More

    ಪಾಳುಬಿದ್ದ ವಸತಿ ನಿಲಯ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಹಲವಾರು ವರ್ಷಗಳಿಂದ ವಾಸ್ತವ್ಯವೇ ಇಲ್ಲದೆ ಪಾಳು ಬಿದ್ದು ಭೂತ ಬಂಗಲೆಯಂತಾಗಿರುವ ವಸತಿ ನಿಲಯ… ಮನೆಗೆ ಸಂಪರ್ಕವೇ ಇಲ್ಲದಂತೆ ಸುತ್ತಲೂ ಬೆಳೆದಿರುವ ಗಿಡಗಂಟಿಗಳು.. ನಿರ್ವಹಣೆ ಇಲ್ಲದೆ ಕುಸಿವ ಭೀತಿಯಲ್ಲಿರುವ ಕಟ್ಟಡದ ಗೋಡೆಯಲ್ಲಿ ಕಾಣಸಿಗುವ ಪೋಲಿ ಸಾಹಿತ್ಯ..
    ಇದು ಮಂಗಳೂರು ವಿಶ್ವವಿದ್ಯಾಲಯಕ್ಕೆ ನೀರು ಸರಬರಾಜು ಮಾಡುವ ಪಂಪ್‌ಹೌಸ್‌ನ ಸಿಬ್ಬಂದಿಗೆ ಸಜೀಪಮುನ್ನೂರು ಗ್ರಾಮದ ಬೊಕ್ಕಸ ಎಂಬಲ್ಲಿ ನಿರ್ಮಾಣಗೊಂಡ ವಸತಿ ನಿಲಯದಲ್ಲಿ ಕಂಡುಬರುವ ದೃಶ್ಯಗಳು.

    ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ನೀರು ಸರಬರಾಜು ಮಾಡುವ ಪಂಪ್‌ಹೌಸ್ ಸಜೀಪಮುನ್ನೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿರುವ ಮಡಿವಾಳಪಡ್ಪು ಎಂಬಲ್ಲಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅನುಕೂಲಕ್ಕೆ ಅಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಬೊಕ್ಕಸ ಎಂಬಲ್ಲಿ ಎತ್ತರದ ಪ್ರದೇಶದಲ್ಲಿ 4 ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಆರಂಭದ ಕೆಲವು ದಿನಗಳು ಮಾತ್ರ ಇಲ್ಲಿ ವಾಸ್ಯವ್ಯ ಹೂಡಿದ್ದ ಸಿಬ್ಬಂದಿ ಮತ್ತೆ ಇತ್ತ ಬಂದಿಲ್ಲ. ಈ ವಸತಿ ನಿಲಯ ನಿರ್ಮಾಣಗೊಂಡು 30 ವರ್ಷ ಕಳೆದಿದ್ದು ನಿರ್ವಹಣೆ ಇಲ್ಲದೆ ನಾಲ್ಕು ಮನೆಗಳು ಪಾಳು ಬಿದ್ದಿವೆ.

    ಪಡ್ಡೆಗಳ ಅಡ್ಡೆ: ಮನೆಯಲ್ಲಿ ವಾಸ್ತವ್ಯ ಇಲ್ಲದೆ ಇರುವುದರಿಂದ ಪಡ್ಡೆಗಳಿಗೆ ಸ್ವರ್ಗದಂತಿದೆ. ನಿರ್ಜನ ಪ್ರದೇಶದಲ್ಲಿರುವುದರಿಂದ ಪಡ್ಡೆಗಳ ಅನೈತಿಕ ಚಟುವಟಿಕೆಗಳಿಗೆ ಈ ಮನೆಗಳು ಅಡ್ಡೆಯಾಗಿದ್ದು ಗ್ರಾಮಸ್ಥರಿಗೆ ಮುಜುಗರ ತರುವಂತಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಕಳ್ಳರ ಪಾಲಾಗಿದೆ. ಆದ್ದರಿಂದ ಈ ಮನೆಗಳನ್ನು ನೆಲಸಮಗೊಳಿಸಬೇಕು ಅಥವಾ ಮನೆ ದುರಸ್ತಿ ಮಾಡಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಹಣ ಈ ರೀತಿ ಪೋಲಾಗುವುದು ಸರಿಯಲ್ಲ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ವಿಷಜಂತುಗಳ ವಾಸಸ್ಥಾನ: ಈ ಮನೆಗಳ ಆವರಣದ ಸುತ್ತಲೂ ಆಳೆತ್ತರದ ಗಿಡಗಂಟಿಗಳು ಬೆಳೆದು ಹೊರಭಾಗಕ್ಕೆ ಛಾವಣಿ ಮಾತ್ರ ಕಾಣುತ್ತಿದೆ. ಪ್ರವೇಶ ಮೆಟ್ಟಿಲಿನ ಬಳಿಯಿಂದಲೇ ಪೊದೆಗಳು, ಮರಗಳು ಬೆಳೆದು ಮನೆಗೆ ಹೋಗಲು ದಾರಿ ಇಲ್ಲದಂತಾಗಿದೆ. ಹೆಬ್ಬಾವು, ಕನ್ನಡಿ ಹಾವು, ಉಡ ಮೊದಲಾದ ವಿಷ ಜಂತುಗಳ ಆವಾಸ ಸ್ಥಾನವಾಗಿದ್ದು ಮನೆ ಪರಿಸದರಲ್ಲಿ ಈ ಜಂತುಗಳು ಓಡಾಡಿಕೊಂಡಿರುತ್ತವೆ. ಮಡಿವಾಳ ಪಡ್ಪು, ಬೊಕ್ಕಸ, ಮೊದಲಾದ ಪ್ರದೇಶಗಳಿಗೆ ಇಲ್ಲಿಂದಲೇ ಹೋಗಬೇಕಾಗಿರುವುದರಿಂದ ಈ ನಿರ್ಜನ ಪ್ರದೇಶ ಭಯದ ವಾತಾವರಣ ನಿರ್ಮಿಸಿದೆ.

    ವಾಸ್ತವ್ಯ ಇಲ್ಲದೆ ಮನೆಗಳು ಭೂತ ಬಂಗಲೆಯಂತಾಗಿದೆ. ಈ ಮನೆಯಲ್ಲಿ ರಾತ್ರಿ ಯಾರು ಇರುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸಂಬಂಧಪಟ್ಟವರು ಈ ಮನೆಗಳನ್ನು ದುರಸ್ತಿ ಮಾಡಬೇಕು ಅಥವಾ ನೆಲಸಮ ಮಾಡಬೇಕು.
    ಸಂದೇಶ್ ಮಡಿವಾಳಪಡ್ಪು ಸ್ಥಳೀಯ ನಿವಾಸಿ

    ಮಡಿವಾಳಪಡ್ಪುವಿನಲ್ಲಿ ನಿರಾವರಿ ಸಿಬ್ಬಂದಿಯ ವಸತಿ ನಿಲಯ ಇರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
    ಪ್ರೊ.ಪಿ.ಎಸ್.ಯಡಪಡಿತ್ತಾಯ ಕುಲಪತಿ, ಮಂಗಳೂರು ವಿಶ್ವ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts