More

    ವರ್ಗಾಯಿಸಿ ಇಲ್ಲವೇ ದಯಾಮರಣ ಕೊಡಿ!; ಪೊಲೀಸರಿಗೆ ಸಿಗದ ಅಂತರ ಜಿಲ್ಲಾ ವರ್ಗ ಭಾಗ್ಯ

    | ಕೀರ್ತಿನಾರಾಯಣ ಸಿ. ಬೆಂಗಳೂರು
    ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಹೆಡ್ ಕಾನ್​ಸ್ಟೆಬಲ್. ಪತ್ನಿ ವಿಜಯನಗರ ಜಿಲ್ಲೆಯಲ್ಲಿ ಪ್ರಥಮ ದರ್ಜೆ ಗುಮಾಸ್ತೆ (ಎಫ್​ಡಿಎ). ವಯಸ್ಸಾದ ತಂದೆ-ತಾಯಿಗೆ ಮಗನಾಗಿ ಸೇವೆ ಮಾಡುವ ಯೋಗ ಇಲ್ಲ. ಹೆಂಡತಿ ಮಕ್ಕಳ ಜತೆಗಿದ್ದು ಅವರನ್ನು ನೋಡಿಕೊಳ್ಳಲೂ ಆಗುತ್ತಿಲ್ಲ. ಇದೇ ಚಿಂತೆಯಲ್ಲಿ ಆರೋಗ್ಯ ಕೆಟ್ಟಿದೆ…!

    ಪತಿ-ಪತ್ನಿ ಪ್ರಕರಣದಲ್ಲಿ ಅಂತರ ಜಿಲ್ಲಾ ವರ್ಗಾವಣೆ ಸಿಗದೆ ಪರದಾಡುತ್ತಿರುವ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಒಬ್ಬರ ನೋವಿನ ಮಾತುಗಳಿವು… ಇದೇ ರೀತಿ ಪೊಲೀಸ್ ಇಲಾಖೆಯ ಸಾವಿರಾರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪತ್ನಿ, ಮಕ್ಕಳು, ಅಪ್ಪ-ಅಮ್ಮನ ಜತೆಗಿರಲಾಗದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಅತ್ತ, ಸರಿಯಾಗಿ ಕೆಲಸವೂ ಮಾಡಲಾಗದೆ ಇತ್ತ ಕುಟುಂಬದ ಜತೆಗೂ ಬಾಳಲಾಗದೆ ಸಂಕಷ್ಟದಲ್ಲಿರುವ ಕೆಳಹಂತದ ಪೊಲೀಸರು, ನಮಗೆ ಅಂತರ ಜಿಲ್ಲಾ ವರ್ಗಾವಣೆ ಮಾಡಲಿ, ಇಲ್ಲವಾದರೆ ದಯಾಮರಣವನ್ನು ಕಲ್ಪಿಸಲಿ ಎಂದು ಅಲವತ್ತುಕೊಂಡಿದ್ದಾರೆ.

    ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2022ರಲ್ಲಿ 16ಎ ನಿಯಮ ಮರುಸೇರ್ಪಡೆಗೊಳಿಸುವ ಮೂಲಕ ಸಿ ಮತ್ತು ಡಿ ವೃಂದದ ನೌಕರರಿಗೆ ಅಂತರಜಿಲ್ಲಾ ವರ್ಗಾವಣೆಗೆ ಅವಕಾಶ ಕೊಟ್ಟು 2022ರ ನವೆಂಬರ್​ನಲ್ಲೇ ಆಗಿನ ಸರ್ಕಾರ ಅಧಿಸೂಚನೆ ಹೊರಡಿಸಿ ಕನಿಷ್ಠ 7 ವರ್ಷ ಸೇವೆ ಪೂರ್ಣಗೊಳಿಸಿರುವ ಪತಿ-ಪತ್ನಿ ಪ್ರಕರಣದಲ್ಲಿ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೆ ಅನುಮತಿಸಿತ್ತು. ಆದರೆ, ಇದಾಗಿ 1 ವರ್ಷ ಕಳೆದರೂ ಈವರೆಗೆ ಪೊಲೀಸ್ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆ ಭಾಗ್ಯ ದೊರೆತಿಲ್ಲ.

    ಸರ್ಕಾರಿ ನೌಕರರಾಗಿರುವ ಪತ್ನಿ ಅಥವಾ ಪತಿ ಯಾರಾದರೊಬ್ಬರು ಸ್ವಂತ ಕೋರಿಕೆ ಮೇಲೆ ಅರ್ಜಿ ಸಲ್ಲಿಸಿ ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ವರ್ಗಾವಣೆ ಆಗಬಹುದು. ಅದೇ ಪ್ರಕಾರ ಬೇರೆ ಇಲಾಖೆಗಳಲ್ಲಿ ಪತಿ-ಪತ್ನಿ ವರ್ಗಾವಣೆ ಮಾಡಲಾಗಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಾತ್ರ ವರ್ಗಾವಣೆ ಅರ್ಜಿಗಳನ್ನು ಪರಿಗಣಿಸಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಪತಿ-ಪತ್ನಿ ಪ್ರಕರಣಗಳನ್ನು ಹೊರತುಪಡಿಸಿ 5 ಸಾವಿರಕ್ಕೂ ಅಧಿಕ ಪೊಲೀಸ್ ಕಾನ್​ಸ್ಟೆಬಲ್​ಗಳು ಜಿಲ್ಲಾ ವರ್ಗಾವಣೆಗೆ ಕೇಳಿದ್ದಾರೆ.

    ನಮಗೇ ಯಾಕೀ ಶಿಕ್ಷೆ?

    ಐಪಿಎಸ್-ಐಎಎಸ್ ಸೇರಿ ಉನ್ನತ ಹುದ್ದೆಗಳಲ್ಲಿರುವವರು ಪತಿ-ಪತ್ನಿ ಇಬ್ಬರೂ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಳಹಂತದ ಪೊಲೀಸ್ ಸಿಬ್ಬಂದಿಗೆ ಮಾತ್ರ ಆ ಯೋಗ ಇಲ್ಲ. ಪತ್ನಿ ಒಂದು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಪತಿ 500-600 ಕಿ.ಮೀ ದೂರದಲ್ಲಿರುವ ಇನ್ನೊಂದು ಜಿಲ್ಲೆಯಲ್ಲಿ ಕರ್ತವ್ಯ ಮಾಡಬೇಕಾಗಿದೆ. ವರ್ಗಾವಣೆಗೆ ಸರ್ಕಾರವೇ ಅನುಮತಿ ಕೊಟ್ಟಿರುವಾಗ ಅಧಿಕಾರಿಗಳು ತೊಂದರೆ ಕೊಡುತ್ತಿರುವುದೇಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

    ವರ್ಗಾವಣೆ ಕೇಳಿದ್ಯಾರು?

    ಪೊಲೀಸ್-ಎಸ್​ಡಿಎ, ಪೊಲೀಸ್-ಎಫ್​ಡಿಎ, ಪೊಲೀಸ್-ಪಿಡಿಒ, ಪೊಲೀಸ್-ಮಹಿಳಾ ಪೊಲೀಸ್, ಪೊಲೀಸ್-ಶಿಕ್ಷಕಿ ಹೀಗೆ ಪೊಲೀಸ್ ಇಲಾಖೆ ಹಾಗೂ ಬೇರೆಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಪತಿ-ಪತ್ನಿ ವರ್ಗಾವಣೆ ಕೇಳುತ್ತಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ, ಶಿವಮೊಗ್ಗದಿಂದ ವಿಜಯನಗರ, ಬಾಗಲಕೋಟೆ-ಬೆಳಗಾವಿ, ವಿಜಯನಗರ-ಬೀದರ್, ರಾಯಚೂರು-ದಾವಣಗೆರೆ ಹೀಗೆ ಬೇರೆ ಜಿಲ್ಲಾಗಳಿಗೆ ವರ್ಗಾವಣೆ ಬಯಸಿದ್ದಾರೆ.

    ಸರ್ಕಾರದ ಆದೇಶವೇನಿದೆ?

    • ಸದ್ಯ ಸೇವೆ ಸಲ್ಲಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಮುಗಿಸಿದ್ದ ವರಿಗೆ ವರ್ಗಾವಣೆಗೆ ಅನುಮತಿ
    • ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸ್ವಂತ ಕೋರಿಕೆ ವರ್ಗಾವಣೆಗೆ ಮನವಿ ಸಲ್ಲಿಸಬಹುದು
    • ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ವರ್ಗಾವಣೆಗೆ ಅವಕಾಶ
    • ಸ್ವಂತ ಕೋರಿಕೆ ವರ್ಗಾವಣೆ ಮನವಿಯನ್ನು ಘಟಕ ಮುಖ್ಯಸ್ಥರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು

    ಪೊಲೀಸರ ಆರೋಪವೇನು?

    • ವರ್ಗಾವಣೆ ಪಟ್ಟಿ ಸಿದ್ಧವಾಗಿ ಎಡಿಜಿಪಿ ಟೇಬಲ್​ಗೆ ಹೋಗಿ 2 ತಿಂಗಳಾದರೂ ಸಹಿ ಹಾಕಿಲ್ಲ.
    • ಟ್ರಾನ್ಸ್​ಫರ್ ಬಗ್ಗೆ ಪ್ರಶ್ನಿಸಿದರೆ ಈಗಲೇ ಏನು ಅರ್ಜೆಂಟ್, ಮಾಡುತ್ತೇವೆ ಎನ್ನುವ ಅಧಿಕಾರಿಗಳು.
    • ಯಾವ ಉದ್ದೇಶದಿಂದ ಸಹಿ ಹಾಕಲು ವಿಳಂಬವಾಗುತ್ತಿದೆ ಎಂಬುದೇ ತಿಳಿಯದ ಸಿಬ್ಬಂದಿ.
    • ಕೆಲವರು ಕೆಎಟಿ ಮೆಟ್ಟಿಲೇರಿದ್ದು, ವರ್ಗಾವಣೆ ಮಾಡಲು ನ್ಯಾಯಾ ಧಿಕರಣ ಆದೇಶ ಕೊಟ್ಟಿದೆ.

    ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

    ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts