More

    ಕಾಡಿನೊಳಡಗಿದ ಪಿಲಿಕುಳ ಅರ್ಬನ್ ಹಾಥ್: ನಿರ್ವಹಣೆ ಕೊರತೆಯಿಂದ ಸಾಮಗ್ರಿ ಹಾಳು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಆವರಣದಲ್ಲಿರುವ ಕಟ್ಟಡಗಳ ಎತ್ತರಕ್ಕೆ ಕಾಡು ಬೆಳೆದು ನಿಂತಿದೆ. ಪೈಂಟಿಂಗ್ ಮಾಡಿ ನಿರ್ವಹಣೆ ಮಾಡದ ಕಾರಣ ಉಪ್ಪು ಮಿಶ್ರಿತ ಗಾಳಿಗೆ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದು ಮಣ್ಣು ಪಾಲಾಗುತ್ತಿವೆ.

    ಪಿಲಿಕುಳದಲ್ಲಿ ಮಾವು ಮೇಳ, ಹಲಸು ಮೇಳ ನಡೆಯುತ್ತಿದ್ದ ಅರ್ಬನ್ ಹಾಥ್‌ನಲ್ಲಿರುವ ಕಟ್ಟಡಗಳ ಎತ್ತರಕ್ಕೆ ಕಾಡು ಬೆಳೆದು ನಿಂತಿದೆ. ಇಲ್ಲಿಗೆ ನೇರವಾಗಿ ಬರಲು ಅವಕಾಶ ಇರುವುದರಿಂದ ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕಟ್ಟಡಗಳ ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
    ಉದ್ಯಾನವನದೊಳಗಿರುವ ಕಬ್ಬಿಣದ ಸಾಮಗ್ರಿಗಳಿಗೆ ಪೈಂಟ್ ಬಳಿದು ನಿರ್ವಹಣೆ ಮಾಡದ ಕಾರಣ ತುಕ್ಕು ಹಿಡಿಯುತ್ತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಹಕ್ಕಿಗಳಿಗೆ ಅಳವಡಿಸಿರುವ ಬಲೆ, ಕಬ್ಬಿಣದ ಗೇಟ್‌ಗಳು, ಪಾರ್ಕ್‌ನಲ್ಲಿ ಮನ ಸೆಳೆಯುವ ಉದ್ದೇಶದಿಂದ ನಿರ್ಮಾಣ ಮಾಡಿದ ಐಫೆಲ್ ಗೋಪುರ ತುಕ್ಕು ಹಿಡಿಯುತ್ತಿವೆ. ಸಕಾಲದಲ್ಲಿ ಪೈಂಟಿಂಗ್ ಮಾಡಿ ನಿರ್ವಹಣೆ ಮಾಡಿದರೆ ಮಾತ್ರ ಇವು ದೀರ್ಘ ಕಾಲ ಬಾಳ್ವಿಕೆ ಬರುತ್ತದೆ.

    ಕರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಆದಾಯ ಕಡಿಮೆಯಾಗಿರುವುದರಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಜೈವಿಕ ಉದ್ಯಾನವನದಲ್ಲಿರುವ ಪ್ರಾಣಿಗಳಿಗೆ ಆಹಾರ ಒದಗಿಸಲು ಕೂಡ ಕಷ್ಟಕರವಾಗುತ್ತಿದೆ. ದಾನಿಗಳ ನೆರವಿನಿಂದ ಮುನ್ನಡೆಯುತ್ತಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅನುದಾನ ಪಡೆದು ಇಲ್ಲಿ ಹಲವು ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡದೆ ಇರುವುದರಿಂದ ಅವು ದೀರ್ಘ ಕಾಲ ಬಾಳ್ವಿಕೆ ಇಲ್ಲದೆ ನಾಶವಾಗುತ್ತಿದೆ. ಈಗಾಗಲೇ ನಿರ್ಮಾಣ ಆಗಿರುವುದನ್ನು ನಿರ್ವಹಣೆ ಮಾಡಿ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ಇಲ್ಲಿನ ಆಡಳಿತ ವರ್ಗಕ್ಕಿದೆ.

    ಪಿಲಿಕುಳ ನಿಸರ್ಗಧಾಮದ ವ್ಯಾಪ್ತಿ ವಿಸ್ತಾರವಾಗಿದೆ. ಹಂತ ಹಂತವಾಗಿ ಕಾಡು ತೆಗೆಯುವ ಕೆಲಸ ಸಂಸ್ಥೆ ವತಿಯಿಂದಲೇ ಮೂರು ಮಷಿನ್‌ನಲ್ಲಿ ನಡೆಯುತ್ತಿದೆ. ಪ್ರಾಣಿ ಸಂಗ್ರಹಾಲಯದೊಳಗಿನ ಕೆಲಸ ಮುಗಿದು ಈಗ ಕೆರೆಯ ಬಳಿ ಕಾಡು ತೆಗೆಯಲಾಗುತ್ತಿದೆ. ಸೀಮಿತ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ.
    ಬಾಬು ದೇವಾಡಿಗ
    ಆಡಳಿತಾಧಿಕಾರಿ ಪಿಲಿಕುಳ ನಿಸರ್ಗಧಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts