More

    20 ದಿನವಾದರೂ ಶುರುವಾಗದ ಸಿಐಡಿ ತನಿಖೆ

    ಉಡುಪಿ: ಖಾಸಗಿ ಆಸ್ಪತ್ರೆ ವೈದ್ಯಕೀಯ ನಿರ್ಲಕ್ಷೃದಿಂದಾಗಿ ಮೃತಪಟ್ಟ ಆರೋಪವಿರುವ ಇಂದಿರಾ ನಗರ ಕುಕ್ಕಿಕಟ್ಟೆ ನಿವಾಸಿ ರಕ್ಷಾ(26) ಪ್ರಕರಣದ ಪ್ರಾಥಮಿಕ ವರದಿ ಘಟನೆ ನಡೆದು 20 ದಿನವಾದರೂ ಜಿಲ್ಲಾಡಳಿತ ಕೈ ಸೇರಿಲ್ಲ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರೂ ತನಿಖೆ ಇನ್ನೂ ಆರಂಭವಾಗಿಲ್ಲ.

    ಆಗಸ್ಟ್ 21ರಂದು ಮೈಗ್ರೇನ್‌ನಿಂದ ಬಳಲುತ್ತಿದ್ದ ರಕ್ಷಾ ಅವರು ತಲೆನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಸಮೀಪದ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಔಷಧ ಪಡೆದ ಬಳಿಕ ಒಂದು ಗಂಟೆಯೊಳಗೆ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಈ ಬಗ್ಗೆ ಪತಿ, ಮತ್ತು ಊರಿನ ಸ್ಥಳೀಯರು ವೈದ್ಯಕೀಯ ನಿರ್ಲಕ್ಷೃದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು.

     ಏನಾಯ್ತು ತಜ್ಞ ವೈದ್ಯರ ತನಿಖೆ?: ಸಾರ್ವಜನಿಕ ವಲಯದಲ್ಲಿ ಆಕ್ರೋಶ ತೀವ್ರಗೊಂಡ ಬಳಿಕ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ರಚಿಸಿ 4 ದಿನದೊಳಗೆ ವರದಿ ನೀಡುವಂತೆ ಸೂಚಿಸಿದ್ದರು. ಬಳಿಕ ಶಾಸಕ ಕೆ.ರಘುಪತಿ ಭಟ್, ವೈದ್ಯಕೀಯ ನಿರ್ಲಕ್ಷೃ ಪ್ರಕರಣಗಳು ಸಂಭವಿಸಿದಾಗ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ 7 ತಜ್ಞ ವೈದ್ಯರಿಂದ ತನಿಖೆ ನಡೆಸಿ 5 ದಿನದೊಳಗೆ ಪ್ರಾಥಮಿಕ ತನಿಖಾ ವರದಿಯನ್ನು ಈ ಪ್ರಕರಣದಲ್ಲಿ ಪಡೆಯಲಾಗುವುದು ಎಂದು ತಿಳಿಸಿದ್ದರು. ಅದರಂತೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಚಂದ್ರಶೇಖರ ಅಡಿಗ ನೇತೃತ್ವದಲ್ಲಿ 7 ತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ರಚಿಸಲಾಗಿದೆ. ಘಟನೆ ನಡೆದು ಇಷ್ಟು ದಿನ ಕಳೆದರೂ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡುಬಂದಿಲ್ಲ.

    ತನಿಖೆ ಕೈಗೆತ್ತಿಕೊಳ್ಳದ ಸಿಐಡಿ: ಸಿಐಡಿ ಇನ್ನೂ ತನಿಖೆ ಕೈಗೊಂಡಿಲ್ಲ. ತಂಡ ರಚನೆಯಾಗಿಲ್ಲ ಎಂದು ಅಧಿಕೃತ ಮೂಲವೊಂದು ಹೇಳಿದೆ. ಸಿಐಡಿ ತನಿಖೆ ಆರಂಭಿಸಿದ್ದಲ್ಲಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಪ್ರಾಥಮಿಕ ವಿಚಾರಣೆ, ಮಾಹಿತಿ ಕಲೆ ಹಾಕಬೇಕಿತ್ತು. ಆದರೆ ಇದುವರೆಗೆ ನಮ್ಮನ್ನು ಯಾರು ಸಂಪರ್ಕಿಸಿಲ್ಲ ಕುಟುಂಬ ತಿಳಿಸಿದೆ.

    ಟ್ವೀಟ್ ಅಭಿಯಾನ: ರಕ್ಷಾ ಸಾವಿನ ನ್ಯಾಯಕ್ಕಾಗಿ ಟ್ವೀಟ್ ಅಭಿಯಾನ ಆರಂಭಿಸಲಾಗಿದೆ. ವೈದ್ಯಕೀಯ ನಿರ್ಲಕ್ಷೃದ ವಿರುದ್ಧ ಆಕ್ರೋಶ, ಪ್ರಕರಣದ ಕ್ಷಿಪ್ರ ತನಿಖೆಗಾಗಿ ಒತ್ತಾಯಿಸಲಾಗುತ್ತಿದ್ದು, ಮಂಗಳವಾರ ಸಾವಿರಾರು ಮಂದಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ.

     ವೈದ್ಯಕೀಯ ನಿರ್ಲಕ್ಷೃ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಗೃಹ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಅಂದೇ ಸಿಐಡಿ ತನಿಖೆಗೆ ಆದೇಶಿಸಲಾಗಿದ್ದು, ಸಿಐಡಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
    -ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ

    ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ನೇಮಿಸಿದ ತಜ್ಞ ವೈದ್ಯರ ತಂಡದಿಂದ ತನಿಖೆ ನಡೆಯುತ್ತಿದೆ. ರಕ್ಷಾ ಅವರ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ವಿಧಿವಿಜ್ಞಾನ ಪ್ರಯೋಗಾಲಯ ವರದಿ ಬರಲು ಇನ್ನೂ ಎರಡು ವಾರ ಬೇಕಾಗಬಹುದು.
    – ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ

    ರಕ್ಷಾ ಅವರ ಶವ ಪರೀಕ್ಷೆಯನ್ನು ವಿಳಂಬ ಮಾಡಿರುವುದರಿಂದ ಅವರಿಗೆ ನೀಡಿದ್ದ ಔಷಧಿಯ ಕೆಮಿಕಲ್ ಅನಾಲಿಸಿಸ್ ಅಂಶ ದೊರೆಯುವುದು ಅಸಾಧ್ಯ ಎಂಬ ಅಭಿಪ್ರಾಯವಿದೆ. ಸಿಐಡಿ, ತಜ್ಞ ವೈದ್ಯರ ತಂಡಕ್ಕೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಇದುವರೆಗೆ ತನಿಖೆ ನಡೆದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿಲ್ಲ.
    – ಭಾಸ್ಕರ ಶೆಟ್ಟಿ, ಜಿಲ್ಲಾ ಹಿತರಕ್ಷಣಾ ವೇದಿಕೆ ಸಂಚಾಲಕ, ಉಡುಪಿ

    ಫೋಟೋ
    ಯುಡಿಪಿ ಸೆ.8 ರಕ್ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts