More

    ಹೊಸ ವಿದ್ಯಾರ್ಥಿಗಳಿಗಿಲ್ಲ ಹಾಸ್ಟೆಲ್ ಅವಕಾಶ

    ಸುಭಾಸ ಧೂಪದಹೊಂಡ ಕಾರವಾರ

    ಕಾಲೇಜ್ ತರಗತಿಗಳು ಸಂಪೂರ್ಣವಾಗಿ ಪ್ರಾರಂಭವಾಗಿವೆ. ಆದರೆ, ಹಾಸ್ಟೆಲ್​ಗಳಲ್ಲಿ ಇದುವರೆಗೂ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯದ ಕಾರಣ ಸಮಸ್ಯೆ ಉಂಟಾಗಿದ್ದು, ವಿದ್ಯಾರ್ಥಿಗಳು ದುಬಾರಿ ಹಣ ತೆತ್ತು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

    ನವೆಂಬರ್ 15ರಿಂದಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಆಫ್​ಲೈನ್ ತರಗತಿ ಪ್ರಾರಂಭಿಸಲಾಗಿತ್ತು. ಜ. 1ರಿಂದ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದ್ದವು. 15ರಿಂದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐಗಳ ಎಲ್ಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳಿಗೂ ಆಫ್​ಲೈನ್ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಪದವಿ ತರಗತಿಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿದ್ದರೆ, ಇಂಜಿನಿಯರಿಂಗ್ ತರಗತಿಗಳು ಪ್ರಾರಂಭದ ಹಂತದಲ್ಲಿವೆ.

    ಕಾಲೇಜ್​ಗೆ ಭರ್ತಿಯಾಗುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ಗಳ ಅವಶ್ಯಕತೆ ಇದೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಾಸ್ಟೆಲ್​ಗಳಲ್ಲಿ ಈ ಹಿಂದೆ ಪ್ರವೇಶ ಪಡೆದವರಿಗೆ ಮಾತ್ರ ನವೀಕರಣ ಮಾಡಲಾಗಿದೆ. ಸದ್ಯ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಲ್ಲಿ 145 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 800ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ಹೊಸದಾಗಿ ಹಾಸ್ಟೆಲ್ ಪ್ರವೇಶ ಬಯಸುವ ಸಾಕಷ್ಟು ವಿದ್ಯಾರ್ಥಿಗಳಿದ್ದು, ಅವರಿಗೆ ಸರ್ಕಾರ ಇದುವರೆಗೂ ಅವಕಾಶ ಮಾಡಿಕೊಡದ ಕಾರಣ ಅನನೂಕೂಲವಾಗಿದೆ. ಹಲ ವಿದ್ಯಾರ್ಥಿಗಳು ದುಬಾರಿ ಬೆಲೆ ತೆತ್ತು ಬಾಡಿಗೆ ಕೊಠಡಿ ಹುಡುಕುವ ಪರಿಸ್ಥಿತಿ ನಿರ್ವಣವಾಗಿದೆ. ಕೆಲವರು ದೂರದಿಂದ ಬಸ್​ಗಳಲ್ಲಿ ಓಡಾಟ ನಡೆಸಿದ್ದಾರೆ. ತರಗತಿಗೆ ಸರಿಯಾಗಿ ಹಾಜರಾಗಲಾರದೇ ತೊಂದರೆಪಡುತ್ತಿದ್ದಾರೆ.

    ಕೋವಿಡ್ ಪರೀಕ್ಷೆ ಗೊಂದಲ

    ಕಾಲೇಜ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಕೆಲವು ಖಾಸಗಿ ಹಾಗೂ ಅನುದಾನಿತ ಕಾಲೇಜ್​ಗಳಲ್ಲಿ ಕೋವಿಡ್ ಪರೀಕ್ಷೆ ನೆಗೆಟಿವ್ ವರದಿ ಇದ್ದ ಹೊರತೂ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿಲ್ಲ. ಇದರಿಂದ ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವ ಇಂಜಿನಿಯರಿಂಗ್ ಹಾಗೂ ಇತರ ಪದವಿ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳ ಎದುರು ಬಂದು ನಿಲ್ಲುತ್ತಿದ್ದಾರೆ. ವಿದ್ಯಾರ್ಥಿ ಹಾಸ್ಟೆಲ್​ನಲ್ಲಿ ವಾಸ್ತವ್ಯ ಹೂಡುವುದಿದ್ದಲ್ಲಿ ಅಥವಾ ಕೋವಿಡ್ ಲಕ್ಷಣ ಇದ್ದರೆ ಮಾತ್ರ ಗಂಟಲ ದ್ರವದ ಮಾದರಿ ಪಡೆದು ಪರೀಕ್ಷೆ ಮಾಡಲಾಗುವುದು ಎಂದು ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಏನು ಮಾಡಬೇಕೆಂದು ತಿಳಿಯದೇ ಗೊಂದಲದಲ್ಲಿದ್ದಾರೆ.

    ಈಗಾಗಲೇ ಹಾಸ್ಟೆಲ್​ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೊಸದಾಗಿ ಯಾವುದೇ ವಿದ್ಯಾರ್ಥಿಯನ್ನು ಹಾಸ್ಟೆಲ್​ಗೆ ಸೇರಿಸಿಕೊಳ್ಳುವ ಸರ್ಕಾರದಿಂದ ಆದೇಶ ಬಂದಿಲ್ಲ.

    | ವಿನಾಯಕ ಬಾಡಕರ್ , ಹಿಂದುಳಿದ ಕಲ್ಯಾಣ ಇಲಾಖೆ ಉಪ ನಿರ್ದೇಶಕ

    ಕಾಲೇಜ್​ಗಳ ಎಲ್ಲ ತರಗತಿಗಳು ಪ್ರಾರಂಭಗೊಂಡಿವೆ. ಇರುವ ಸಮಯದಲ್ಲಿಯೇ ಎಲ್ಲ ಪಠ್ಯಕ್ರಮವನ್ನು ಮುಗಿಸಲು ಪ್ರಾಧ್ಯಾಪಕರು ಮುಂದಾಗಿದ್ದಾರೆ. ಹೀಗಿರುವಾಗ ಹಾಸ್ಟೆಲ್ ನಂಬಿಕೊಂಡ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಈ ಅವಕಾಶ ಬಳಸಿಕೊಂಡು ನಗರ ಪ್ರದೇಶಗಳಲ್ಲಿ ಅನೇಕರು ವಿದ್ಯಾರ್ಥಿಗಳನ್ನು ದೋಚುತ್ತಿದ್ದಾರೆ. ಬಾಡಿಗೆ ಕೊಠಡಿ ಸಿಗದೇ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ತಕ್ಷಣ ಎಲ್ಲ ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು.

    | ಗಣೇಶ ರಾಠೋಡ, ಎಸ್​ಎಫ್​ಐ ಜಿಲ್ಲಾ ಸಂಚಾಲಕ

    ಕಾಲೇಜ್ ತರಗತಿ ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ. ಹಾಸ್ಟೆಲ್​ಗೆ ಕಡ್ಡಾಯ ಎಂಬ ನಿಯಮವಿದೆ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ ನಾವು ಗಂಟಲ ದ್ರವದ ಮಾದರಿಯನ್ನು ಪಡೆಯಲು ಸೂಚಿಸಿದ್ದೇವೆ.

    | ಡಾ.ಶರದ್ ನಾಯಕ, ಡಿಎಚ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts