More

    30 ವರ್ಷದಿಂದ ನಡೆದಿಲ್ಲ ಚುನಾವಣೆ!

    ಬೆಳಗಾವಿ: ಈ ಗ್ರಾಮದ ಎಸ್‌ಸಿ ಮತ್ತು ಎಸ್‌ಟಿ ಮೀಸಲು ಇರುವ ವಾರ್ಡ್‌ಗಳಿಗೆ 30 ವರ್ಷದಿಂದ ಚುನಾವಣೆಯೇ ನಡೆದಿಲ್ಲ. ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ.

    ಇದು ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಪಂನ ವಿಶೇಷ. ದಾಸ್ತಿಕೊಪ್ಪ, ಅಮರಾಪುರ, ವೀರಾಪುರ ಸೇರಿ ಒಟ್ಟು 3 ಗ್ರಾಮಗಳು ಈ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, 14 ಸದಸ್ಯ ಸ್ಥಾನಗಳಿವೆ. ಅದರಲ್ಲಿ ದಾಸ್ತಿಕೊಪ್ಪ ಗ್ರಾಮದಲ್ಲಿ 9 ಸದಸ್ಯ ಸ್ಥಾನಗಳಲ್ಲಿನ ಯಾವುದೇ ವಾರ್ಡ್‌ಗೆ ಎಸ್‌ಸಿ ಮತ್ತು ಎಸ್‌ಟಿ ಮೀಸಲುಗೊಂಡರೆ ಆ ವಾರ್ಡ್‌ಗೆ ಚುನಾವಣೆ ನಡೆಯುವುದಿಲ್ಲ.

    ಏಕೆಂದರೆ ಅಲ್ಲಿನ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನರು ಒಗ್ಗಟ್ಟಿನಿಂದ ಒಬ್ಬರನ್ನೇ ಆಯ್ಕೆ ಮಾಡುತ್ತಾರೆ. ಹಾಗಾಗಿ 1990 ರಿಂದ 2020ರ ನಡುವಿನ ಅವಧಿಯಲ್ಲಿ ಜರುಗಿದ ಗ್ರಾಮ ಪಂಚಾಯಿತಿ 5 ಚುನಾವಣೆಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ವಾರ್ಡ್‌ನಲ್ಲಿ ಅಭ್ಯರ್ಥಿಗಳು ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ.

    ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದಲ್ಲಿ ತಳವಾರ ಮತ್ತು ಕೋಲಕಾರ ಎರಡು ಮನೆತನದವರೇ ಪ್ರತಿ 5 ವರ್ಷಕ್ಕೊಮ್ಮೆ ಒಬ್ಬರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಪಿಕೆಪಿಎಸ್ ಚುನಾವಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಲೇ ಇದ್ದಾರೆ.

    ಗ್ರಾಮದಲ್ಲಿ ಚುನಾವಣೆ ಹೊಸತು: ಕಳೆದ 40 ವರ್ಷದ ಅವಧಿಯಲ್ಲಿ ದಾಸ್ತಿಕೊಪ್ಪ ಗ್ರಾಮದಲ್ಲಿ ಗ್ರಾಪಂ, ಸೊಸೈಟಿ ಸೇರಿದಂತೆ ಯಾವುದೇ ರೀತಿಯಲ್ಲಿ ಚುನಾವಣೆ ನಡೆದಿರಲಿಲ್ಲ. 2010ರ ನಂತರ ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯ ಒಗ್ಗಟ್ಟಿರುವ ಹಿನ್ನೆಲೆಯಲ್ಲಿ ಆ ಸಮುದಾಯಕ್ಕೆ ಮೀಸಲಾಗುವ ವಾರ್ಡ್‌ಗಳಿಗೆ ಚುನಾವಣೆ ನಡೆದ ಉದಾಹರಣೆ ಇಲ್ಲ.

    ಎಲ್ಲ ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆ ಮಾಡಬೇಕು ಎನ್ನುವುದು ಇಲ್ಲಿನವರ ಒಮ್ಮತ. ಆದರೆ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ ಇನ್ನಿತರ ಕಾರಣದಿಂದ ಚುನಾವಣೆ ನಡೆಯುತ್ತಿವೆಯಷ್ಟೇ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉಮೇಶ ಸಿದ್ರಾಮನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts