More

    ರೈತರಿಗಿಲ್ಲ ದರ ಹೆಚ್ಚಳದ ಲಾಭ

    ಗದಗ: ಜಿಲ್ಲೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಉಳ್ಳಾಗಡ್ಡಿ ಬೆಲೆ 80ರಿಂದ 100 ರೂಪಾಯಿ ತಲುಪಿದೆ. ಉಳ್ಳಾಗಡ್ಡಿ ಬೆಳೆಗಾರರಿಗೆ ದರ ಏರಿಕೆಯಿಂದ ಎಷ್ಟು ಲಾಭವಾಗಿದೆಯೋ ಗೊತ್ತಿಲ್ಲ. ಆದರೆ, ಉಳ್ಳಾಗಡ್ಡಿ ಖರೀದಿದಾರರು ಮತ್ತು ಚಿಲ್ಲರೆ ಮಾರುಕಟ್ಟೆ ವ್ಯಾಪಾರಿಗಳಿಗಂತೂ ಡಬಲ್ ಧಮಾಕ್ ತಂದಿದೆ.

    ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಾಸರಿ ಕ್ವಿಂಟಾಲ್​ಗೆ ಕನಿಷ್ಠ 600ರಿಂದ ಗರಿಷ್ಠ 4000 ರೂ. ದರದಲ್ಲಿ ಉಳ್ಳಾಗಡ್ಡಿ ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಕೇಳಿ ಹೌಹಾರುವಂತಿದೆ. ಸಾಧಾರಣ ಗಡ್ಡಿಗೆ ಪ್ರತಿ ಕೆಜಿಗೆ 80ರಿಂದ 100 ರೂ. ದರವಿದೆ. ಇಷ್ಟು ಹಣ ತೆತ್ತು ಖರೀದಿಸುವ ಗಡ್ಡಿ ಹಸಿಯಾಗಿರುವುದರಿಂದ ಒಂದೆರಡು ದಿನಗಳ ನಂತರ ಕೆಲವು ಕೊಳೆತು ಹೋಗುತ್ತಿವೆ. ಚಿಲ್ಲರೆ ಮಾರುಕಟ್ಟೆ ವ್ಯಾಪಾರಿಗಳು ಸಾಧಾರಣ ಗಡ್ಡಿಯನ್ನು ಪ್ರತಿ ಕ್ವಿಂಟಾಲ್​ಗೆ 1000-1500 ರೂ.ಗೆ ಖರೀದಿಸಿ ಚಿಲ್ಲರೆ ವಹಿವಾಟಿನಲ್ಲಿ ಪ್ರತಿ ಕೆಜಿಗೆ 100 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಉಳ್ಳಾಗಡ್ಡಿ ದರ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿರುವುದರಿಂದ ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರಿಗೆ ತಕ್ಕ ಮಟ್ಟಿಗೆ ಇದರ ಲಾಭ ದೊರೆತಿದೆ ಎಂಬುದು ಸಮಾಧಾನದ ಸಂಗತಿಯಾದರೂ ಉಳ್ಳಾಗಡ್ಡಿ ವ್ಯಾಪಾರಸ್ಥರು ಮತ್ತು ಚಿಲ್ಲರೆ ಮಾರಾಟಗಾರರಂತೂ ರೈತರಿಗಿಂತ ದುಪ್ಪಟ್ಟು ಲಾಭ ಗಳಿಸಿದ್ದಾರೆ.

    ರೈತರಿಗೆ ಲಾಭ ಇಲ್ಲ: ಗದಗ ತಾಲೂಕಿನಲ್ಲಿ 9,500 ಹೆಕ್ಟೇರ್, ಮುಂಡರಗಿ 5,000 ಹೆಕ್ಟೇರ್, ನರಗುಂದ 1700 ಹೆಕ್ಟೇರ್, ರೋಣ 9500 ಹೆಕ್ಟೇರ್ ಹಾಗೂ ಶಿರಹಟ್ಟಿ 6,500 ಹೆಕ್ಟೇರ್ ಸೇರಿ ಜಿಲ್ಲೆಯಲ್ಲಿ ಅಂದಾಜು 32,000 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿದೆ. ಈ ಪೈಕಿ ಇಳುವರಿ ಬರುವ ಸಮಯದಲ್ಲಿ ಅಕಾಲಿಕವಾಗಿ ಸುರಿದ ಮಳೆ ಹಾಗೂ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ 16 ಸಾವಿರ ಹೆಕ್ಟೇರ್​ನಷ್ಟು ಉಳ್ಳಾಗಡ್ಡಿ ಬೆಳೆ ಕೊಳೆತು ಹೋಗಿದೆ. ಉಳಿದಿರುವ ಗಡ್ಡಿ ಕೂಡ ಗುಣಮಟ್ಟ ಇಲ್ಲದ್ದರಿಂದ ರೈತರು ಲಾಭ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 12.88 ಕೋಟಿ ರೂ. ಮೌಲ್ಯದ ಉಳ್ಳಾಗಡ್ಡಿ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ಗುಣಮಟ್ಟದ ಉಳ್ಳಾಗಡ್ಡಿ ಬರುತ್ತಿಲ್ಲ. ನೀರಾವರಿ ಪ್ರದೇಶದಲ್ಲಿ ಬೆಳೆದ ಗಡ್ಡಿಗಳು ತೇವಾಂಶ ಹೆಚ್ಚಾಗಿ ಕೊಳೆತುಹೋಗಿವೆ. ಹೀಗಾಗಿ, ರೈತರಿಗೆ ದರ ಸಿಗುತ್ತಿಲ್ಲ. ನಾಸಿಕ್, ಪುಣೆಯಿಂದ ಗುಣಮಟ್ಟದ ಉಳ್ಳಾಗಡ್ಡಿ ಆವಕವಾಗುತ್ತಿದೆ. ಇದರಿಂದ ಸ್ಥಳೀಯ ಗಡ್ಡಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ಇದರಿಂದ ರೈತರು ನಷ್ಟ ಅನುಭವಿಸತೊಡಗಿದ್ದಾರೆ. ಸ್ಥಳೀಯ ರೈತರ ಹಿತದೃಷ್ಟಿಯಿಂದ 15 ದಿನಗಳ ಮಟ್ಟಿಗೆ ಅನ್ಯರಾಜ್ಯದ ಉಳ್ಳಾಗಡ್ಡಿಯನ್ನು ಆವಕ ಮಾಡಿಕೊಳ್ಳಬೇಡಿ ಎಂದು ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    | ಎಸ್.ಬಿ. ನ್ಯಾಮಗೌಡ

    ಕಾರ್ಯದರ್ಶಿ, ಎಪಿಎಂಸಿ ಗದಗ

    ಉಳ್ಳಾಗಡ್ಡಿ ಇಳುವರಿ

    2013-14ರಲ್ಲಿ ಜಿಲ್ಲೆಯ 34.8 ಸಾವಿರ ಹೆಕ್ಟೇರ್ ಬಿತ್ತನೆ ಪೈಕಿ 5.55 ಲಕ್ಷ ಟನ್, 2014-15ನೇ ಸಾಲಿನಲ್ಲಿ 40.3 ಸಾವಿರ ಹೆಕ್ಟೇರ್ ಬಿತ್ತನೆ ಪೈಕಿ 5.28 ಲಕ್ಷ ಟನ್ ಹಾಗೂ 2015-16ನೇ ಸಾಲಿನಲ್ಲಿ 26.5 ಸಾವಿರ ಹೆಕ್ಟೇರ್ ಬಿತ್ತನೆ ಪೈಕಿ ಕೇವಲ 1.14 ಲಕ್ಷ ಟನ್ ಉಳ್ಳಾಗಡ್ಡಿ ಉತ್ಪಾದನೆಯಾಗಿತ್ತು. 2016-17ನೇ ಸಾಲಿನಲ್ಲಿ ರೋಣ ತಾಲೂಕಿನ 17.5 ಸಾವಿರ ಸೇರಿದಂತೆ ಜಿಲ್ಲೆಯ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಉಳ್ಳಾಗಡ್ಡಿ ಹೆಕ್ಟೇರ್​ಗೆ 50 ಕ್ವಿಂಟಾಲ್​ನಂತೆ 4.25 ಲಕ್ಷ ಟನ್ ಇಳುವರಿ ಬಂದಿತ್ತು. ಕಳೆದ ವರ್ಷ 32,548 ಹೆಕ್ಟೇರ್ ಬಿತ್ತನೆಯಾಗಿತ್ತು. ಮಳೆಯ ಕೊರತೆಯಿಂದಾಗಿ ಪ್ರತಿ ಹೆಕ್ಟೇರ್​ಗೆ 3ರಿಂದ 4 ಟನ್ ಇಳುವರಿ ಬಂದಿತ್ತು. ಹೀಗಾಗಿ, ರೈತರು ಸಂಕಷ್ಟ ಅನುಭವಿಸಿದ್ದರು. 2019ರಲ್ಲಿ ಜಿಲ್ಲೆಯಲ್ಲಿ 34,175 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಇದರಲ್ಲಿ ಮಳೆ ಮತ್ತು ಪ್ರವಾಹದಿಂದ ಶೇ. 30ರಿಂದ ಶೇ. 70ರಷ್ಟು ನಷ್ಟ ಉಂಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts