More

    370ನೇ ವಿಧಿ ರದ್ದತಿ; ಸುಪ್ರೀಂ ಕೋರ್ಟ್​ ತೀರ್ಪಿಗೆ ಕಾನೂನು ಮಾನ್ಯತೆ ಇಲ್ಲ ಎಂದ ಪಾಕಿಸ್ತಾನ

    ನವದೆಹಲಿ:  ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆಯ ಅಧಿಕಾರಿಗಳು ಆಗಿಂದಾಗೆ ಕಾಶ್ಮೀರದ ಬಗ್ಗೆ ಹೇಳಿಕೆ ಕೊಟ್ಟು ತೀವ್ರ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಇದೀಗ ಪಾಕಿಸ್ತಾನ ಸರ್ಕಾರ ಇದೇ ವಿಚಾರವಾಗಿ ಮತ್ತೊಮ್ಮೆ ಹೇಳಿಕೆ ನೀಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್​ ಎತ್ತಿ ಹಿಡಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯಿಸಿದ್ದು, ಇದನ್ನು ಅಂತರಾಷ್ಟ್ರೀಯ ಕಾನೂನು ಮಾನ್ಯ ಮಾಡುವುದಿಲ್ಲ ಎಂದಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಇಂದು ತೀರ್ಪು ನೀಡಿದೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿರುವ ಪಾಕಿಸ್ತಾನ ಇದು ಕಾನೂನುಬಾಹಿರ ಕ್ರಮವಾಗಿದ್ದು, ಇದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದಿದೆ.

    ಇದನ್ನೂ ಓದಿ: VIDEO| ಪಾಕ್​ ಸೇನೆಗೆ ಇದೆಂಥಾ ದುಸ್ಥಿತಿ; ಹಣಕ್ಕಾಗಿ ಮದುವೆ ಸಮಾರಂಭದಲ್ಲಿ ಬೀಟಿಂಗ್ ರಿಟ್ರೀಟ್ ಪ್ರದರ್ಶನ

    2019ರ ಆಗಸ್ಟ್​ 05ರಂದು ಭಾರತ ಸರ್ಕಾರವು ಕೈಗೊಂಡಿರುವ ಕ್ರಮಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕಾನೂನು ಮಾನ್ಯತೆ ಇಲ್ಲ. ಸರ್ಕಾರದ ಆದೇಶಕ್ಕೆ ಪೂರಕವಾಗಿ ಅಲ್ಲಿನ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪಿಗೂ ಸಹ ಯಾವುದೇ ಮಾನ್ಯತೆ ಇಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಕಾಶ್ಮೀರದ ಜನರನ್ನು ಅನಿರ್ಭಂಧಿತ ಹಕ್ಕುಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಜಲೀಲ್​ ಅಬ್ಬಾಸ್​ ಜಿಲಾನಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    370ನೇ ವಿಧಿ ರದ್ದತಿ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಮುಸ್ಲಿಂ ಲೀಗ್​ ಪಕ್ಷದ ಅಧ್ಯಕ್ಷ ಶಹಬಾಜ್​ ಷರೀಫ್​ ಇದು ಏಕಪಕ್ಷೀಯ ನಿರ್ಣಯವಾಗಿದ್ದು, ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧ ಭಾರತದ ಸುಪ್ರೀಂ ಕೋರ್ಟ್​ ತೀರ್ಪು ನೀಡುವ ಮೂಲಕ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ. ಲಕ್ಷಾಂತರ ಕಾಶ್ಮೀರಿಗಳು ಮಾಡಿರುವ ತ್ಯಾಗಕ್ಕೆ ಸುಪ್ರೀಂ ಕೋರ್ಟ್ ದ್ರೋಹ ಬಗೆದಿದ್ದು, ಹೋರಾಟ ಇನ್ನೂ ಕ್ಷೀಣಿಸಿಲ್ಲ.

    ಭಾರತ ಸರ್ಕಾರದ ಈ ನಿರ್ಣಯದಿಂದ ಸ್ವತಂತ್ರ ಕಾಶ್ಮೀರದ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ಕಾಶ್ಮೀರಿಗಳ ಹಕ್ಕುಗಳಿಗಾಗಿ ನಾವು ಎಲ್ಲಾ ಹಂತಗಳಲ್ಲೂ ಧ್ವನಿ ಎತ್ತಲಿದ್ದೇವೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಮುಸ್ಲಿಂ ಲೀಗ್​ ಪಕ್ಷದ ಅಧ್ಯಕ್ಷ ಶಹಬಾಜ್​ ಷರೀಫ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts