More

    ಸ್ವಚ್ಛಗೊಳ್ಳದ ಸಾರ್ವಜನಿಕ ಶೌಚಗೃಹ

    ಪಡುಬಿದ್ರಿ: ಗ್ರಾಮ ಪಂಚಾಯಿತಿ ನಿರ್ಲಕ್ಷೃದಿಂದ ಪಡುಬಿದ್ರಿ ಪೇಟೆ ಬಳಿಯ ಸಾರ್ವಜನಿಕ ಶೌಚಗೃಹ ಜನರ ಉಪಯೋಗಕ್ಕೆ ಬಾರದೆ ಮದ್ಯವ್ಯಸನಿಗಳ ತಾಣವಾಗಿದೆ.

    ಪಡುಬಿದ್ರಿ ಪೇಟೆ ಹಾಗೂ ಮಾರುಕಟ್ಟೆ ಬಳಿಯ ಸಾರ್ವಜನಿಕ ಶೌಚಗೃಹ ನಿರ್ವಹಣೆಯಿಲ್ಲದೆ ಸೊರಗಿದೆ. ಉಪಯೋಗಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಮಾರುಕಟ್ಟೆ ಬಳಿಯ ಶೌಚಗೃಹವನ್ನು ಸ್ಥಳೀಯರೇ ಸ್ವಚ್ಛಗೊಳಿಸಿದ್ದಾರೆ. ಇದನ್ನು ಐದು ವರ್ಷಗಳಿಂದ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಬಸ್ ನಿಲ್ದಾಣದಿಂದ ದೂರದಲ್ಲಿರುವ ಈ ಶೌಚಗೃಹಕ್ಕೆ ಜನ ಬಾರದ ಕಾರಣ ಆ ಸಂಸ್ಥೆ ನಿರ್ವಹಣೆ ಕೈಬಿಟ್ಟಿತು. ಬಳಿಕ ಗ್ರಾಪಂ ಮಾರುಕಟ್ಟೆಯ ಶೌಚಗೃಹ ನಿರ್ವಹಿಸುವ ಸಿಬ್ಬಂದಿ ಮೂಲಕ ಇಲ್ಲೂ ನಿರ್ವಹಣೆ ಮಾಡಲಾರಂಭಿಸಿತು. ಆದರೆ ಲಾಕ್‌ಡೌನ್ ಬಳಿಕ ಶೌಚಗೃಹಕ್ಕೂ ಲಾಕ್ ಬಿದ್ದಿದೆ.

    ಈಗ ಆರು ತಿಂಗಳು ಕಳೆದರೂ ಶೌಚಗೃಹ ಸ್ವಚ್ಛಗೊಳಿಸಿಲ್ಲ. ಬಾಗಿಲು ಮುರಿದು ದುಷ್ಕರ್ಮಿಗಳು ಮದ್ಯ ಸೇವಿಸಿ ಬಾಟಲಿಗಳನ್ನು ಶೌಚ ಗುಂಡಿಗಳಲ್ಲಿ ಎಸೆದಿದ್ದು, ಅದು ತುಂಬಿದೆ. ಶೌಚಗೃಹ ಸಮಸ್ಯೆ ಬಗ್ಗೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ಸಾರ್ವಜನಿಕ ಶೌಚಗೃಹದ ಸಮಸ್ಯೆ ಬಗ್ಗೆ ತಿಳಿದಿಲ್ಲ. ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜೆಯಲ್ಲಿದ್ದು, ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಾರುಕಟ್ಟೆ ಬಳಿಯ ಶೌಚಗೃಹ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.
    ಸತೀಶ್ ಪಡುಬಿದ್ರಿ ಗ್ರಾಪಂ ಪ್ರಭಾರ ಪಿಡಿಒ

    ಬಾರಕೂರಿನಲ್ಲೂ ಸಮಸ್ಯೆ
    ಬ್ರಹ್ಮಾವರ: 365 ದೇವಾಲಯಗಳ ನಗರ ತುಳುನಾಡ ಹಂಪೆ ಬಾರಕೂರಿನಲ್ಲಿ ಶೌಚಗೃಹ ಇಲ್ಲದೆ ಪರಿತಪಿಸುವಂತಾಗಿದೆ.
    ನಾನಾ ಭಾಗದ ಪ್ರವಾಸಿಗರು, ದೇವಸ್ಥಾನಗಳಿಗೆ ಬರುವ ಭಕ್ತರು, ವಿದ್ಯಾರ್ಥಿಗಳು ಬರುವ ಬಸ್ ನಿಲ್ದಾಣ ಬಳಿ ಶೌಚಗೃಹ ಇಲ್ಲದ ಕುರಿತು ಮಾಧ್ಯಮದಲ್ಲಿ ವರದಿ ಬಂದ ಬಳಿಕ ಶೌಚಗೃಹ ನಿರ್ಮಾಣವಾಗಿತ್ತು. ಕೆಲವು ವರ್ಷದಿಂದ ನಿರ್ವಹಣೆ ಇಲ್ಲದೆ ತೊಂದರೆಯಾಗಿದೆ. ಶೌಚಗೃಹದಲ್ಲಿ ಮದ್ಯದ ಬಾಟಲಿಗಳು, ಅನೈತಿಕ ಚಟುವಟಿಕೆಗೆ ಬಳಸುವ ವಸ್ತುಗಳು ಹರಡಿಕೊಂಡಿವೆ. ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆಯೂ ಇಲ್ಲ.

    ಉಡುಪಿ ತಾಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶೌಚಗೃಹ ಸಮಸ್ಯೆಗೆ ಇಲ್ಲಿ ಜಾಗದ ಸಮಸ್ಯೆ ಇದ್ದರೂ ಪ್ರಯತ್ನಪಟ್ಟು ಮಾಡಲಾಗಿದೆ. ಈಗ ಅದರ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
    ಬಾರಕೂರು ಸತೀಶ ಪೂಜಾರಿ ಉಡುಪಿ ತಾಪಂ ಮಾಜಿ ಅಧ್ಯಕ್ಷ

    ನಗರ ಮಧ್ಯಭಾಗದಲ್ಲಿ ರಿಕ್ಷಾ, ಟೆಂಪೋ, ಕಾರು ಚಾಲಕರು ಮತ್ತು ಪ್ರಯಾಣಿಕರಿಗೆ ಇಲ್ಲಿ ಶೌಚಗೃಹ ಇಲ್ಲದೆ ತೊಂದರೆಯಾಗುತ್ತಿದೆ. ದೂರದ ಊರಿನವರು ಈಗಿರುವ ಶೌಚಗೃಹಕ್ಕೆ ಹೋಗಿ ಅಲ್ಲಿನ ಅವ್ಯವಸ್ಥೆ ನೋಡಿ ಹಾಗೇ ಬರುತ್ತಾರೆ.
    ಮಾಧವ ಬಾರಕೂರು ಪತ್ರಿಕೆ ವಿತರಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts