More

    ರಾಜಧಾನಿಯಲ್ಲಿ ಸಂಪರ್ಕವಿಲ್ಲದೇ ಶೇ.70 ಕೇಸ್!

    ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ 36 ಕರೊನಾ ಪ್ರಕರಣಗಳು ಪತ್ತೆಯಾಗಿದೆ. ಆದರೆ, ಈ ಪೈಕಿ ಶೇ.70 ಸೋಂಕಿತರಿಗೆ (25 ಮಂದಿ) ಯಾವುದೇ ಪ್ರವಾಸ ಇತಿಹಾಸವಾಗಲಿ ಅಥವಾ ಈ ಹಿಂದೆ ಸೋಂಕಿತರೊಂದಿಗೆ ಸಂಪರ್ಕವಾಗಲಿ ಇಲ್ಲ! 36ರಲ್ಲಿ ಇನ್​ಫ್ಲೂಯೆಂಜಾ ರೀತಿಯ ಅನಾರೋಗ್ಯದಿಂದ (ಐಎಲ್​ಐ) 11, ತೀವ್ರ ಉಸಿರಾಟದ ತೊಂದರೆಯಿಂದ (ಸಾರಿ) 9 ಹಾಗೂ ಸಂಪರ್ಕ ಪತ್ತೆ ಹಚ್ಚಲಾಗುತ್ತಿರುವ 5 ಪ್ರಕರಣ ಸೇರಿ 25 ಕೇಸ್​ಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಮಹಾರಾಷ್ಟ್ರದಿಂದ ಆಗಮಿಸಿದ್ದ ಒಬ್ಬರಲ್ಲಿ, 10 ಮಂದಿಗೆ ಬೇರೊಬ್ಬರೊಂದಿಗೆ ಸಂಪರ್ಕವಿದ್ದದ್ದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ.

    ಅಂತರ ಕಾಯ್ದುಕೊಳ್ಳಿ

    ಬಸವನಗುಡಿ, ಚಾಮರಾಜಪೇಟೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿರುವ ಕಾರಣ, ಈ ಪ್ರದೇಶದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಬಿಬಿಎಂಪಿ ಸದಸ್ಯ ಕಟ್ಟೆ ಸತ್ಯನಾರಾಯಣ, ಬಸವನಗುಡಿ ಪ್ರದೇಶದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಗಾಂಧಿ ಬಜಾರ್, ಹನುಮಂತನಗರ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ನರಸಿಂಹರಾಜ ಕಾಲನಿ, ತ್ಯಾಗರಾಜನಗರ ಮುಂತಾದ ಪ್ರದೇಶಗಳ ಜನರು ಸಾಮಾಜಿಕ ಅಂತರ ನಿಯಮವನ್ನು ಪಾಲನೆ ಮಾಡಬೇಕು. ಅಲ್ಲಲ್ಲಿ ಗುಂಪುಗಟ್ಟಿ ನಿಂತವರನ್ನು ಪೊಲೀಸರು ಚದುರಿಸಬೇಕು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

    ಆನೇಕಲ್​ನ ಹುಸ್ಕೂರಿನ ಎಲ್ಲಮ್ಮ ದೇವಸ್ಥಾನದ ಬಳಿಯ 46 ವರ್ಷದ ಮಹಿಳೆಗೆ ಹೃದ್ರೋಗ ಚಿಕಿತ್ಸೆಗೆ ಮೊದಲು ನಡೆಸಿದ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ಕೊಮ್ಮಘಟ್ಟದ ಬಿಡಿಎ ಫ್ಲ್ಯಾಟ್​ನಲ್ಲಿದ್ದ 59 ವರ್ಷದ ಮಹಿಳೆಗೆ ಕಿಡ್ನಿ ಚಿಕಿತ್ಸೆಗೆ ಮುನ್ನ ನಡೆಸಿದ ಪರೀಕ್ಷೆ ನಡೆಸಿದಾಗ ಕರೊನಾ ಸೋಂಕು ಇರುವುದು ಖಾತ್ರಿಯಾಗಿದೆ. ಐಎಲ್​ಐ ಸಮಸ್ಯೆಯಿಂದ ತಪಾಸಣೆಗೊಳಪಟ್ಟು ಜೂ. 6ರಂದು ಕರೊನಾ ದೃಢಪಟ್ಟಿದ್ದ 67 ವರ್ಷದ ವೃದ್ಧೆ (ಪಿ-4,851) ಜತೆಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ. ಸಂಪರ್ಕ ದೃಢಪಡದ 14 ವರ್ಷದ ಬಾಲಕಿ (ಪಿ- 4,855) ಸಂಪರ್ಕದ 22 ವರ್ಷದ ಯುವತಿಗೆ ಕೋವಿಡ್ ಖಚಿತವಾಗಿದೆ. ಜೆ.ಪಿ. ನಗರ 5ನೇ ಹಂತದ 16 ವರ್ಷದ ಬಾಲಕಿ ಮೇ 25ಕ್ಕೆ ದೆಹಲಿಯಿಂದ ವಾಪಸಾಗಿದ್ದರು, ಬಿ. ನಾರಾಯಣಪುರದ ಅಪಾರ್ಟ್​ವೆುಂಟ್ ನಿವಾಸಿ 57 ವರ್ಷದ ಮಹಿಳೆ ಜೂ. 8ಕ್ಕೆ ಮುಂಬೈನಿಂದ ವಿಮಾನದ ಮೂಲಕ ಆಗಮಿಸಿದ್ದ ಇತಿಹಾಸವಿದೆ. ಬಿಹಾರದಿಂದ ಹಿಂದಿರುಗಿದ್ದ 18 ವರ್ಷದ ಸೋಂಕಿತೆಯ ಸಂಪರ್ಕದ 16ರ ಬಾಲಕಿ ಹಾಗೂ 39 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜೂನ್ 6ರಂದು ಐಎಲ್​ಐ ಕಾರಣಕ್ಕೆ ಸೋಂಕು ಪತ್ತೆಯಾಗಿದ್ದ 61 ವರ್ಷದ ಪುರುಷನ ಸಂಪರ್ಕದ 55 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

    ಹೊಸ ಪ್ರಕರಣಗಳಲ್ಲೂ ಅನೇಕರು ಈ ಹಿಂದೆ ಐಎಲ್​ಐನಿಂದ ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಪ್ರವಾಸ ಇತಿಹಾಸ ಇಲ್ಲದ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚುತ್ತಿದೆ. ಉದ್ಯಾನನಗರಿಯಲ್ಲಿ ಒಟ್ಟು 617 ಪ್ರಕರಣ ಪತ್ತೆಯಾದಂತಾಗಿದ್ದು, ಈವರೆಗೆ 299 ಜನರು ಗುಣಮುಖರಾಗಿದ್ದಾರೆ. 290 ಸಕ್ರಿಯ ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಸೋಂಕಿತರು ಪತ್ತೆಯಾದ ಮನೆಗಳ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ತಪಾಸಣೆ ಹೆಚ್ಚಳ ಮಾಡಲಾಗುತ್ತಿದೆ, ಅಪಾರ್ಟ್​ವೆುಂಟ್ ಫ್ಲ್ಯಾಟ್​ನ ಮೇಲಿನ ಹಾಗೂ ಕೆಳಗಿನ ಫ್ಲ್ಯಾಟ್​ಗಳಲ್ಲಿ ವಾಸಿಸುವವರನ್ನೂ ಕಂಟೇನ್ಮೆಂಟ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮಹಾಂತೇಶ್ ಹತ್ಯೆ ಕೇಸಿನ ವರದಿ ಕೊಡಿ

    ಮಾಸ್ಕ್, ಕೈಗವಸು ಕಡ್ಡಾಯ: ಕರೊನಾ ಭೀತಿ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಆದೇಶಿಸಿದ್ದಾರೆ. ಉಲ್ಲಂಘಿಸಿದರೆ ದಂಡದ ಜತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಚಾಲನಾ ಸಿಬ್ಬಂದಿಗೆ ಮುಖಗವಸು, ಸ್ಯಾನಿಟೈಸರ್, ಕೈ ಗವಸು ನೀಡಲಾಗಿದೆ. ಆದರೂ ಕೆಲ ಸಿಬ್ಬಂದಿ ಮುಂಜಾಗ್ರತೆ ವಹಿಸದಿರುವುದು ಗಮನಕ್ಕೆ ಬಂದಿದೆ. ಚಾಲಕ ಹಾಗೂ ನಿರ್ವಾಹಕರು ಮುಖಗವಸು ಧರಿಸದೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ 500 ರೂ. ದಂಡ ವಿಧಿಸಲಾಗುವುದು. ಒಂದಕ್ಕಿಂತ ಹೆಚ್ಚು ಬಾರಿ ಸಿಕ್ಕಿಬಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಖಾ ತಿಳಿಸಿದ್ದಾರೆ.

    ಸಿಸಿಬಿ ಕಚೇರಿ ಸೀಲ್​ಡೌನ್: ನಕಲಿ ಜಿಪಿಎಸ್ ಸೃಷ್ಟಿಸಿ ಗ್ರಾಹಕರ ಸೋಗಿನಲ್ಲಿ ಕ್ಯಾಬ್ ಬುಕಿಂಗ್ ಮಾಡಿ ಓಲಾ ಕಂಪನಿಗೆ ವಂಚಿಸುತ್ತಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯನ್ನು ಶುಕ್ರವಾರ ಸೀಲ್​ಡೌನ್ ಮಾಡಲಾಗಿದೆ. ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಸೈಬರ್ ಕ್ರೈಂ ಪೊಲೀಸರು, ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು. ಬಳಿಕ ಆರೋಪಿಗಳ ಗಂಟಲಿನ ದ್ರವವನ್ನು ಕರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಇನ್​ಸ್ಪೆಕ್ಟರ್ ಸೇರಿ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನು ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ 48 ಗಂಟೆವರೆಗೆ ತಾತ್ಕಾಲಿಕ ಸೀಲ್​ಡೌನ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸೇಫ್ ರೂಮ್​​ ರಹಸ್ಯ!: 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಎಸ್​ಬಿಐ ಶಾಖೆಯಿಂದ ನಿಗೂಢವಾಗಿ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts