More

    ಯಾವ ಮಠಾಧೀಶರಿಗೂ ಧಮ್ಕಿ ಹಾಕಿಲ್ಲ; ಈಶ್ವರಪ್ಪಗೆ ಅನುಮಾನವಿದ್ರೆ ರೇಣುಕಾಂಬಾ ಸನ್ನಿಧಿಯಲ್ಲಿ ಗಂಟೆ ಬಾರಿಸಲಿ

    ಸೊರಬ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಬೆಂಬಲ ನೀಡಬಾರದು ಎಂದು ಮಠಾಧೀಶರು, ಸ್ವಾಮೀಜಿಗಳಿಗೆ ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದೇನೆ ಎಂದು ನನ್ನ ಮೇಲೆ ಈಶ್ವರಪ್ಪ ಅವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ತಾಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಿಗೆ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರ ಜತೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
    ತಮ್ಮ ಮಗನಿಗೆ ಟಿಕೆಟ್‌ಸಿಗಲಿಲ್ಲ ಎಂದು ಹತಾಶರಾಗಿ ಈಶ್ವರಪ್ಪ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ವಿಷಯವಾಗಿ ನಾನು ಯಾವ ಗುರುಗಳು, ಮಠಾಧೀಶರಿಗೂ ಕರೆ ಮಾಡಿಲ್ಲ. ಅವರ ಬಗ್ಗೆ ಚರ್ಚಿಸಿಲ್ಲ. ಅನುಮಾನವಿದ್ದರೆ ಈ ವಿಷಯದಲ್ಲಿ ಕೆ.ಎಸ್.ಈಶ್ವರಪ್ಪ ಅವರು ರೇಣುಕಾಂಬೆ ಸನ್ನಿಧಿಗೆ ಬಂದು ಗಂಟೆ ಹೊಡೆಯಲಿ. ಅದಕ್ಕೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
    ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ದೇವರು ಈಶ್ವರಪ್ಪ ಅವರಿಗೆ ಬುದ್ಧಿ ಕೊಡಲಿ. ಇಲ್ಲದಿದ್ದರೆ ಮತದಾರರೇ ಎಚ್ಚೆತ್ತು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
    ಶ್ರೀ ರೇಣುಕಾಂಬಾ ದೇವಿಗೆ ಪೂಜೆ ಸಲ್ಲಿಸುವ ಮೂಲಕ ತಾಲೂಕಿನಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದೇನೆ. ಬರಗಾಲ ದೂರವಾಗಿ, ದೇಶ ಅಭಿವೃದ್ಧಿಯಾಗಲಿ ಎಂದು ದೇವಿಯನ್ನು ಬೇಡಿದ್ದೇನೆ. ಬಿಜೆಪಿಯಿಂದ ಎಸ್.ಬಂಗಾರಪ್ಪ, ಮಧು ಬಂಗಾರಪ್ಪ ಅವರು ಸ್ಪರ್ಧಿಸಿದಾಗ ಬಿಜೆಪಿ ಕಾರ್ಯಕರ್ತರು ಅವರ ಪರ ಕೆಲಸ ಮಾಡಿದ್ದಾರೆ. ಅಂತಹ ಕಾರ್ಯಕರ್ತರಿಗೆ ಅಧಿಕಾರದ ಮದದಿಂದ ಚೇಲಾಗಳು ಎಂದು ಮಾತನಾಡುವ ಮಧು ಬಂಗಾರಪ್ಪ ಅವರಿಗೆ ದೇವರು ಒಳಿತು ಮಾಡುತ್ತಾನೆಯೇ? ಎಂದು ಪ್ರಶ್ನಿಸಿದರು.
    ಬಿಜೆಪಿಗೆ ಮತ ಹಾಕಿದರೆ ಮಹಿಳೆಯರಿಗೆ ಬರುವ 2 ಸಾವಿರ ರೂ. ನಿಂತು ಹೋಗುತ್ತದೆ ಎಂದು ಮತದಾರರನ್ನು ಅಡ್ಡದಾರಿಗೆ ಎಳೆಯಲಾಗುತ್ತಿದೆ. ಮತದಾನದ ಪಾವಿತ್ರ್ಯತೆ ಅರಿತು ಅಭಿವೃದ್ಧಿ ಪರ ಕೆಲಸ ಮಾಡುವವರಿಗೆ ಮತ ಚಲಾಯಿಸಬೇಕು ಎಂದು ಕೋರಿದರು.
    ಸರ್ಕಾರ ಬಂದು 9 ತಿಂಗಳಾದರೂ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ. ಬರಗಾಲಕ್ಕೆ ಪರಿಹಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿ. ಸೊರಬ ಸೇರಿದಂತೆ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗಾಗಿ ಬಿಡುಗಡೆಗೊಂಡ 36 ಕೋಟಿ ರೂ. ಅನುದಾನ ಕಾಂಗ್ರೆಸ್ ಬಂದಮೇಲೆ ವಾಪಾಸ್ ಹೋಗಿದೆ. ಇದುವರೆಗೂ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಈಡಿಗ ಸಮಾಜ ಅಭಿವೃದ್ಧಿಗೆ ಬಿಜೆಪಿ ಸಾಕಷ್ಟು ಅನುದಾನ ನೀಡಿದೆ. ತಾಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
    ತಾಲೂಕು ಬಿಜೆಪಿ ಮಂಡಲದ ಕಾರ್ಯದರ್ಶಿ ಶಿವಕುಮಾರ್, ಜೆಡಿಎಸ್ ಮುಖಂಡ ಕೆ.ಅಜ್ಜಪ್ಪ, ಗುರುಕುಮಾರ್ ಪಾಟೀಲ್ ಮಾತನಾಡಿದರು. ಸೊರಬದ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಿ.ವೈ.ರಾಘವೇಂದ್ರ ಬಳಿಕ ತಾಲೂಕಿನ ಕಡಸೂರು, ಉಳವಿ, ಹೆಸರಿ ಇತರೆ ಕಡೆ ಕಾರ್ಯಕರ್ತರ ಸಭೆ ನಡೆಸಿದರು.
    ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು.ಎಂ.ತಲ್ಲೂರು, ತಾಲೂಕು ಜೆಡಿಎಸ್ ಅಧ್ಯಕ್ಷ ಗಣಪತಿ, ಪ್ರಮುಖರಾದ ಸದಾನಂದಗೌಡ ಕಡಸೂರು, ವಿಜೇಂದ್ರ ಪಾಟೀಲ್, ನಿರಂಜನ ಕುಪ್ಪಗಡ್ಡೆ, ದೇವೇಂದ್ರಪ್ಪ, ಎಂ.ಡಿ.ಉಮೇಶ್, ಎ.ಎಲ್.ಅರವಿಂದ್, ಪ್ರಕಾಶ್ ತಲಕಾಲಕೊಪ್ಪ, ರಾಜು ಕೆಂಚಿಕೊಪ್ಪ, ಹೊಳೆಯಮ್ಮ, ವಸುಂಧರ ಭಟ್, ಹುಚ್ಚಪ್ಪ, ಮಾಲತೇಶ್, ಲಕ್ಷ್ಮಣ್, ರಾಜಶೇಖರ್ ಗಾಳಿಪುರ, ವಿನಯ್ ಶೆರ್ವಿ, ಆಶಿಕ್, ಪ್ರಸನ್ನಶೇಟ್ ಇತರರಿದ್ದರು.

    ಗುದ್ದಲಿ ಗೋಪಾಲಕೃಷ್ಣ
    ಬಿಜೆಪಿ ಅಧಿಕಾರದಲ್ಲಿದ್ದಾಗ ಆರಂಭವಾಗ ಕೆಲಸಗಳಿಗೆ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮತ್ತೆ ಭೂಮಿ ಪೂಜೆ ಮಾಡುತ್ತಿರುವುದು ಹಾಸ್ಯಾಸ್ಪದ. ಅವರು ಗುದ್ದಲಿ ಗೋಪಾಕೃಷ್ಣರಾಗುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts