More

    ತಾಲೂಕಲ್ಲಿ ದಾಖಲಾಗಿಲ್ಲ ಮಂಗನ ಕಾಯಿಲೆ ಪ್ರಕರಣ

    ಶಿರಸಿ: ತಾಲೂಕಿನಲ್ಲಿ ಮಂಗನ ಕಾಯಿಲೆ ಇದುವರೆಗೂ ದಾಖಲಾಗಿಲ್ಲ. ಆದರೆ, ಆರೋಗ್ಯ ಇಲಾಖೆ ಜಾಗೃತ ಸ್ಥಿತಿಯಲ್ಲಿದ್ದು, ಬನವಾಸಿ ಭಾಗದ ರೈತರಿಗೆ ಉಣ್ಣೆ ಔಷಧವನ್ನು ಪ್ರತಿ ಕುಟುಂಬಕ್ಕೆ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ಹೇಳಿದರು.

    ಇಲ್ಲಿಯ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಬುಧವಾರ ಅವರು ಮಾಹಿತಿ ನೀಡಿದರು. ಬನವಾಸಿ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮಂಗ ಸತ್ತ ಪ್ರಕರಣ ಅಥವಾ ಮಾನವನಿಗೆ ಜ್ವರ ಬಂದ ಪ್ರಕರಣ ಈ ವರ್ಷ ದಾಖಲಾಗಿಲ್ಲ. ಆದರೆ, ತುರ್ತು ಪರಿಸ್ಥಿತಿಗೆ ನಾವು ಸಿದ್ಧರಾಗಿದ್ದೇವೆ. ಕೆಎಫ್​ಡಿಗೆ ಹೊಸ ಚುಚ್ಚುಮದ್ದು ಇನ್ನೂ ಇಲಾಖೆಗೆ ಬರಬೇಕಿದೆ ಎಂದರು.

    ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಕೆಎಫ್​ಡಿಯಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆ ಹಚ್ಚಿಕೊಂಡು ಹೋಗುವಂತೆ ಬನವಾಸಿ ಭಾಗದ ಕಾಡುಕಡೆ ತೆರಳುವ ಸಾರ್ವಜನಿಕರಿಗೆ ಸೂಚಿಸಿದ್ದೇವೆ. ಆಯುಷ್ ಪದ್ಧತಿಯಲ್ಲಿ ಉಣ್ಣೆ ಕಡಿಯುವುದನ್ನು ಬೇವಿನ ಎಣ್ಣೆಯಿಂದ ನಿಯಂತ್ರಿಸುವ ವಿಧಾನವಿದೆ ಎಂದರು.

    ಕೃಷಿ ಇಲಾಖೆ ಅಧಿಕಾರಿ ಮಧುಕರ ನಾಯ್ಕ ಸಭೆಗೆ ಮಾಹಿತಿ ನೀಡಿ, ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದುದರಿಂದ ಬೆಳೆ ಹಾನಿ ಅಧಿಕ ಪ್ರಮಾಣದಲ್ಲಿ ಆಗಿದೆ. ಈಗ ಬರ ಪರಿಹಾರ ಮಂಜೂರಾಗಿದ್ದು, ತಾಲೂಕಿನ 9783 ರೈತರಿಗೆ 1.45 ಕೋಟಿ ರೂ. ಹಣ ಜಮಾ ಆಗಿದೆ. ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಹಣ ಬಿಡುಗಡೆಯಾಗಿದ್ದು, ರೈತರು ಯಂತ್ರೋಪಕರಣ ಖರೀದಿಸುವುದಾದಲ್ಲಿ ಕೃಷಿ ಇಲಾಖೆಯನ್ನು ಸಂರ್ಪಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ 78 ಲಕ್ಷ ರೂ. ಹಣ ತಾಲೂಕಿಗೆ ಮಂಜೂರಾಗಿದೆ ಎಂದರು.

    ಉಪತಹಸೀಲ್ದಾರ್ ರಮೇಶ ಹೆಗಡೆ ಮಾಹಿತಿ ನೀಡಿ, ಏಪ್ರಿಲ್​ನಲ್ಲಿ ನಡೆಯಬಹುದಾದ ಲೋಕಸಭೆ ಚುನಾವಣೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಬನವಾಸಿಯ ಕದಂಬೋತ್ಸವ ಫೆ. 24ರಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, 5, 8 ಮತ್ತು 9ನೇ ತರಗತಿಗಳಿಗೆ ಸೇತುಬಂಧ ಪರೀಕ್ಷೆ ಪರೀಕ್ಷಾ ಮಂಡಳಿಯಿಂದಲೇ ನಡೆಯಲಿದೆ. ಶಾಲೆಗಳಿಗೆ ಅಗತ್ಯವಿರುವಲ್ಲಿ ಹೊಸ ಕೊಠಡಿಗಳ ಮಂಜೂರಾಗಿದ್ದು, ಬಿಸಲಕೊಪ್ಪ ಶಾಲೆಯ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ಆಡಳಿತಾಧಿಕಾರಿ ಬಿ.ಪಿ. ಸತೀಶ ಇದ್ದರು.

    ಇಲಾಖೆಗಳು ಬಿಡುಗಡೆ ಆದ ಅನುದಾನ ಯಾವುದೇ ಕಾರಣಕ್ಕೆ ಬಳಕೆ ಆಗದೇ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ಹಣ ವಾಪಸ್ ಹೋದರೆ ಬರುವ ವರ್ಷ ಅನುದಾನ ಕಡಿಮೆ ಬರಲಿದೆ.

    ಬಿ.ಪಿ. ಸತೀಶ, ತಾಪಂ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts