವಿಳಂಬ ಸಾಕ್ಷ್ಯ ನಾಶಕ್ಕೆ ಅನುಕೂಲವಾಗುತ್ತಿದೆ
    • ಎಸಿಬಿ ಸರ್ಕಾರದ ಅಧೀನದಲ್ಲಿರುವುದರಿಂದ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಬೇಕಾದ ಅನಿವಾರ್ಯ

    ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

    ಲಗ್ನವಾಗಲು ಹೊರಟ ಯುವತಿ, ವಜ್ರದೇಹಿ ಸ್ವಾಮೀಜಿಯ ಮಧ್ಯಪ್ರವೇಶ: ಈ ಮದ್ವೆ ಬೇಡ ಎಂದು ಆಕೆಯ ಮನವೊಲಿಕೆ; ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts