More

    ರಕ್ತದಾನಿಗಳಿಗಿಲ್ಲ ಕರೊನಾ ಸೋಂಕು ಭೀತಿ

    | ಅಕ್ಕಪ್ಪ ಗಂ.ಮಗುದಮ್ಮ ಬೆಳಗಾವಿ

    ಎಲ್ಲೆಡೆ ಭಯದ ವಾತಾವರಣ, ಮಾರಣಾಂತಿಕ ಕರೊನಾ ವೈರಸ್ ಸೋಂಕಿನ ಭೀತಿ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ರಕ್ತ ಸಂಗ್ರಹಿಸಲು ಯಾವುದೇ ಅಡೆ-ತಡೆಗಳು ಉಂಟಾಗಿಲ್ಲ.

    ಗ್ರಾಮೀಣ ಭಾಗದ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದರಿಂದ ಭಾರತೀಯ ರೆಡ್‌ಕ್ರಾಸ್‌ನ ಬೆಳಗಾವಿ ಶಾಖೆಯ ರಕ್ತ ನಿಧಿ ಕೇಂದ್ರಕ್ಕೆ ರಕ್ತದ ಕೊರತೆ ಉಂಟಾಗಿಲ್ಲ.

    ಮಹಾಮಾರಿ ಕರೊನಾಗೆ ಹೆದರಿರುವ ಬೆಳಗಾವಿ ಜಿಲ್ಲೆಯ ಬಹುತೇಕ ಜನರು ಹೋಟೆಲ್ ಹಾಗೂ ಗುಡಿ-ಗುಂಡಾರಗಳತ್ತ ಸುಳಿಯುತ್ತಿಲ್ಲ. ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಸಂತೆ, ಜಾತ್ರೆ, ಸಭೆ-ಸಮಾರಂಭ ಹಾಗೂ ನೂರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಸಿನಿಮಾ ನಟರು ಹಾಗೂ ರಾಜಕೀಯ ಪ್ರತಿನಿಧಿಗಳ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಮಠ-ಮಂದಿರಗಳ ವತಿಯಿಂದ ಆಯೋಜಿಸುತ್ತಿದ್ದ ರಕ್ತದಾನ ಉಚಿತ ಶಿಬಿರಗಳೂ ಸ್ಥಗಿತಗೊಂಡಿವೆ.

    ಕರ್ಫ್ಯೂ ವೇಳೆ ರಕ್ತದಾನ: ರಕ್ತದಾನ ಶಿಬಿರಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡವರು ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಸೂಕ್ತ ಪ್ರಮಾಣದಲ್ಲಿ ರಕ್ತ ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಬಾರದು ಎಂದು ರಕ್ತನಿಧಿ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಿನ್ನೆ ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಬೆಂಬಲ ನೀಡಿ ಮನೆಯಿಂದ ಯಾರೂ ಹೊರಬರಲಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ವಿದ್ಯಾವಂತ ಯುವಕರು ಯಾವುದೇ ಆತಂಕಕ್ಕೆ ಒಳಗಾಗದೆ ರಕ್ತದಾನ ಮಾಡಿ ಮಾದರಿಯಾದರು.

    ಖಾಸಗಿ ಬ್ಲಡ್ ಬ್ಯಾಂಕ್ ಬೆಂಬಲ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 11 ಬ್ಲಡ್ ಬ್ಯಾಂಕ್, 25 ಖಾಸಗಿ ಬ್ಲಡ್ ಬ್ಯಾಂಕ್‌ಗಳಿವೆ. ಅವುಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಮಾದರಿ ರಕ್ತ ಲಭ್ಯವಾಗುತ್ತಿದೆ. ಬೆಳಗಾವಿ ಜಿಲ್ಲೆಗೆ ಪ್ರತಿ ತಿಂಗಳು 150ರಿಂದ 160 ಯೂನಿಟ್ ರಕ್ತದ ಅಗತ್ಯವಿದೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಸ್ಥಗಿತವಾಗಿದ್ದರಿಂದ ಅಗತ್ಯ ರಕ್ತ ಸಂಗ್ರಹಕ್ಕೆ ಖಾಸಗಿ ಬ್ಲಡ್ ಬ್ಯಾಂಕ್ ಸಿಬ್ಬಂದಿ ಹಳ್ಳಿಗಳತ್ತ/ ಮುಖ ಮಾಡಿದ್ದಾರೆ. ಮಾರ್ಚ್ ತಿಂಗಳಲ್ಲಿ 157 ಯೂನಿಟ್ ರಕ್ತ ಸಂಗ್ರಹಿಸಿದ್ದಾರೆ.

    ಹಳ್ಳಿಯಲ್ಲಿ ಸಂಚಾರಿ ರಕ್ತನಿಧಿ ಕೇಂದ್ರ ಸಂಚಾರ

    ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರೊನಾ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸಂಚಾರಿ ರಕ್ತನಿಧಿ ಕೇಂದ್ರದ ಮೂಲಕ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅಗತ್ಯವಿದ್ದಷ್ಟು ರಕ್ತ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ದಿಢೀರ್ ಕಾಣಿಸಿಕೊಂಡ ಕರೊನಾ ಸೋಂಕು ಭೀತಿಯ ನಡುವೆಯೂ ಹಳ್ಳಿಯ ಜನರು ಕೆಲ ದಿನಗಳಿಂದ ಸಂಚಾರಿ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ರಕ್ತ ಕೊರತೆಯ ಯಾವುದೇ ಲಕ್ಷಣ ಕಂಡುಬಂದಿಲ್ಲ. ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ರಕ್ತ ಸಂಗ್ರಹದ ಮೇಲೆ /ಯಾವುದೇ ದುಷ್ಪರಿಣಾಮ ಬೀರುತ್ತಿಲ್ಲ ಎಂದು ಅಧಿಕಾರಿಗಳು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳಲ್ಲಿ ಆಯೋಜಿಸುತ್ತಿದ್ದ ಉಚಿತ ರಕ್ತದಾನ ಶಿಬಿರ ಸ್ಥಗಿತಗೊಂಡಿದೆ. ಹೀಗಾಗಿ ಖಾಸಗಿ ಬ್ಲಡ್ ಬಾಂಕ್‌ಗಳ ಸಿಬ್ಬಂದಿ ಗ್ರಾಮೀಣ ಭಾಗಕ್ಕೆ ತೆರಳಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಯುವಕರನ್ನು ಒಗ್ಗೂಡಿಸುತ್ತಿದ್ದಾರೆ. ಅವರ ರಕ್ತ ಸಂಗ್ರಹಿಸಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಬ್ಲಡ್ ಬ್ಯಾಂಕ್‌ಗೆ ಪೂರೈಸಲಾಗುತ್ತಿದೆ. ಸದ್ಯ ರಕ್ತದ ಕೊರತೆ ಇಲ್ಲ.
    | ಡಾ. ಶ್ರೀದೇವಿ ಜಿಲ್ಲಾ ಬ್ಲಡ್ ಬ್ಯಾಂಕ್ ಮೆಡಿಕಲ್ /ಆಫೀಸರ್




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts