More

    ಪುಂಡಾಲುವಿಗೆ ಇಲ್ಲ ಸಂಪರ್ಕ ಸೇತುವೆ: ದ್ವೀಪದಂತಾಗುವ ಭಂಡಾರಬೆಟ್ಟು, ಶಿವರಮಡಿ

    ನರೇಂದ್ರ ಹೆಬ್ರಿ: ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಸಲ್‌ಪೀಡಿತ ಕಬ್ಬಿನಾಲೆ ಗ್ರಾಮದ ಜಡ್ಡು ಗುಳೆಲ್ ರಸ್ತೆಗೆ ಪುಂಡಾಲು ಎಂಬಲ್ಲಿ ಹರಿಯುವ ಹೊಳೆಗೆ ಸೇತುವೆಯಿಲ್ಲದ ಕಾರಣ ಸಮಸ್ಯೆಯಾಗಿದೆ. ಈ ಭಾಗದ ಜನ ಮಳೆಗಾಲದಲ್ಲಿ ಕಾಲುಸಂಕದ ಮೂಲಕ ಕೆಲವು ಕಿ.ಮೀ. ಸುತ್ತು ಬಳಸಿ ಮುನಿಯಾಲು ಪೇಟೆ, ಬಸ್ ನಿಲ್ದಾಣ, ಶಾಲೆಗೆ ತಲುಪುವಂತಾಗಿದೆ.

    ಸೇತುವೆ ನಿರ್ಮಿಸುವಂತೆ 40 ವರ್ಷಗಳಿಂದ ಜನ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭ ಆಶ್ವಾಸನೆ ನೀಡಿದವರು ಮತ್ತೆ ಬರುವುದು ಇನ್ನೊಂದು ಚುನಾವಣೆಗೆ. ಈ ಪ್ರದೇಶ ಮಳೆಗಾಲದಲ್ಲಿ ಸುತ್ತಲೂ ದ್ವೀಪದಂತೆ ಹಳ್ಳ, ಕೊಳ್ಳಗಳು ತುಂಬಿ ಪುಂಡಾಲು, ಭಂಡಾರಬೆಟ್ಟು, ಶಿವರಮಡಿ, ಜಾರ್ಮೆಟ್ಟು ಪ್ರದೇಶಕ್ಕೆ ರಸ್ತೆ ಸಂಪರ್ಕವೇ ಕಡಿತಗೊಳ್ಳುತ್ತದೆ. ಈ ಭಾಗದಲ್ಲಿ ಮಲೆಕುಡಿಯರು ಸೇರಿ 25 ಕುಟುಂಬಗಳ 120ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.

    ಸೇತುವೆ ಸಮಸ್ಯೆಯಿಂದ ಮಳೆಗಾಲದಲ್ಲಿ ಹೈನುಗಾರರು ಡೇರಿಗೆ ಹಾಲು ನೀಡಲು ಸಾಧ್ಯವಾಗದೆ ಅನೇಕರು ದನಕರುಗಳನ್ನು ಮಾರಿರುವ ನಿದರ್ಶನವೂ ಇದೆ. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಬಂದಾಗ ಕೊಂಡೊಯ್ಯಲು ರಸ್ತೆಯೇ ಇಲ್ಲ. ಆರು ತಿಂಗಳ ಮಟ್ಟಿಗೆ ಬೇಕಾಗುವ ದಿನೋಪಯೋಗಿ ವಸ್ತುಗಳನ್ನು ಶೇಖರಿಸಿ ಇಡಬೇಕಾಗುತ್ತದೆ. ಹೆಚ್ಚಿನವರು ಕೂಲಿ ಕಾರ್ಮಿಕರಾಗಿರುವುದರಿಂದ ಇದು ಕಷ್ಟವಾಗುತ್ತಿದೆ. ಸೇತುವೆ ನಿರ್ಮಾಣವಾದರೆ ಕೃಷಿ ಚಟುವಟಿಕೆಗೆ ಪ್ರಯೋಜನವಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ.

    ಮಳೆಗಾಲದಲ್ಲಿ ಸಂಚರಿಸಲು ಸ್ಥಳೀಯರು ಅಡಕೆ ಮರದಿಂದ ಕಾಲುಸಂಕ ನಿರ್ಮಿಸುತ್ತಾರೆ. ಮಳೆ ಪ್ರಮಾಣ ಕಡಿಮೆಯಾದರೂ ಡಿಸೆಂಬರ್‌ವರೆಗೆ ಈ ಹೊಳೆಯಲ್ಲಿ ನೀರು ರಭಸವಾಗಿರುತ್ತದೆ. ಇದರಿಂದ ಹೊಳೆ ದಾಟುವುದು ಕಷ್ಟ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಿರುವ ಕಾರಣ ನದಿ ದಾಟಬಹುದು. ಇಲ್ಲಿ ಅನೇಕರು ಕೃಷಿ, ಕೂಲಿ, ಪೂಜೆ ಮತ್ತು ಅಡುಗೆ ವೃತ್ತಿ ಮಾಡುವವರು ಎಲ್ಲರೂ ಹೊರ ಪ್ರದೇಶಗಳನ್ನು ಅವಲಂಬಿತರು. ಸಂಬಂಧಿತ ಇಲಾಖೆ, ಶಾಸಕರು, ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಜನ ಒತ್ತಾಯಿಸಿದ್ದಾರೆ.

    ಆರೋಗ್ಯ ಹದಗೆಟ್ಟರೆ ಅಪಾಯ: ಶಿವರಮಡಿ ಎಂಬಲ್ಲಿ ಎರಡು ಹಳ್ಳಗಳು ಒಟ್ಟಾಗಿ ಪುಂಡಾಲು ಎಂಬಲ್ಲಿ ದೊಡ್ಡ ಗಾತ್ರದಲ್ಲಿ ಹರಿಯುತ್ತದೆ. ಮಳೆಗಾಲದಲ್ಲಿ ಇಲ್ಲಿನ ಜನರ ಆರೋಗ್ಯ ಹದಗೆಟ್ಟರೆ ದೇವರೇ ಗತಿ. ವೃದ್ಧರ ಪರಿಸ್ಥಿತಿಯಂತೂ ಹೇಳತೀರದು. ಅನಿವಾರ್ಯವಾಗಿ ಕಾಲುಸಂಕದ ಮೂಲಕ ಹೊತ್ತೊಯ್ಯಬೇಕಾಗುತ್ತದೆ. ಶಾಲಾ ಮಕ್ಕಳನ್ನೂ ಇದೇ ಅಪಾಯಕಾರಿ ಕಾಲುಸಂಕದ ಮೂಲಕವೇ ಆಚೀಚೆ ಕಳುಹಿಸಬೇಕು. ಕೆಲವೊಮ್ಮೆ ಮಕ್ಕಳು ಜಾರಿ ಬಿದ್ದ ಘಟನೆಯೂ ನಡೆದಿದೆ. ಗ್ಯಾಸ್ ಮತ್ತು ಪಡಿತರ ವಸ್ತುಗಳನ್ನು ಸಾಗಿಸುವುದೂ ಕಷ್ಟಕರ. ನೀರಿನ ರಭಸಕ್ಕೆ ಕಾಲುಸಂಕ ಕೊಚ್ಚಿಕೊಂಡು ಹೋದರೆ ಮತ್ತೆ ಸಂಪರ್ಕ ಶಾಶ್ವತ ಕಡಿತಗೊಳ್ಳುತ್ತದೆ. ನಮ್ಮ ಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡಿದ್ದಾರೆ.

    ಶಾಲಾ ಸಂಪರ್ಕ ಕಡಿತ:ಸೇತುವೆ ಸಮಸ್ಯೆಯಿಂದ ಇಲ್ಲಿನ ಮಕ್ಕಳಿಗೆ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ. ಅನೇಕ ಮಕ್ಕಳು ಕಬ್ಬಿನಾಲೆ ಮತ್ತು ಹೆಬ್ರಿಗೆ ವಿದ್ಯಾರ್ಜನೆಗೆ ಹೋಗುತ್ತಾರೆ. ಮಳೆಗಾಲದಲ್ಲಿ ಶಾಲೆಗೆ ರಜೆ ಘೋಷಣೆಯಾದರೂ ವಿದ್ಯುತ್, ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳಿಗೆ ಮಾಹಿತಿ ತಲುಪುತ್ತಿಲ್ಲ. ಜತೆಗೆ ಕಾಡುಪ್ರಾಣಿಗಳಾದ ಕರಡಿ, ಕಾಡುಕೋಣದ ಹಾವಳಿ ಬೇರೆ. ಕೆಲವೊಮ್ಮೆ ಶಾಲೆಗೆ ಹೋಗಿ ವಾಪಸ್ ಬರುವಾಗ ರಾತ್ರಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಕಷ್ಟಗಳ ಬಗ್ಗೆ ಗಮನ ಸೆಳೆದಿದ್ದಾರೆ.

    ಪ್ರಯೋಜನವಿಲ್ಲದ ಕಾಲುಸಂಕ:ಶಿವರಮಡಿ ಎಂಬಲ್ಲಿ 2012-13ನೇ ಸಾಲಿನ ನಕ್ಸಲ್ ಬಾಧಿತ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ಕ್ರಿಯಾಯೋಜನೆಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಖಾಸಗಿಯವರ ಜಮೀನಿನಲ್ಲಿ ಕಾಲುಸಂಕ ನಿರ್ಮಿಸಿದ್ದು, ಇದು ಸಾರ್ವಜನಿಕರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ.

    ಇಲ್ಲಿನ ರಸ್ತೆ ಸಂಪರ್ಕ ಸಂಬಂಧಿಸಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕರೊನಾ ಕಾರಣದಿಂದಗಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನ ಮಂಜೂರಾಗಿಲ್ಲ. ಆದಷ್ಟು ಬೇಗ ಇದರ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇವೆ.

    ಜ್ಯೋತಿ ಹರೀಶ್,ಜಿಲ್ಲಾ ಪಂಚಾಯಿತಿ ಸದಸ್ಯರು

    ಬಾಲ್ಯದಿಂದಲೂ ಇದೇ ಪರಿಸರದಲ್ಲಿ ಬೆಳೆದವನು. ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತೇವೆ. ಅನೇಕ ಮಂದಿ ಕಾಲುಸಂಕದಲ್ಲಿ ಸಂಚರಿಸಬೇಕಿದೆ. ಅಪಾಯ ಆದರೂ ಅನಿವಾರ್ಯವಾಗಿ ಸಾಹಸ ಮಾಡಿ ಜೀವನ ಸಾಗಿಸಬೇಕಿದೆ.

    ರಘುರಾಮ್ ಗೌಡ, ಸ್ಥಳೀಯ ನಿವಾಸಿ

    ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಚುನಾವಣಾ ಸಂದರ್ಭ ಸೇತುವೆ ನಿರ್ಮಾಣದ ಬಗ್ಗೆ ಕೇವಲ ಭರವಸೆ ಮಾತ್ರ ಸಿಗುತ್ತದೆ. ಅನೇಕ ಬಾರಿ ಗ್ರಾಮಸಭೆಯಲ್ಲೂ ಈ ಬಗ್ಗೆ ಚರ್ಚೆಯಾದರೂ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

    ಮುರಳೀಧರ ಭಟ್, ನಿವೃತ್ತ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts