More

    ಬೇಡಿಕೆ ಕಳೆದುಕೊಂಡ ಬಾಳೆ

    ಗಿರೀಶ ದೇಶಪಾಂಡೆ ಹಾನಗಲ್ಲ

    ನಿರಂತರ ಮಳೆ ಹಾಗೂ ಕೋವಿಡ್ ಕಾರಣಗಳಿಂದಾಗಿ ಮಾರುಕಟ್ಟೆಯಲ್ಲಿ ಬಾಳೆ ಬೇಡಿಕೆ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಬಾಳೆ ಗೊನೆ ಕೊಯ್ಲು ಮಾಡುವ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಗಿಡಗಳಲ್ಲಿಯೇ ಹಣ್ಣುಗಳು ಕೊಳೆತು ಹೋಗುತ್ತಿವೆ.

    ತಾಲೂಕಿನಲ್ಲಿ 350 ಹೆಕ್ಟೇರ್ ಯಾಲಕ್ಕಿ ಬಾಳೆ, 950 ಹೆಕ್ಟೇರ್ ಪಚ್ಚಬಾಳೆ (ಜಿ-9) ಸೇರಿದಂತೆ ಒಟ್ಟು 1300 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಕಳೆದ ಬೇಸಿಗೆಯ ಪೂರ್ವದಲ್ಲಿ ನಾಟಿ ಮಾಡಿದ್ದ ಬಾಳೆ ಇದೀಗ ಫಸಲು ನೀಡಲಾರಂಭಿಸಿದೆ. ಆದರೆ, ಹಣ್ಣಿಗೆ ಬೇಡಿಕೆ ಇಲ್ಲದ್ದರಿಂದ ಹಾಗೂ ದರವೂ ಕುಸಿದಿರುವುದರಿಂದ ಬೆಳೆಗಾರ ಸಂಕಷ್ಟ ಎದುರಿಸುತ್ತಿದ್ದಾನೆ. ಬಾಳೆಗೆ ಮಾಡಿದ ಖರ್ಚು-ವೆಚ್ಚವೂ ಮರಳಿ ಬಾರದ್ದಂತಾಗಿರುವುದರಿಂದ ಕೊಯ್ಲು ಮಾಡಲು ಆಸಕ್ತಿ ಕಳೆದುಕೊಳ್ಳುತ್ತಿದ್ದಾನೆ. ಮೊದಲೆಲ್ಲ ಬಾಳೆ ಗೊನೆಗಳನ್ನು ಟನ್ ಲೆಕ್ಕದಲ್ಲಿ ತೋಟಕ್ಕೆ ವಾಹನದೊಂದಿಗೆ ಬಂದು ಖರೀದಿಸುತ್ತಿದ್ದ ವ್ಯಾಪಾರಿಗಳು ತಿರುಗಿಯೂ ನೋಡುತ್ತಿಲ್ಲ. ಇನ್ನು ಕೆಲವೆಡೆ ವ್ಯಾಪಾರಸ್ಥರು ಬಂದು ಖರೀದಿಸುತ್ತಿದ್ದರೂ ಸೂಕ್ತ ಬೆಲೆ ಸಿಗುತ್ತಿಲ್ಲ.

    30ರಿಂದ 40 ಕೆಜಿಗಳಷ್ಟು ತೂಕ ತೂಗುವ ಬಾಳೆಗೊನೆಗಳು ಗಿಡದಲ್ಲೇ ಹಣ್ಣಾಗಿ ಹಕ್ಕಿ-ಪಕ್ಷಿಗಳಿಗೆ ಆಹಾರವಾಗುತ್ತಿವೆ. ಬಾಳೆ ಸಸಿಗಳ ಖರೀದಿಯಿಂದ ಮೊದಲ್ಗೊಂಡು, ಗೊಬ್ಬರ, ಔಷಧ, ಕಾರ್ವಿುಕರ ಸಂಬಳ ಸೇರಿದಂತೆ ಎಕರೆಗೆ ಲಕ್ಷಾಂತರ ರೂಪಾಯಿಗಳನ್ನು ರೈತರು ಖರ್ಚು ಮಾಡಿದ್ದಾರೆ. ಬಾಳೆ ಫಲ ವಾಣಿಜ್ಯ ಬೆಳೆ ಎಂದುಕೊಂಡು ಹೆಚ್ಚಿನ ಲಾಭದ ಲೆಕ್ಕಾಚಾರದಲ್ಲಿದ್ದ ರೈತರು ಈಗ ಖರೀದಿದಾರರಿಲ್ಲದೆ ಕಂಗಾಲಾಗಿ ಕುಳಿತಿದ್ದಾರೆ.

    ಹಸಿ ಪದಾರ್ಥವಾಗಿರುವ ಬಾಳೆಯನ್ನು ಇಟ್ಟು ಮಾರುವಂತಿಲ್ಲ, ಕೈಗೆ ಬಂದಷ್ಟಕ್ಕೆ ಮಾರಲೇಬೇಕಾದ ಅನಿವಾರ್ಯತೆಯೂ ಇರುವುದರಿಂದ ಫಸಲನ್ನು ಕಡಿದು, ಖರೀದಿದಾರರನ್ನು ರೈತನೇ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

    ತಾಲೂಕಿನ ಬಾಳೆ ಫಸಲು ಹಲವು ವರ್ಷಗಳಿಂದ ಗೋವಾ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಕಲಬುರಗಿ, ಬೀದರ, ವಿಜಪಯಪುರ ಜಿಲ್ಲೆಗಳಿಗೆ ರವಾನೆಯಾಗುತ್ತಿತ್ತು. ಆದರೆ, ಮಳೆ ವಿಪರೀತವಾಗಿರುವುದರಿಂದ ಈಗ ಬೇಡಿಕೆ ಇಲ್ಲವಾಗಿದೆ.

    ಕೋವಿಡ್ ಕಾರಣ: ಬಾಳೆ ಬೇಡಿಕೆ ಕಳೆದುಕೊಳ್ಳಲು ಪ್ರಮುಖ ಕಾರಣವೆಂದರೆ ಕರೊನಾ. ಕೋವಿಡ್ ಸಂದರ್ಭವಿರುವುದರಿಂದ ತಂಪಾದ ಪದಾರ್ಥಗಳನ್ನು ಸೇವಿಸಬಾರದೆಂದು ತಜ್ಞರು ಸಲಹೆ ಮಾಡಿದ್ದಾರೆನ್ನಲಾಗಿದೆ. ಬಾಳೆಹಣ್ಣು ತಂಪು ಎಂಬಂಥ ಸಲಹೆಗಳ ಹಿನ್ನೆಲೆಯಲ್ಲಿ ಬೇಡಿಕೆ ಕಳೆದುಕೊಂಡಿದೆ ಎನ್ನಲಾಗುತ್ತಿದೆ.

    ಮೊದಲಿನಂತೆ ಹೊರ ರಾಜ್ಯಗಳಿಗೆ ಬಾಳೆಹಣ್ಣು ಹೋಗುತ್ತಿಲ್ಲ. ಇದರೊಂದಿಗೆ ಸ್ಥಳೀಯ ಮಾರುಕಟ್ಟೆಯಲ್ಲಿಯೂ ದರ ಕುಸಿತವಾಗಿದೆ. ಮಳೆಗಾಲ ವಿಪರೀತವಾಗಿರುವುದರಿಂದ ಯಾವುದೇ ಮಾರುಕಟ್ಟೆಯಲ್ಲಿಯೂ ಮಾರಾಟವಾಗುತ್ತಿಲ್ಲ. ಮಿಟ್ಲಿಬಾಳೆ ಟನ್​ಗೆ 6000 ರೂ., ಪಚ್ಚಬಾಳೆ (ಜಿ-9) ಟನ್​ಗೆ 2000ದಿಂದ 5000 ರೂ. ದರದಲ್ಲಿ ಮಾರಾಟಗೊಳ್ಳುತ್ತಿದ್ದರೂ ಲಾಭದಾಯಕವೆನಿಸುತ್ತಿಲ್ಲ. ಬಾಳೆಗೆ ಅಗತ್ಯ ಶೀಥಲೀಕರಣ ಘಟಕ, ಉಪಉತ್ಪನ್ನಗಳ ತಯಾರಿಕೆ ಘಟಕಗಳನ್ನು ಸ್ಥಾಪಿಸಬೇಕಿದೆ. ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳು, ಸರ್ಕಾರ ಗಮನ ಹರಿಸಬೇಕು.

    | ಪ್ರಕಾಶಗೌಡ ಪಾಟೀಲ, ಬಾಳೆ ಬೆಳೆಗಾರ ಅಕ್ಕಿಆಲೂರ

    ಗ್ರಾಹಕರಿಗೆ ರೋಗದ ಭೀತಿ-ರೈತರಿಗೆ ಮಾರುಕಟ್ಟೆ ಭೀತಿ ಎದುರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಾಳೆಹಣ್ಣು ಸೇವಿಸಬಾರದೆಂಬ ವೈದ್ಯರ ಸಲಹೆಗಳಿಂದ ಸಾರ್ವಜನಿಕರಲ್ಲಿ ಭೀತಿ ಆವರಿಸಿರುವುದರಿಂದ ಬೇಡಿಕೆ ಕುಸಿತವಾಗಿದೆ. ಯಾಲಕ್ಕಿ ಬಾಳೆಗೆ ಒಂದಷ್ಟು ಬೇಡಿಕೆಯಿದೆ. ಒಟ್ಟಾರೆಯಾಗಿ ಬಾಳೆಹಣ್ಣು ಖರೀದಿಗೆ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಬೇಸಿಗೆ ಬರುವವರೆಗೂ ಇದಕ್ಕೆ ಪರಿಹಾರ ಸಿಗಲಾರದು.

    | ಮಂಜುನಾಥ ಬಣಕಾರ, ಹಿರಿಯ ನಿರ್ದೇಶಕ, ತೋಟಗಾರಿಕೆ ಇಲಾಖೆ, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts